ಶಿಕ್ಷಕರ ನೇಮಕಕ್ಕೆ ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ: ಆಕ್ರೋಶ ಬೆನ್ನಲ್ಲೇ ಆದೇಶ ಹಿಂಪಡೆದ BBMP

varthajala
0

 ಬೆಂಗಳೂರು: ಭದ್ರತಾ ಏಜೆನ್ಸಿ ಮೂಲಕ ಶಿಕ್ಷಕರನ್ನು ನಿಯೋಜನೆ ಮಾಡುವುದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ತನ್ನ ನಿಲುವಿನಿಂದ ಹಿಂದೆ ಸರಿದಿದೆ. ಏಜೆನ್ಸಿಗೆ ನೀಡಿದ್ದ ಟೆಂಡರ್‌ ಅನ್ನು ಮಂಗಳವಾರ ರದ್ದುಪಡಿಸಿದೆ. 2024–25ನೇ ಸಾಲಿನ ಶೈಕ್ಷಣಿಕ ವರ್ಷದ ಮೇ 29ರಂದು ಆರಂಭವಾಗುತ್ತಿದ್ದು, ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ಶೈಕ್ಷಣಿಕವಾಗಿ ಉತ್ತಮ ಗೊಳಿಸಲು ಅಗತ್ಯ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಮೂಲಕ ನಿಯೋಜಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಲಯ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲು ಹೊರಡಿಸಲಾಗಿರುವ ಎಲ್ಲಾ ಟೆಂಡರ್‌ಗಳ ಕಾರ್ಯಾದೇಶಗಳನ್ನು ತತ್‌ಕ್ಷಣದಿಂದ ರದ್ದುಪಡಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮೇ 28ರಂದು ಆದೇಶ ಹೊರಡಿಸಿದ್ದಾರೆ.

ವಲಯ ಮಟ್ಟದಲ್ಲಿ ಟೆಂಡರ್‌ ಕರೆದು ಯಶಸ್ವಿ ಬಿಡ್‌ದಾರರಿಗೆ ಬಿಬಿಎಂಪಿಯ ಶಿಶುವಿಹಾರ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಶಿಕ್ಷಕರನ್ನು ನಿಯೋಜಿಸಲು ಕಾರ್ಯಾದೇಶ ನೀಡಲಾಗಿತ್ತು. ಈ ಟೆಂಡರ್‌ಗಳ ಕಾರ್ಯಾದೇಶಗಳನ್ನು ಕೂಡಲೇ ರದ್ದುಪಡಿಸಲು ಪಶ್ಚಿಮ, ದಕ್ಷಿಣ, ಪೂರ್ವ ವಲಯಗಳ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.ದಕ್ಷಿಣ ವಲಯ ಮತ್ತು ಆರ್‌.ಆರ್‌. ನಗರ ವಲಯಕ್ಕೆ ‘ಅಪಪು ಡಿಟೆಕ್ಟಿವ್ ಆ್ಯಂಡ್‌ ಸೆಕ್ಯೂರಿಟಿ ಸರ್ವೀಸ್‌’, ಪೂರ್ವ ವಲಯಕ್ಕೆ ‘ಡಿಟೆಕ್ಟ್‌ವೆಲ್ ಆ್ಯಂಡ್‌ ಸೆಕ್ಯೂರಿಟಿ ಸರ್ವಿಸ್ ಪ್ರೈವೇಟ್‌ ಲಿಮಿಟೆಡ್‌’ ಹಾಗೂ ಪಶ್ಚಿಮ ವಲಯಕ್ಕೆ ‘ಶಾರ್ಪ್ ವಾಚ್ ಇನ್‌ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ಗಳಿಗೆ ಹೊರಗುತ್ತಿಗೆ ಶಿಕ್ಷಕರನ್ನು ಒದಗಿಸಲು ಕಾರ್ಯಾದೇಶ ನೀಡಲಾಗಿತ್ತು.

ಆದೇಶವನ್ನು ತುಷಾರ್ ಗಿರಿನಾಥ್ ಅವರು ಸಮರ್ಥಿಸಿಕೊಂಡಿದ್ದರು. ಏಜೆನ್ಸಿಗಳು ಭದ್ರತೆ ಮತ್ತು ಪತ್ತೇದಾರಿ ಸೇವೆಗಳಲ್ಲಿ ಮಾತ್ರವಲ್ಲದೆ ಶಿಕ್ಷಕರನ್ನು ಒದಗಿಸುತ್ತವೆ. ಕೆಲಸ ಮಾಡುತ್ತಿರುವ ಯಾವುದೇ ಶಿಕ್ಷಕರನ್ನು ತೆಗೆದುಹಾಕುವುದಿಲ್ಲ ಎಂದು ಹೇಳಿದ್ದರು.

ಬಿಬಿಎಂಪಿಯ ಈ ನಡಗೆ ಎಂಎಲ್‌ಸಿ ಪುಟ್ಟಣ್ಣ, ಮಾಜಿ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಪುಟ್ಟಮ್ಣ ಅವರು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತಂದು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಕೂಡಲೇ ಆದೇಶ ಹಿಂಪಡೆಯುವತ ಬಿಬಿಎಂಪಿಗೆ ಸೂಚಿಸಿತ್ತು ಎಂದು ತಿಳಿದುಬಂದಿದೆ. ಡಿಸಿಎಂ ಸೂಚನೆ ಮೇರೆಗೆ ಬಿಬಿಎಂಪಿ ಮಂಗಳವಾರ ಟೆಂಡರ್ ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

Post a Comment

0Comments

Post a Comment (0)