ಜೂನ್ 3 ರಿಂದ ಮೂರು ದಿನಗಳ ಅಂತರರಾಷ್ಟ್ರೀಯ ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೋ ನವೀಕೃತ ಇಂಧನ ಉತ್ಪಾದನೆಯಲ್ಲಿ ಅಗ್ರ ಸ್ಥಾನದಲ್ಲಿ ಕರ್ನಾಟಕ

varthajala
0

 ಬೆಂಗಳೂರು; ಕರ್ನಾಟಕ ನವೀಕೃತ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಿಐಇಸಿ ಕೇಂದ್ರದಲ್ಲಿ ಕರ್ನಾಟಕ ಸೌರ ಇಂಧನ ಉತ್ಪಾದಕರ ಸಂಘ ಮತ್ತು ಫ್ರೈಡ್ ಎನರ್ಜಿ ಎನ್ವೈರ್ನಮೆಂಟ್ ರಿಸೋರ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗದಲ್ಲಿ ಜೂನ್ 3 ರಿಂದ ಮೂರು ದಿನಗಳ 2ನೇ ಆವೃತ್ತಿಯ ಅಂತರರಾಷ್ಟ್ರೀಯ “ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೋ” ಆಯೋಜಿಸಲಾಗಿದ್ದು, ಹಸಿರು ಇಂಧನ ಲೋಕ ಅನಾವರಣಗೊಳ್ಳಲಿದೆ. ಈ ಬಾರಿಯ ಮೇಳದಲ್ಲಿ ಬೆಸ್ಕಾಂ, ಕ್ರೆಡೆಲ್ ಒಳಗೊಂಡಂತೆ 100 ಕ್ಕೂ ಅಧಿಕ ಸರ್ಕಾರಿ ಸಂಸ್ಥೆಗಳು ಮೇಳಕ್ಕೆ ಬೆಂಬಲ ನೀಡಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ ಇಂಡಿಯಾ ಸೋಲಾರ್ ಥರ್ಮಲ್ ಫೆಡರೇಷನ್ ಅಧ್ಯಕ್ಷ ಕೆ.ಆರ್. ಸುರೇಂದ್ರ ಕುಮಾರ್, ಇಂಧನ ಸಚಿವ ಕೆ.ಜೆ. ಜಾರ್ಜ್, ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮೇಳವನ್ನು ಉದ್ಘಾಟಿಸಲಿದ್ದಾರೆ. ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣನ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಮಹಾಂತೇಶ್, ಎಂ.ಎಸ್.ಐ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್, ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ. ರುದ್ರಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. 

