ನಾನು ನಮ್ಮ ಶೇಷಾದ್ರಿಪುರಂ ಕಾಲೇಜಿನಲ್ಲಿ ಅಂತಿಮ ಬಿ.ಕಾಂ.,ಪದವಿ ಮುಗಿಸಿದ ವರ್ಷ 1992-93.ಮೂವತ್ತೊಂದು ವರ್ಷಗಳ ಹಿಂದಿನ ಮಾತು.ಆ ಮಾತು - ಮಾತುಗಳ ಬಗ್ಗೆಯೇ ಮಾತು.ಆಗ ಹೊರ ಬಂದ ಕಾಲೇಜು ಮ್ಯಾಗಜೈನ್ ಪ್ರಕಟವಾದಾಗ "ಅತ್ಯುತ್ತಮ ಭಾಷಣ ಪಟು" ಅಂತ ನನ್ನ ಭಾವಚಿತ್ರ ನೋಡಿ ಆಶ್ಚರ್ಯವೂ ಮತ್ತು ಖುಷಿಯೂ ಆಗಿತ್ತು.
ನನ್ನಲ್ಲಿ ನಾನು ಗಮನಿಸಿದಂತೆ ಇಂದು ಹೆಚ್ಚಿನ ಮಾತುಗಳಿಲ್ಲ.ಬಹುತೇಕ ನಾನು ಮೌನಿ.ಆದರೆ ಯಾರೊಂದಿಗಾದರೂ ಮಾತನಾಡಿದಾಗ ಆತ್ಮೀಯವಾಗಿಯೇ ಮಾತನಾಡುತ್ತೇನೆ.ಮಾತನಾಡುವುದು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಮಾನ ಗಿಟ್ಟಿಸುವುದು ನನಗೆ ಹೊಸತಲ್ಲ.ಒಂದನೇ ತರಗತಿಯಿಂದ ಇಂದಿನ ತನಕ ವೇದಿಕೆ ಹತ್ತಿದರೆ ಮುಗೀತು.ಆದರೆ ನಾನು "ಮೌನಿ" ಅಂತಲೂ ಒಪ್ಪಿಕೊಳ್ಳುತ್ತೇನೆ.ಅದು ನನ್ನ ಸ್ವಭಾವ.ನಾನು ವಾಚಾಳಿಯಲ್ಲ ಆದರೆ ಸರಸ್ವತಿ ವಾಗ್ಝರಿ ನೀಡಿ ಹರಸಿದ್ದಾಳೆ. ಬರವಣಿಗೆಯ ಹವ್ಯಾಸ ನೀಡಿ ಅಕ್ಷರ ಪ್ರೀತಿ ಹೆಚ್ಚಿಸಿದ್ದಾಳೆ. ಇಷ್ಟು ಬಿಟ್ಟರೆ ನಾನೆಂದಿಗೂ ಸಾಮಾನ್ಯ.ಬದುಕು ಮಾತ್ರ ನಿರೀಕ್ಷೆ ಮೀರಿ ಕೈ ಹಿಡಿದು ಕಾಪಾಡಿದೆ.ಬೆಳೆಸಿದೆ. ನಾನು ಸಂತೃಪ್ತ.
ನಮ್ಮ ಶೇಷಾದ್ರಿಪುರಂ ಕಾಲೇಜಿನಲ್ಲಿ ಕಳೆದ ಐದು ವರ್ಷಗಳು ಬಹಳ ಚೇತೋಹಾರಿಯಾಗಿದ್ದವು. ಕಾಲೇಜು ಮುಗಿದ ತಕ್ಷಣ ಬಸ್ ಹತ್ತಿಕೊಂಡು ಮನೆಗೆ ಬಂದು ಬಿಡುತ್ತಿದ್ದೆ.ಬೆಳಿಗ್ಗೆ ಒಂಭತ್ತೂವರೆಯಿಂದ ಹತ್ತರ ಸಮಯದಲ್ಲಿ ತಿಂಡಿಗೆ ಬ್ರೇಕ್ ನೀಡಿದಾಗ ಕಾಲೇಜಿನ ಸುತ್ತ ಮುತ್ತ ಹೋಟೆಲುಗಳಿಗೆ ಭೇಟಿ ನೀಡುತ್ತಿದೆ.ಕಲ್ಯಾಣ್ ಕೆಫೆ, ಕಾಮತ್, ಸನ್ಮಾನ್,ರುಚಿ ದರ್ಶಿನಿ, ಕಾವ್ಯ ದರ್ಶಿನಿ, ಮಧ್ವಾಸ್ ಬೇಕರಿ, ನ್ಯೂ ಮಾಡರ್ನ್ ಕೆಫೆ, ಜನತಾ ಹೋಟೆಲ್, ಶೇಷಾದ್ರಿಪುರಂ ಪೋಸ್ಟಾಫೀಸಿನ ಕ್ಯಾಂಟೀನ್, ಕಾಲೇಜಿನ ಕ್ಯಾಂಟೀನ್ ಹೀಗೆ ಒಂದೊಂದು ದಿನ ಒಂದೊಂದು ಕಡೆ. ತಿಂಡಿ ತಿಂದು ಬರಲು ಅರ್ಧ ಘಂಟೆ ಸಾಕಾಗುತ್ತಿತ್ತು.
ಕಾಲೇಜಿನ ಕ್ವಾಡ್ರಾಂಗಲ್ ಮತ್ತು ಕಾರಿಡಾರುಗಳಲ್ಲಿ ಓಡಾಡುವುದೇ ಸಂಭ್ರಮ.ಕಾಲೇಜಿನ ಲೈಬ್ರೈರಿ ಮತ್ತು ಆಡಿಟೋರಿಯಮ್ಮಿನಲ್ಲಿ ಕುಳಿತರೆ ಏನೋ ಸಂತಸ ಸಮಾಧಾನ.ಇಂದಿಗೂ ಕಾಲೇಜು ಆವರಣದೊಳಗೆ ಹೊಕ್ಕರೆ ಇಂದಿಗೂ ಕಾಲೇಜು ವಿದ್ಯಾರ್ಥಿಯ ಮಾನಸೀಕತೆ.ಅದರಲ್ಲೂ ವರ್ಷಕ್ಕೊಮ್ಮೆ ನಡೆಯುವ ಹಳೆಯ ವಿದ್ಯಾರ್ಥಿ ಸಂಘದ ಪುನರ್ಮಿಲನ ಕಾರ್ಯಕ್ರಮದಲ್ಲಿ ಕಳೆದ ಐವತ್ತೊಂದು ವರ್ಷಗಳ ಹಿಂದೆ ಕಾಲೇಜು ಶುರುವಾದಾಗ ಸೇರಿದ ಮೊದಲ ಬ್ಯಾಚಿನ ವಿದ್ಯಾರ್ಥಿಗಳಿಂದ ಕಳೆದ ಶೈಕ್ಷಣಿಕ ವರ್ಷ ಪದವಿ ಮುಗಿಸಿದ ಕಿರಿಯರ ತನಕ ಉಭಯ ಕುಶಲೋಪರಿ ನಡೆಸಿ ಮಾತನಾಡುವುದೇ ಸಂಭ್ರಮ.ಇಂದು ಸಂಜೆ ನಾಲ್ಕೂವರೆಯಿಂದ ಕಾಲೇಜಿನ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿದ್ದು ಬಹಳಷ್ಟು ಜನರನ್ನು ಭೇಟಿ ಮಾಡುವ ಉತ್ಸಾಹದಲ್ಲಿದ್ದೇನೆ.
ಸಿ ಎನ್ ರಮೇಶ್ Mob. : 9844295260