ಶ್ರೀರಾಂಪುರದ ಸುತ್ತ ಮುತ್ತ ಜನರಿಗೆ ಪರಿಚಿತ ಪ್ರೌಢಶಾಲೆಗಳ ಪೈಕಿ ದೇವಯ್ಯ ಉದ್ಯಾನವನದ ಬಗ್ಗಲಲ್ಲೇ ಇರುವ ಸರ್ವೋದಯ ಪ್ರೌಢಶಾಲೆ ಅಂತೆಯೇ ಸೇವಾ ಮನೋಭಾವದ ಸೇವಾ ಭಾರತಿ ಚಟುವಟಿಕೆಗಳ ಮುಖ್ಯ ಕೇಂದ್ರವೆಂದರೆ ಸಾಂದೀಪನಿ ವಿದ್ಯಾ ಸಂಸ್ಥೆ. ಮೊದಲಿಗೆ ಸರ್ವೋದಯ ಪ್ರೌಢಶಾಲೆಯಲ್ಲಿ ಕೆಲಸ ಮಾಡಿ ನಂತರ ನಿವೃತ್ತಿಯ ನಂತರವೂ ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ ಶ್ರೇಷ್ಠರೆಂದರೆ "ಎಸ್ ಆರ್ ಆರ್ " ಎಂದೇ ಜನಪ್ರಿಯರಾಗಿದ್ದ ಮೇಷ್ಟ್ರು ಶ್ರೀ.ಎಸ್ ಆರ್ ರಾಮಮೂರ್ತಿಯವರು.
ಫಳ ಫಳ ಹೊಳೆಯುವ ಬಿಳುಪಿನ ದಪ್ಪ ಕನ್ನಡಕದ ಎಸ್ ಆರ್ ರಾಮಮೂರ್ತಿಯವರ ಪಾಠಗಳಿಂದ ಬೆಳೆದ ಅವರ ಶಿಷ್ಯರು ದೇಶ ವಿದೇಶಗಳಲ್ಲಿ ನೆಲೆಸಿದ್ದಾರೆ. ಮುಖ್ಯವಾಗಿ ಶ್ರೀರಾಂಪುರದ ಸುತ್ತ ಮುತ್ತ ರೌಡಿ ಪರಂಪರೆ ವಿಜೃಂಭಿಸುತ್ತಿದ್ದ ಕಾಲದಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪದಂತೆ ತಮಗೆ ತಾವೇ ಹಾಸ್ಯದಿಂದ ನಾನು ಯಾರು ಗೊತ್ತಾ "ಶ್ರೀರಾಂಪುರದ ರೌಡಿ ರಾಮ" ಅಂತ ಹೇಳುತ್ತಾ ಹಲವಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಜೀವನ ರೂಪಿಸಿದವರು ಇತ್ತೀಚೆಗೆ ನಿಧನರಾದ "ಎಸ್ ಆರ್ ಆರ್" ಮಹಾಕವಿ ಕುವೆಂಪು ರಸ್ತೆಯ ಈಗಿನ ಕರ್ನಾಟಕ ಬ್ಯಾಂಕಿನ ಪಕ್ಕದ ರಸ್ತೆ ನಮ್ಮ ಮಾರುತಿ ಬಡಾವಣೆಯಲ್ಲಿ ಅವರ ಮನೆಯಿದ್ದಾಗ ನಾನು ಅವರನ್ನು ಮೊದಲ ಸಲ ನೋಡಿದ್ದೆ.