 
ನವೀಕೃತ ಇಂಧನ ಮತ್ತು ವಿದ್ಯುನ್ಮಾನ ವಾಹನಗಳ ಸಂಘ, ಎಮ್ ವೀ ಸೋಲಾರ್ ಸಿಸ್ಟಮ್ಸ್ ಪ್ರವೈಟ್ ಲಿಮಿಟೆಡ್ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ. ಸೌರ, ಪವನ, ಜಲ, ಬಯೋಮಾಸ್ ವಲಯಗಳ ಉತ್ಪಾದಕರು, ಅಭಿವೃದ್ಧಿದಾರರು, ತಂತ್ರಜ್ಞರು, ವ್ಯಾಪಾರಿಗಳು, ಸಮಾಲೋಚಕರು ಭಾಗವಹಿಸುತ್ತಿದ್ದಾರೆ. ಪಿಎಂ ಸೂರ್ಯಘರ್ ಮತ್ತು ಪಿಎಂ ಕುಸುಮ್ ಯೋಜನೆಯನ್ನು ಪ್ರಮುಖವಾಗಿ ಕೇಂದ್ರೀಕರಿಸಿ ಮೇಳ ಆಯೋಜಿಸಲಾಗಿದೆ. ನವೀಕೃತ ಇಂಧನ ಕ್ಷೇತ್ರದಲ್ಲಿ 500 ಗಿಗಾವ್ಯಾಟ್ ಸಾಮರ್ಥ್ಯ ವೃದ್ಧಿಸುವ ಗುರಿಯಲ್ಲಿ ಈ ಎರಡು ಪ್ರಮುಖ ಯೋಜನೆಗಳಿಂದ 50 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಕರ್ನಾಟಕ ಸಣ್ಣ ಕೈಗಾರಿಗಳ ಸಂಘ, ಪೀಣ್ಯ ಕೈಗಾರಿಕಾ ಸಂಘ ಮತ್ತು ಸ್ಥಳೀಯ ಸಂಸ್ಥೆಗಳು ಸಹ ಮೇಳಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ ಕರ್ನಾಟಕ 15,643 ಮೆಗಾವ್ಯಾಟ್ ನವೀಕೃತ ಇಂಧನ ಉತ್ಪಾದನೆಯಲ್ಲಿ ಉತ್ಪಾದಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ತಮಿಳುನಾಡು 15,225, ಗುಜರಾತ್ 13,153 ಮತ್ತು ಮಹಾರಾಷ್ಟ್ರ 10,267 ಮೆಗಾವ್ಯಾಟ್ ಉತ್ಪಾದಿಸುವ ಮೂಲಕ ನಂತರ ಸ್ಥಾನಗಳಲ್ಲಿವೆ. ದೈನಂದಿನ ಬಳಕೆ ಮತ್ತು ಚಲನಶೀಲತೆಗಾಗಿ ಸುಸ್ಥಿರ ಮತ್ತು ಶುದ್ಧ ಇಂಧನ ಒದಗಿಸುವ ಬದ್ಧತೆಯನ್ನು ಈ ಮೇಳ ಹೊಂದಿದೆ. ಕುಸುಮ್ ಯೋಜನೆಯಡಿ ಬರುವ 2026 ರ ವೇಳೆಗೆ 34,800 ಮೆಗಾವ್ಯಾಟ್ ಉತ್ಪಾದಿಸುವ ಗುರಿ ಹೊಂದಿದ್ದು, ಕೇಂದ್ರ ಸರ್ಕಾರ 34,422 ಕೋಟಿ ರೂ ಹಣ ನಿಗದಿ ಮಾಡಿದೆ. ಪಿ.ಎಂ ಸೂರ್ಯಘರ್ ಯೋಜನೆಯಡಿ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿ ಇದೆ ಎಂದು ಹೇಳಿದರು. 
ನವೀಕೃತ ಇಂಧನ ಕ್ಷೇತ್ರದಲ್ಲಿ ಬರುವ 2030 ರ ವೇಳೆಗೆ 500 ಗಿಗಾವ್ಯಾಟ್ ಇಂಧನ ಉತ್ಪಾದಿಸುವ ಗುರಿ ಕುರಿತಂತೆ ಪ್ರತ್ಯೇಕ ಗೋಷ್ಠಿ ನಡೆಯಲಿದೆ. ಬೆಸ್ಕಾಂ, ಕ್ರೆಡೆಲ್, ಸಿಪಿಆರ್ ಐ, ಸೆಡ್ಬಿ, ವಾರ್ರೀ, ಅದಾನಿ ಸೋಲಾರ್, ಮಿರ್ಕೋಟೆಕ್ ಇತರೆ ಸಂಸ್ಥೆಗಳು ಭಾಗಿಯಾಗಲಿವೆ. ಮೂರು ದಿನಗಳ ಮೇಳದಲ್ಲಿ 15000 ಮಂದಿ ಭೇಟಿ ನೀಡುವ ನಿರೀಕ್ಷೆಯಿದ್ದು, ಆಸ್ಟ್ರೇಲಿಯಾ ಪ್ರೀಮಿಯಂ ಸೋಲಾರ್, 100 ಕ್ಕೂ ಅಧಿಕ ದೇಶ, ವಿದೇಶಗಳ ಪ್ರಮುಖ ಪ್ರದರ್ಶನಕಾರರು ಭಾಗಿಯಾಗಲಿದ್ದಾರೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಫೆರ್ರಿ ಅಧ್ಯಕ್ಷ ರಮೇಶ್ ಶಿವರಾಮ್, ಪ್ರೈಡ್ ರಿನೀವಬಲ್ ಎನರ್ಜಿ ನಿರ್ದೇಶಕ ಎ.ಸಿ. ಈಶ್ವರ್, ಹೈದರಾಬಾದ್ ನ ಮೀಡಿಯಾ ಡೇ ಮಾರ್ಕೇಟಿಂಗ್ ನಿರ್ದೇಶಕರಾದ ರಾಮ್ ಸೌಂದಲ್ಕರ್, ಮೊಹಮದ್ ಮುದಸ್ಸಿರ್ ಉಪಸ್ಥಿತರಿದ್ದರು.

Post a Comment

0Comments

Post a Comment (0)