ಬೆಂಗಳೂರು, ಏ, 19; ಉತ್ತಮ ಸಮಾಜ ಮತ್ತು ಸರ್ಕಾರವನ್ನು ಆಯ್ಕೆ ಮಾಡಲು ಸಂವಿಧಾನದ ನಮಗೆ ಮತದಾನದ ಹಕ್ಕು ನೀಡಿದ್ದು, ಯುವ ಸಮೂಹ ತಪ್ಪದೇ ಮತದಾನ ಮಾಡಬೇಕು ಎಂದು ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಕರೆ ನೀಡಿದ್ದಾರೆ. ಶ್ರೀ ಕೃಷ್ಣದೇವರಾಯ ಶಿಕ್ಷಣ ಟ್ರಸ್ಟ್ ನ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಘಟಿಕೋತ್ಸವದಲ್ಲಿ 682 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಉತ್ತಮ ಸರ್ಕಾರ ಆಯ್ಕೆ ಮಾಡಲು ವಿದ್ಯಾರ್ಥಿ ಸಮೂಹ ಮುಂದಾಗಬೇಕು. ಏಪ್ರಿಲ್ 26 ರಂದು ಮೊದಲ ಹಂತದಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಯಾವುದೇ ಚುನಾವಣೆಯಲ್ಲೂ ಮತದಾನದಿಂದ ದೂರ ಉಳಿಯಬಾರದು ಎಂದರು.
ಪಿ.ಯು.ಸಿ, ನಂತರ ತಾಂತ್ರಿಕ ಶಿಕ್ಷಣದ ಮೂಲಕ ಎರಡು ದಶಕಗಳ ಶೈಕ್ಷಣಿಕ ಯಾತ್ರೆಯನ್ನು ಪೂರ್ಣಗೊಳಿಸಿದ್ದೀರಿ, ಸಮಾಜ ಮುನ್ನಡೆಸಲು ನಿಮ್ಮ ಹೆಗಲ ಮೇಲೆ ಜವಾಬ್ದಾರಿ ಇದೆ. ನಾವು ಏನು ಸಾಧನೆ ಮಾಡಬೇಕು ಎಂಬ ಗುರಿ ಇಟ್ಟುಕೊಳ್ಳಿ. ಪದವಿ ಮುಗಿಸಿದ ನಂತರ ಸಂಕಷ್ಟಗಳು ಬರುತ್ತವೆ. ಅದನ್ನು ಎದುರಿಸಿ ಸಾಧನೆಯತ್ತ ಸಾಗುವಂತೆ ಕರೆ ನೀಡಿದರು.
*ರಕ್ಷಣಾ ಉದ್ಯಮ ಅಕಾಡೆಮಿ ರಾಮನ್ ಸೆಂಟರ್ ಆಫ್ ಎಕ್ಸಲೆನ್ಸ್ ನ ನಿರ್ದೇಶಕರಾದ ಡಾ. ಸುಧೀರ್ ಕಾಮತ್, ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎ.ಸಿ ಚಂದ್ರಶೇಖರ್ ರಾಜು, ಉಪಾಧ್ಯಕ್ಷರಾದ ಕೆ ವಿ ಶೇಖರ್ ರಾಜು, ಕಾರ್ಯದರ್ಶಿ ಕೆ ಶ್ಯಾಮರಾಜು, ಖಜಾಂಚಿ ವೆಂಕಟರಮಣ ರಾಜು, ಸಂಸ್ಥೆಯ ಸಂಸ್ಥಾಪಕರಾದ ವಿ. ಶ್ರೀನಿವಾಸ್ ರಾಜು ಹಾಗೂ ಪ್ರಾಂಶುಪಾಲರಾದ ಪ್ರೊ ಎಸ್ ಜಿ ರಾಕೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು*.
ಸರ್ ಎಂ ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ 682 ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಸಿಎಸ್ಇ, ಐಎಸ್ಇ, ಇಸಿಇ, ಇಟಿಇ, ಇಇಇ, ಎಂಸಿ, ಬಿ.ಟಿ, ಸಿವಿಲ್ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 48 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.