ಬೆಂಗಳೂರು ನಗರದ ಸಮಸ್ಯೆ ಪರಿಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ: ಮೋಹನ್ ದಾಸರಿ

varthajala
0

 ಬೆಂಗಳೂರು: ಪ್ರತಿ ವರ್ಷ ಮಳೆಗಾಲ ಬಂದಾಗಲು ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಯಾವ ಸರ್ಕಾರ ಬಂದರೂ ರಾಜಕಾಲುವೆ ಒತ್ತುವರಿ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವುದು, ಒತ್ತುವರಿ ತೆರವು ಮಾಡದೇ ಇರುವುದು ಸಮಸ್ಯೆಗೆ ಕಾರಣ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆರೋಪಿಸಿದರು. ಕಳೆದ ಕೆಲ ವಾರಗಳ ಹಿಂದೆಯೇ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ರವರು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮುಂದಿನ ದಿನಗಳಲ್ಲಿ ಅತಿವೃಷ್ಟಿಯಿಂದ ಬೆಂಗಳೂರು ಮುಳುಗುವುದನ್ನು ತಪ್ಪಿಸಲು ಅಮೂಲ್ ಅಗ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಪತ್ರ ಬರೆದಿದ್ದರು. ಆದರೆ ಇದುವರೆಗೂ ಪತ್ರಕ್ಕೆ ಯಾವುದೇ ಉತ್ತರ ಬಂದಿಲ್ಲ. ಇದು ಸರ್ಕಾರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತನದ ಪರಮಾವಧಿ  ಎಂದು  ಆರೋಪಿಸಿದರು. 

ಬಿಜೆಪಿ ಸರ್ಕಾರ ಇದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು, ತಾವು ಸಮಸ್ಯೆಯನ್ನು ಸರಿ ಮಾಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಬ್ರಾಂಡ್ ಬೆಂಗಳೂರು ಮಾಡುವುದಾಗಿ ಹೇಳಿದ್ದರು. ಆದರೆ ಇವತ್ತು ಸಮಸ್ಯೆ ಹಾಗೇ ಉಳಿದುಕೊಂಡಿದೆ. ಡಿಕೆಶಿ ಅವರ ಬ್ರಾಂಡ್ ಬೆಂಗಳೂರು ಎಂದರೆ ಜನರ ಸಮಸ್ಯೆಗಳನ್ನು ಬಗೆಹರಿಸುವುದಲ್ಲ, ಅಭಿವೃದ್ಧಿ ಮಾಡುವುದಲ್ಲ. ಅವರ ಕಾರ್ಪೊರೇಟ್, ರಿಯಲ್ ಎಸ್ಟೇಟ್ ಮಾಫಿಯಾ ಸ್ನೇಹಿತರಿಗೆ ಸಹಕಾರ ಕೊಡುವುದು, ಮಾರುವುದಕ್ಕಷ್ಟೇ ಬ್ರಾಂಡ್ ಬೆಂಗಳೂರು ಉದ್ದೇಶ ಎಂದರು. 

ಈ ಮೊದಲು ಗರುಡ ಮಾಲ್‌ ಕೂಡ ಇದೇ ರೀತಿ ಬಿಬಿಎಂಪಿಗೆ ಲಾಭವಾಗುತ್ತದೆ ಎಂದು ಬಿಟ್ಟುಕೊಟ್ಟರು ಆದರೆ ಈಗ ಏನಾಗಿದೆ ಎನ್ನುವುದು ಗೊತ್ತಿದೆ. ಈಗಲೂ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗಿಯವರಿಗೆ ಬಿಟ್ಟುಕೊಡಲಾಗುತ್ತಿದೆ ಎಂದರು. ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿ ಯಾವ ಕೆಲಸವೂ ಆಗುತ್ತಿಲ್ಲ. ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ, ನಿಮ್ಮ ಕೈಯಲ್ಲಿ ಆಗಲ್ಲ ಎಂದರೆ ಅಧಿಕಾರದಿಂದ ಬಿಟ್ಟು ಹೋಗಿ ಎಂದು ಡಿಕೆ ಶಿವಕುಮಾರ್ ಅವರಿಗೆ ಒತ್ತಾಯಿಸಿದರು.  ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್ ಕುಮಾರ್  ಮಾತನಾಡಿ, ಮಳೆಯಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿದ್ದರೂ, ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ಈ ಸರ್ಕಾರದಲ್ಲಿ ಸಮನ್ವಯತೆ ಕಾಣುತ್ತಿಲ್ಲ, ಡಿಕೆ ಶಿವಕುಮಾರ್ ಸರ್ವಾಧಿಕಾರಿಯಂತೆ ವರ್ತಿಸಿತ್ತಿದ್ದಾರೆ ಎಂದರು. 


