ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಅಮೆರಿಕಾ ಪ್ರವಾಸ

varthajala
0

 ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಜಗತ್ತಿನ ಕನ್ನಡಿಗರನ್ನು ಒಂದೇ ವೇದಿಕೆಗೆ ತರುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯ ಅಡಿಯಲ್ಲಿ ಈಗ ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ನಾಡೋಜ ಡಾ.ಮಹೇಶ ಜೋಶಿಯವರು ಹೊರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮಾತೃಭೂಮಿಯ ಜೊತೆಗೆ ಕ್ರಿಯಾಶೀಲ ಸಂಬಂಧವನ್ನು ಇಟ್ಟು ಕೊಳ್ಳುವಂತಹ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ವಿದೇಶದಲ್ಲಿರುವ ಕನ್ನಡಿಗರನ್ನು ಸಂಯೋಜಿಸುವ ಮುಖ್ಯ ಕೆಲಸ ಈಗ ನಡೆಯುತ್ತಿದೆ. ಈಗಾಗಲೇ ಅಧ್ಯಕ್ಷರು ಬಹರೇನ್ನಲ್ಲಿ ಕನ್ನಡ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆಸ್ಟ್ರೇಲಿಯಾ, ಜರ್ಮನಿಗಳ ಪ್ರವಾಸವನ್ನು ಕೈಗೊಂಡು ನಿರಂತರ ಕನ್ನಡ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈ ಭೇಟಿಯ ಪರಿಣಾಮವಾಗಿಯೇ ಕನ್ನಡಿಗರಿಗೆ ಪ್ರಾತಃ ಸ್ಮರಣೀಯರು ಎನ್ನಿಸಿ ಕೊಂಡ ರೆವೆರೆಂಡ್ ಫರ್ಡಿನೆಂಡ್ ಕಿಟಲ್ ಅವರ ಮೊಮ್ಮಗಳು ಪರಿಷತ್ತಿನ ಕಾರ್ಯಕ್ರಮದಲ್ಲಿ ಭಾಗಿಯಾದರು. 

ಅನೇಕ ಹೊರನಾಡ ಕನ್ನಡಿಗರು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದು ಸಮ್ಮೇಳನದಲ್ಲಿ ಇದೇ ಮೊಟ್ಟ ಮೊದಲಿಗೆ ಹೊರ ನಾಡು ಕನ್ನಡಿಗರ ಕುರಿತಾಗಿಯೇ ಒಂದು ವಿಚಾರ ಸಂಕಿರಣವು ಏರ್ಪಾಟಾಗಿತ್ತು. ಪ್ರಸ್ತುತ ಅಧ್ಯಕ್ಷರು ಈ ಪ್ರಕ್ರಿಯೆಯ ಮುಂದುವರಿಕೆಯಾಗಿ ಅಮೆರಿಕಾದ ಪ್ರವಾಸವನ್ನು ಕೈಗೊಳ್ಳಲಿದ್ದು ಲಾಸ್ ಆಂಜಲೀಸ್ , ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ವಾಷಿಂಗ್ ಟನ್, ನ್ಯೂಯಾರ್ಕ್ ಮೊದಲಾದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಅಮೆರಿಕಾದ ಕನ್ನಡಿಗರನ್ನು ಭೇಟಿ ಮಾಡಿ ಅವರ ಮನದಾಳವನ್ನು ಅರಿಯವುದರ ಜೊತೆಗೆ ಅವರ ಅಗತ್ಯತೆಗಳಿಗೆ ಸ್ಪಂದಿಸುವುದು , ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿಸುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರ ಉದ್ದೇಶವಾಗಿದೆ. ಅಲ್ಲಿನ ಕನ್ನಡ ಸಂಘಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಭೇಟಿ ಮಾಡಿ ಅಲ್ಲಿನ ಕನ್ನಡ ಸಂಘಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಗಳಾಗುವಂತೆ ಅಲ್ಲಿನ ಕನ್ನಡಿಗರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗುವಂತೆ ಮಾಡುವುದರ ಜೊತೆಗೆ ಅಮೆರಿಕಾದಲ್ಲಿ ಕನ್ನಡ ಕಂಪನ್ನು ಹರಡಲು ಪ್ರಯತ್ನಿಸುತ್ತಾರೆ. ಈಗಾಗಲೇ ಅಧ್ಯಕ್ಷರು ಬಹರೇನ್, ಜರ್ಮನಿ, ಸ್ವೀಡನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ಸಿಂಗಾಪುರ, ಇಂಡೋನೇಷಿಯಾ ಗಳಲ್ಲಿ ಇಂತಹ ಪ್ರಯತ್ನವನ್ನು ನಡೆಸಿ ಯಶಸ್ವಿಯಾಗಿದ್ದಾರೆ. 

ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ 'ಬೇ - ಏರಿಯಾ' ಪ್ರಾಂತ್ಯದಲ್ಲಿ ಕನ್ನಡಿಗರನ್ನು ಸಂಘಟಿಸಿರುವ ಕನ್ನಡ ಕೂಟ ನಾರ್ತ್ ಕ್ಯಾಲಿಫೋರ್ನಿಯಾ ವಸಂತ ಬಳಗೆರೆಯವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಭೇಟಿ ಮಾಡಿ ಅಲ್ಲಿನ ಕನ್ನಡಿಗರ ಸ್ಥಿತಿಗತಿಯ ಬಗ್ಗೆ ಚರ್ಚಿಸಲಿದ್ದಾರೆ. ಕ್ಯಾಲಿಫೋರ್ನಿಯಾದ ಸನ್ನಿವೇಲ್ನ ಗರದ ಉಪ ಮೇಯರ್ ಕನ್ನಡಿಗರಾದ ಮುರಳಿ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ, ಇದೇ ರೀತಿಯಲ್ಲಿ ಕುಪರ್ಟಿನೋದ ಮೇಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರ ಮೊಮ್ಮಗಳಾದ ಶೀಲಾ ಮೋಹನ್ಅ ವರನ್ನು ಭೇಟಿ ಮಾಡಲಿದ್ದು ಅವರನ್ನು ಮಂಡ್ಯದಲ್ಲಿ ನಡೆಯುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಿದ್ದಾರೆ. ಯು.ಎಸ್.ಹೆಲ್ತ್ ಅಂಡ್ ಹ್ಯೂಮನ್ ಸರ್ವಿಸಸ್ನ ಸರ್ಜನ್ ಜನರಲ್ ಮತ್ತು ಮೂಲ ಮಂಡ್ಯದವರಾದ ಡಾ.ವಿವೇಕ ಮೂರ್ತಿ ಹಲ್ಲೇಗೆರೆ ಅವರನ್ನೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಆಹ್ವಾನಿಸಲಿದ್ದು ಮಂಡ್ಯದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಿದ್ದಾರೆ. ನಾಡೋಜ ಡಾ.ಮಹೇಶ ಜೋಶಿಯವರ ಈ ಅಮೆರಿಕಾ ಭೇಟಿ ಫಲಪ್ರದವಾಗಲಿದೆ, ಅಮೆರಿಕಾ ಕನ್ನಡಿಗರು ಮತ್ತು ಸಂಘ ಸಂಸ್ಥೆಗಳ ಬಾಂಧವ್ಯ ಇನ್ನಷ್ಟು ನಿಕಟವಾಗಲಿದೆ, ಎಲ್ಲರೂ ಒಟ್ಟಾಗಿ ಕನ್ನಡದ ಕೆಲಸಗಳನ್ನು ಮಾಡುವುದು ಸಾಧ್ಯವಾಗಲಿದೆ ಎನ್ನುವುದು ಕನ್ನಡಿಗರೆಲ್ಲರ ನಿರೀಕ್ಷೆ.

ಎನ್.ಎಸ್.ಶ್ರೀಧರ ಮೂರ್ತಿ

ಸಂಚಾಲಕರು, ಪ್ರಕಟಣಾ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು

Post a Comment

0Comments

Post a Comment (0)