ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಕೊಡಮಾಡುವ ಕೆಯುಡಬ್ಲ್ಯೂಜೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಪತ್ರಕರ್ತ ಆರ್.ಜಯಕುಮಾರ್ ಅವರಿಗೆ ಮೈಸೂರಿನ ಅವರ ತೋಟದ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಶಿವಾನಂದ ತಗಡೂರು ಅವರು ಮಾತನಾಡಿ, ಚಿತ್ರದುರ್ಗದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಜಯಕುಮಾರ್ ಅವರು ಅನಾರೋಗ್ಯದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂದು ಕೆಯುಡಬ್ಲ್ಯೂಜೆಯೇ ಅವರ ಮನೆಗೆ ಬಂದಿದ್ದು ಪ್ರಶಸ್ತಿ ಪ್ರದಾನ ಮಾಡುತ್ತಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶತಾಯುಶಿಗಳಾಗಿ ಬದುಕಿದ ಎಚ್.ಎಸ್.ದೊರೆಸ್ವಾಮಿ ಅವರು ಕೆಯುಡಬ್ಲ್ಯೂಜೆ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸಿದವರು. ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ ನೀಡಲಾಗುತ್ತಿದ್ದು ಈ ಬಾರಿ ಸುಧೀರ್ಘ ಅವಧಿಗೆ ಕ್ರಿಯಾಶೀಲವಾಗಿ ಕೆಲಸ ಮಾಡಿದ ಜಯಕುಮಾರ್ ಅವರು ಭಾಜನರಾಗಿದ್ದಾರೆ ಎಂದರು.
ದೊರೆಸ್ವಾಮಿ ಅವರ ಸಮಾಜಮುಖಿ ವಿಚಾರಧಾರೆಯಲ್ಲಿ ಮೂರೂವರೆ ದಶಕಗಳ ಕಾಲ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಜಯಕುಮಾರ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂಘಕ್ಕೆ ಅಭಿಮಾನದ ಸಂಗತಿ ಎಂದರು.
ವೃತ್ತಿ ಬದ್ಧತೆ ನಮ್ಮ ಆದ್ಯತೆ:
ಅಭಿನಂದನೆ ಸ್ವೀಕರಿಸಿ ಮತನಾಡಿದ ಆರ್.ಜಯಕುಮಾರ್, ನನ್ನ ಆರೋಗ್ಯ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಈ ಪ್ರಶಸ್ತಿ ಹೊಸ ಸ್ಪೂರ್ತಿಯನ್ನು ನೀಡಿದೆ. ನನ್ನೊಳಗಿರುವ ತುಡಿತಗಳನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದು, ಈಗ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದೇನೆ. ಇನ್ನೆರಡು ಪುಸ್ತಕಗಳು ಶೀಘ್ರವೇ ಬರಲಿವೆ ಎಂದರು.
ಹಲವು ವೈರುದ್ಯಗಳ ನಡುವೆ ಪತ್ರಕರ್ತರು ತಮ್ಮತನ ಉಳಿಸಿಕೊಳ್ಳಬೇಕು. ವಿಭಿನ್ನ ವಿಚಾರಧಾರೆಗಳ ಮೂಲಕ ಒಂದು ಪತ್ರಿಕೆಯನ್ನು ಕಟ್ಟಿಕೊಡುವುದು ಸವಾಲಿನ ಕೆಲಸವೇ ಆದರೂ ಅದು ಖುಷಿ ಕೊಟ್ಟಿದೆ. ಕಳೆದ ಮೂರೂವರೆ ದಶಕಗಳಲ್ಲಿ ಸುದ್ದಿಮನೆ ನನಗೆ ಎಲ್ಲವನ್ನೂ ಕಲಿಸಿದೆ. ವೃತ್ತಿ ಬದ್ಧತೆಯನ್ನು ಪಾಲಿಸುವುದು ನಮ್ಮ ಆದ್ಯತೆಯಾಗಬೇಕು ಎಂದರು.
