ಮೈಸೂರು:- ಆಧುನಿಕ ಕಾಲದ ಜನರಲ್ಲಿ ಘನತೆಯ ಬದುಕು ಕಣ್ಮರೆಯಾಗಿದೆ. ಸ್ಥಾಪಿತ ಆಭಿಪ್ರಾಯಕ್ಕೆ ಬದ್ಧರಾಗಿ ಎಲ್ಲವನ್ನೂ ಸೀಮಿತ ವ್ಯಾಪ್ತಿಯಲ್ಲಿ ನೋಡುವ ಮಟ್ಟಕ್ಕೆ ತಮ್ಮ ವ್ಯಕ್ತಿತ್ವವನ್ನು ಕುಬ್ಜಗೊಳಿಸಿಕೊಂಡಿದ್ದಾರೆ ಎಂದು ಖ್ಯಾತ ವಾಗ್ಮಿ, ಸಂಸ್ಕøತಿ ಚಿಂತಕ Prof..ಎಂ.ಕೃಷ್ಣೇಗೌಡ ವಿಷಾದ ವ್ಯಕ್ತಪಡಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಭಾನುವಾರ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ, ಕನ್ನಡ ಸಾಹಿತ್ಯ ಕಲಾಕೂಟ, ಹೊಯ್ಸಳ ಕನ್ನಡ ಸಂಘದ ವತಿಯಿಂದ ನಡೆದ ಪ್ರಕಾಶಕ ಟಿ.ಎಸ್.ಛಾಯಾಪತಿ ಸಂಸ್ಕತಿ ಪುರಸ್ಕಾರ-2024 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನರು ವ್ಯಕ್ತಿತ್ವವನ್ನು ಕುಬ್ಜರಾಗಿಸಿಕೊಂಡಿರುವ ಇಂತಹ ಸಂದರ್ಭದಲ್ಲಿ ಹಿಂದಿನವರಂತೆ ಉದಾತ್ತ ತಾತ್ವಿಕ ಚಿಂತನೆಗಳನ್ನು ಅಳವಡಿಸಿಕೊಂಡು ಬದುಕುವುದು ತುಂಬಾ ಕಷ್ಟ. ಬದುಕಿಗೆ ಬೇಕಾದ ತಾತ್ವಿಕತೆಯನ್ನಾದರೂ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಪ್ರಸ್ತುತ ಕಾಲಘಟ್ಟದಲ್ಲಿ ಎದುರಾಗಿದೆ ಎಂದರು.
ಕುವೆಂಪು, ಶಿವರಾಮ ಕಾರಂತ, ಬೇಂದ್ರೆ ಮುಂತಾದ ನವೋದಯ ಕವಿಗಳು ತಮಗೆ ಅನಿಸಿದ್ದನ್ನು ನಿಷ್ಠೂರವಾದರೂ ಸರಿ, ನೇರವಾಗಿ ಹೇಳುವ ಧೈರ್ಯ ಹೊಂದಿದ್ದರು. ಆದರೆ ಈಗಿನ ಸಾಹಿತಿಗಳಲ್ಲಿ ಆ ತರಹದ ಧೈರ್ಯ ಕಾಣಲು ಸಾಧ್ಯವಿಲ್ಲ. ಸಾಹಿತ್ಯ ಕೃತಿಗಳಿಗಿಂತ ನವೋದಯ ಕವಿಗಳ ಬದುಕು ಅತ್ಯಂತ ಘನತೆಯಿಂದ ಕೂಡಿತ್ತು. ಪಾವಿತ್ರ್ಯವಿರದ ವ್ಯಕ್ತಿಯಿಂದ ಅದ್ಭುತ ಸಾಹಿತ್ಯ ಸೃಷ್ಠಿ ಅಸಾಧ್ಯ ಎಂದು ಅವರು ನಂಬಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತಿಗಳು ಕವಿಗಿಂತ ಕಾವ್ಯ ಮುಖ್ಯ ಎಂದು ವಾದಿಸುತ್ತಾ ತಮ್ಮ ಸಮರ್ಥನೆಗೆ ಕಾವ್ಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಕೃತಿಗಳನ್ನು ಕುರಿತು ಮಾತನಾಡಿದ ಜೆಎಸ್‍ಎಸ್ ಮಹಾವಿದ್ಯಾ ಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ Prof..ಮೊರಬದ ಮಲ್ಲಿಕಾರ್ಜುನ, ಪುರಾಣ, ಚರಿತ್ರೆ, ವರ್ತಮಾನದ ಕುರಿತು ಕಲ್ಪಿತ ಭಾವನೆಗಳ ಭ್ರಮೆಯಲ್ಲಿ ಇಂದಿನ ಯುವ ಪೀಳಿಗೆ ಬದುಕುತ್ತಿದೆ. ಆದರೆ ಎಲ್ಲಾ ಕಾಲದ ಚರಿತ್ರೆ ಮತ್ತು ವಾಸ್ತವ ಅತ್ಯಂತ ಮಾನವೀಯ ಅಂತಃಕರಣದ ಬದುಕಿನೆಡೆಗೆ ನಮ್ಮನ್ನು ಮುನ್ನಡೆಸಬೇಕೆಂಬ ನಿದರ್ಶನ ಹೊಂದಿತ್ತು ಎಂಬ ಸತ್ಯವನ್ನು ತ.ಸು.ಶಾಮರಾಯ ಅವರ ಮೂರು ತಲೆಮಾರು ಕೃತಿ ತಿಳಿಸುತ್ತದೆ. ಅಲ್ಲದೇ ಇಂದು ಬಿಡುಗಡೆಗೊಂಡಿರುವ ಎಲ್ಲಾ ಕೃತಿಗಳು ಸಹ ವರ್ತಮಾನದ ತಲ್ಲಣಗಳಿಂದ ಹೊರಬರಲು ಅಗತ್ಯ ಮಾರ್ಗದರ್ಶ ನೀಡುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಸ್ಕತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ .ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ ಪ್ರಕಾಶಕ ಟಿ.ಎಸ್.ಛಾಯಾಪತಿ ಸಂಸ್ಕøತ ಪುರಸ್ಕಾರ-2024 ಪ್ರಶಸ್ತಿ ನೀಡಿ ಗೌರವಿಸಲಾಯಿತು. ತ.ಸು.ಶಾಮರಾಯ ಅವರ ಮೂರು ತಲೆಮಾರು, ಡಾ.ನೀಲಗಿರಿ ತಳವಾರ ಅವರ ನೂರಾರು ನುಡಿಗಟ್ಟುಗಳು, ಟಿ.ಎಸ್.ಲಕ್ಷ್ಮೀದೇವಿ ಅವರ ಸೃಜನಶೀಲರು, ಆರ್.ದಿಲೀಪ್ ಕುವಾರ್ ಅವರ ಶಬ್ದ ಸೋಪಾನ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಶೇಖರ್ ಮೆಡಿಕಲ್ ಫೌಂಡೇಶನ್ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆಯ ಪ್ರಕಾಶಕರಾದ ಪ್ರತಿಭಾ ಛಾಯಾಪತಿ, ಹೊಯ್ಸಳ ಕನ್ನಡ ಸಂಘದ ಕಾರ್ಯದರ್ಶಿ ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.