ಡಿಕೆ ಶಿವಕುಮಾರ್ ಅವರಿಗೆ ಮತ್ತು ಈ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ನಡೆಸುವ ಉದ್ದೇಶವೇ ಇಲ್ಲ. ಜನಪ್ರತಿನಿಧಿಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ನಗರ ಪ್ರದಕ್ಷಿಣೆ ಮಾಡಿದ್ದಾರೆ, ಆದರೆ ಏನೂ ಪ್ರಯೋಜನವಾಗಿಲ್ಲ, ಈ ರೀತಿ ಕಣ್ಣೊರಿಸುವ ತಂತ್ರಗಳನ್ನು ಬಿಟ್ಟು, 4-5 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಕ್ರಮ ತೆಗೆದುಕೊಳ್ಳಿ ಎಂದರು. 


ಬಿಜೆಪಿಯವರು ಈಗ ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಕಳೆದ 5 ವರ್ಷ ಅಧಿಕಾರ ನಡೆಸಿದಾಗ ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಈಗ ಬಿಬಿಎಂಪಿ ಚುನಾವಣೆ ಬರುತ್ತಿದೆ ಎಂದು ಪ್ರತಿಭಟನೆಗೆ ಮುಂದಾಗಿದ್ದೀರಾ ಎಂದರು.  ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ ಮೃತ್ಯುಂಜಯ ಮಾತನಾಡಿ, ಕುಪೇಂದ್ರ ರೆಡ್ಡಿ ಇಕೋ ಸ್ಪೇಸ್ ಎನ್ನುವ ಕಂಪನಿ ಕಟ್ಟಲು ರಾಜಕಾಲುವೆ ಒತ್ತುವರಿ ಮಾಡಿದ್ದರಿಂದ ಬೆಳ್ಳಂದೂರಿನಲ್ಲಿ ಪ್ರವಾಹ ಉಂಟಾಗಿತ್ತು, ಎರಡು ವರ್ಷದಿಂದ ಆ ಒತ್ತುವರಿಯನ್ನು ತೆರವು ಮಾಡಿಲ್ಲ ಎಂದರು.  ಬಾಗ್‌ಮನೆ ಟೆಕ್‌ಪಾರ್ಕ್ ಅವರು 2.5 ಕುಂಟೆ, ಪೂರ್ವ ಬಿಲ್ಡರ್ಸ್ 3 ಕುಂಟೆ, ಹ್ಯಾರಿಸ್ ನಲಪಾಡ್ ಅವರು ನಲಪಾಡ್ ಅಕಾಡೆಮಿಗಾಗಿ ರಾಜಕಾಲುವ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದರು.  ಜೂನ್-ಜುಲೈನಲ್ಲಿ ಉತ್ತಮ ಮಳೆಯಾಗಲಿದೆ, ಸರ್ಕಾರ ಈಗಲೇ ಎಚ್ಚೆತ್ತು ರಾಜಕಾಲುವೆಗಳನ್ನು ತೆರವು ಮಾಡಿ ಪ್ರವಾಹ ಆಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು. 


ಆಮ್ ಆದ್ಮಿ ಪಾರ್ಟಿ ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಮಾತನಾಡಿ, ಕಾಮಗಾರಿ, ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜಕಾಲುವೆಗಳ ಮೇಲೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರುವುದು ಸಮಸ್ಯೆಗೆ ಕಾರಣ. ಕೂಡಲೇ ಸರ್ಕಾರ ಎಚ್ಚೆತ್ತು ಸಮಸ್ಯೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವರದಿಯನ್ನು ಘನವೆತ್ತ ಮಾಧ್ಯಮಗಳು ತಮ್ಮ ಪತ್ರಿಕೆ, ಪೋರ್ಟಲ್ ಹಾಗೂ ವಾಹಿನಿಗಳಲ್ಲಿ ಪ್ರಕಟಿಸುವಂತೆ ಕೋರಿಕೆ.

ಜಗದೀಶ್ ವಿ. ಸದಂ 

ರಾಜ್ಯ ಮಾಧ್ಯಮ ಸಂಚಾಲಕರು

9591199556

9380029038

Post a Comment

0Comments

Post a Comment (0)