ಶಿವಾನಂದ ತಗಡೂರು ಅವರನ್ನು ದಶಕಗಳಿಂದ ಹತ್ತಿರದಿಂದ ಗಮನಿಸಿಕೊಂಡು ಬಂದಿದ್ದೇನೆ. ಅವರು ಕೆಯುಡಬ್ಲೂೃಜೆ ಸಾರಥ್ಯ ವಹಿಸಿಕೊಂಡ ಮೇಲೆ ಆ ಸಂಘಕ್ಕೊಂದು ಹೊಸತನದ ಮೆರಗು ನೀಡಿ, ನಿಜವಾದ ಕಾರ್ಯ ನಿರತ ಪತ್ರಕರ್ತರ ಅಲ್ಲಿರುವಂತೆ ಮಾಡಿದ್ದಾರೆ. ಪತ್ರಕರ್ತರ ಸಮುದಾಯಕ್ಕೆ ಕೋವಿಡ್ ಕಾಲಘಟ್ಟದಿಂದ ಅವರ ಸಲ್ಲಿಸುವ ಸೇವೆ ಅನನ್ಯವಾದದ್ದು. ಅವರೇ ಬಂದು ಇಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನನಗೆ ಅಭಿಮಾನದ ಸಂಗತಿ ಎಂದರು.
ನನಗೂ ಮಾದರಿ ವ್ಯಕ್ತಿ: ಲೀಲಾ ಸಂಪಿಗೆ
ಈ ಸಂದರ್ಭದಲ್ಲಿ ಅವರ ಪತ್ನಿ ಲೀಲಾ ಸಂಪಿಗೆ ಮಾತನಾಡಿ, ಮೈಸೂರಿನಲ್ಲಿ ಕಾರ್ಪೊರೇಷನ್ ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿದ್ದಾಗ ನಾವಿಬ್ಬರು ಬಾಳಸಂಗಾತಿಗಳಾದೆವು. ಅಂದಿನಿಂದಲೂ ನಾವೊಂದುಕೊಂಡ ರೀತಿಯಲ್ಲಿ ಬದುಕ ಕಟ್ಟಿಕೊಂಡು ಬಂದಿದ್ದೇವೆ. ಜಯಕುಮಾರ್ ಎಂದೂ ಯಾರ ಜೊತೆಗೂ ತಮ್ಮ ವಿಚಾರಧಾರೆಗಳಲ್ಲಿ ರಾಜಿ ಮಾಡಿಕೊಂಡಿಲ್ಲ. ಬದ್ದತೆಯಿಂದ ವೃತ್ತಿ ಜೀವನ ಮಾಡುವ ಮೂಲಕ ನನಗೂ ಮಾದರಿ ವ್ಯಕ್ತಿಯಾಗಿದ್ದಾರೆ ಎಂದರು.
ಡಾ.ಪ್ರವೀಣ್ ಮಾತನಾಡಿ, ಪತ್ರಕರ್ತರು ಒತ್ತಡದ ನಡುವೆ ಕೆಲಸ ಮಾಡುವ ಸಂದರ್ಭದಲ್ಲಿ ಆರೋಗ್ಯದ ಕಡೆಯೂ ಗಮನ ನೀಡಬೇಕು ಎಂದರು.
ಮೈಸೂರು ಜಿಲ್ಲಾ ಸಂಘದ ಪ್ರಭುರಾಜು, ಸಿ.ಕೆ.ಮಹೇಂದ್ರ, ಎಸ್.ಟಿ. ರವಿಕುಮಾರ್, ಎಂ.ಸುಬ್ರಹ್ಮಣ್ಯ, ರಾಘವೇಂದ್ರ, ಧರ್ಮಪುರ ನಾರಾಯಣ, ಹಿರಿಯ ಪತ್ರಕರ್ತರುಗಳಾದ ಆರಾಧ್ಯ, ಲೋಕೇಶ್ ಕಾಯರ್ಗ, ಚಿನ್ನಸ್ವಾಮಿ ವಡ್ಡಗೆರೆ, ಓಂಕಾರ್, ಮಹಾದೇವ ನಾಯಕ್ ಮತ್ತಿತರರು ಮಾತನಾಡಿ ಜಯಕುಮಾರ್ ಅವರ ಹೋರಾಟದ ಹಾದಿ ಮತ್ತು ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಸ್ಮರಿಸಿದರು. ಆದಷ್ಟು ಬೇಗ ಗುಣಮುಖರಾಗಿ ಬರುವಂತೆ ಹಾರೈಸಿದರು.