ಬೆಂಗಳೂರು ಏಪ್ರಿಲ್ 6:
ನಗರದಲ್ಲಿ ನೂತನವಾಗಿ ಆರಂಭವಾಗಿರುವ ಕಾವೇರಿ ಆಸ್ಪತ್ರೆ ಜನರಿಗೆ ಉತ್ತಮ ಸೇವೆ ನೀಡುತ್ತಾ ಇನ್ನಷ್ಟು ಚೆನ್ನಾಗಿ ಬೆಳೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು.
ಶನಿವಾರ ಮಾರತಹಳ್ಳಿಯಲ್ಲಿ ಕಾವೇರಿ ಆಸ್ಪತ್ರೆ ಸಮೂಹದ ನೂತನ ಆಸ್ಪತ್ರೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಉತ್ತಮ ಸೇವೆ ನೀಡುತ್ತಿರುವ ಕಾವೇರಿ ಆಸ್ಪತ್ರೆಯನ್ನು ಬೆಂಗಳೂರಿನಲ್ಲಿ ಉದ್ಘಾಟಿಸುತ್ತಿರುವುದಕ್ಕೆ ಸಂತೋಷವಾಗಿದೆ. ಉತ್ತಮ ಆರೋಗ್ಯ ಸೇವೆ ನೀಡುತ್ತಾ ಈ ಆಸ್ಪತ್ರೆ ಇನ್ನು ಚೆನ್ನಾಗಿ ಬೆಳೆಯಲಿ. ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿ. ಮುಂದಿನ ದಿನಗಳಲ್ಲಿ ಇನ್ನೂ ಎರಡು ಆಸ್ಪತ್ರೆಗಳನ್ನು ಆರಂಭಿಸುವ ಯೋಜನೆಯನ್ನು ಈ ಸಮೂಹದ ಆಸ್ಪತ್ರೆ ಹೊಂದಿದೆ ಎಂದು ಗೊತ್ತಾಗಿದೆ. ಮುಂದಿನ ಎಲ್ಲಾ ಯೋಜನೆಗಳಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.
ನೂತನ ಆಸ್ಪತ್ರೆಯಲ್ಲಿ 24/7 ತುರ್ತು ಸೇವೆಗಳು, ಅಪಘಾತ ಮತ್ತು ತೀವ್ರ ನಿಗಾ ಘಟಕದ ಸೌಲಭ್ಯ ಇವೆ. ಕೀಲು ಮತ್ತು ಸಂಧಿ, ಹೃದಯ ವಿಜ್ಞಾನ, ಜಠರ ವಿಜ್ಞಾನ, ತಾಯಿ ಮತ್ತು ಮಗುವಿನ ಆರೈಕೆ, ಮೂತ್ರಪಿಂಡ ವಿಜ್ಞಾನ, ನರ ವಿಜ್ಞಾನ ಸೇರಿದಂತೆ ಅನೇಕ ಆರೋಗ್ಯ ಸೇವೆಗಳನ್ನು ತಜ್ಞ ವೈದ್ಯರು ಒದಗಿಸಲಿದ್ದಾರೆ.
ಚೆನ್ನೈ, ಸೇಲಂ, ಹೊಸೂರು ಸೇರಿದಂತೆ ದಕ್ಷಿಣ ಭಾರತದ ವಿವಿಧ ನಗರಗಳಲ್ಲಿ ಆಸ್ಪತ್ರೆಗಳನ್ನು ಆರಂಭಿಸಿರುವ ಕಾವೇರಿ ಆಸ್ಪತ್ರೆ ಸಮೂಹಕ್ಕೆ ಮಾರತಹಳ್ಳಿ ಆಸ್ಪತ್ರೆಯು 12ನೇಯದ್ದಾಗಿದೆ. ಬೆಂಗಳೂರಿನಲ್ಲೇ ಇದು ಎರಡನೇ ಆಸ್ಪತ್ರೆಯಾಗಿದೆ. ಈಗಾಗಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವದರ್ಜೆಯ ಆಸ್ಪತ್ರೆಯು ಗುಣಮಟ್ಟ ಮತ್ತು ಮೌಲ್ಯಯುತ ಸೇವೆಗಳಿಗೆ ಹೆಸರುವಾಸಿಯಾಗಿದೆ. ಕಳೆದ 25 ವರ್ಷಗಳಿಂದ ನೀಡುತ್ತಿರುವ ಶ್ರೇಷ್ಠ ಆರೋಗ್ಯ ಸೇವೆಯನ್ನು ಈಗ ಮಾರತಹಳ್ಳಿಗೂ ವಿಸ್ತರಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ಶರತ್ ಬಚ್ಚೇಗೌಡ, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಕಾವೇರಿ ಆಸ್ಪತ್ರೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಮಣಿವಣ್ಣನ್ ಸೇಲ್ವರಾಜ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಸ್. ವಿಜಯಭಾಸ್ಕರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.