ಅಮೇರಿಕಾದಲ್ಲಿ ನಾಲ್ಕು ದಶಕಗಳ ವಾಸಿ ಶ್ರೀ.ಪ್ರಸಾದ್ ಅರ್ಗಾಲ್ ಅವರು ದೇವಯ್ಯ ಪಾರ್ಕಿನ ಸವಿಸಾಗರ್ ಪಕ್ಕದ ಈಸ್ಟರ್ನ್ ಮೆಡಿಕಲ್ ಶಾಪಿನ ಶ್ರೀ.ಸುಭಾಷ್ ಚಂದ್ ಪೀಪಾಡ, ಭಾರತೀಯ ಜೀವ ವಿಮಾ ಸಂಸ್ಥೆಯಲ್ಲಿ ನಿವೃತ್ತರಾಗಿರುವ ಶ್ರೀ.ಜಿ ನಾರಾಯಣ ಎಸ್ ಕೆ ಎಫ್ ಕಂಪನಿಯ ಶ್ರೀ.ರಾಘವೇಂದ್ರ ಭಟ್ಟ,ಶ್ರೀ.ಎಂ ಎಸ್ ರಾಘವೇಂದ್ರ, ಶೇಷಾದ್ರಿಪುರಂ ಕಾಂಪೋಸಿಟ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಜಿ ಕೆ ಮಂಜುನಾಥ್ ಹೀಗೆ ವಿಸ್ತರಿಸಿದ ಹಲವಾರು ಮಂದಿ ಶ್ರೀ.ಎಸ್ ಆರ್ ರಾಮಮೂರ್ತಿಯವರ ವಿದ್ಯಾರ್ಥಿಗಳು.
ಶ್ರೀ.ಜಿ ಕೆ ಮಂಜುನಾಥ್ ಅವರು ತಮ್ಮ ಗುರುಗಳ ಬಗ್ಗೆ ಯಾವುದೇ ಅನುಮಾನವಿಲ್ಲ ಅವರೊಬ್ಬ ದಂತಕತೆ.ಅಸಾಧಾರಣವಾದ ಪ್ರತಿಭಾವಂತ ಮತ್ತು ಅತಿ ಉತ್ಕೃಷ್ಟ ಬುದ್ಧುವಂತಿಕೆಯ ವ್ಯಕ್ತಿ ಅವರಾಗಿದ್ದರು.ಹಲವಾರು ವರ್ಷ ಅವರು ಸರ್ವೋದಯ ಪ್ರೌಢಶಾಲೆಯಲ್ಲಿ ದುಡಿದು ನಂತರ ತಮ್ಮ ಅಮೂಲ್ಯವಾದ ಸೇವೆಯನ್ನು ಸಾಂದೀಪನಿ ಶಾಲೆಗೆ ನೀಡಿದ್ದಾರೆ.ಅವರ ಬೋಧನಾ ಶೈಲಿಯೇ ಅಮೋಘ. ಬಹಳ ಚಿಟ್ಟು ಹಿಡಿಸುವಂತಹ ಪಠ್ಯವಿದ್ದರೂ ಅದನ್ನೇ ಅವರು ತಮ್ಮ ಕೌಶಲ್ಯದ ವಿವರಣೆಯ ಮೂಲಕ ಆಸಕ್ತಿ ಹುಟ್ಟಿಸುವಂತೆ ಪರಿವರ್ತಿಸುತ್ತಿದ್ದರು. ಪಾಠ ಮಾಡುವಾಗ ಅವರು ಹಲವು ಜೀವಂತ ಮತ್ತು ನೇರ ಉದಾಹರಣೆಗಳನ್ನು ನೀಡುತ್ತಿದ್ದರು. ಕಪ್ಪು ಹಲಗೆಯ ಮೇಲೆ ಅವರ ಅಂದವಾದ ಬರವಣಿಗೆಯನ್ನು ನೋಡುವುದೇ ವಿದ್ಯಾರ್ಥಿಗಳಿಗೆ ಖುಶಿ ತರುತ್ತಿತ್ತು. "ನನಗೆ ಚೆನ್ನಾಗಿ ನೆನಪಿದೆ. ಒಮ್ಮೆ ಪಾಠ ಮಾಡುತ್ತಾ ಸರ್ ನಾನು ಕುಳಿತಿದ್ದ ಕಡೆ ಬಂದರು. ಕನ್ನಡಕ ಮುಟ್ಟಿಕೊಳ್ಳುತ್ತ ನನ್ನನ್ನು ನೋಡಿ ಹೇಳಿದರು,'ಮಂಜು ನನಗೆ ಹಸಿವಾಗಿದೆ ನೀನು ಮುದ್ದಾಗಿದೀಯ ನಿನ್ನನ್ನು ತಿನ್ನುತೀನಿ ' ಅಂತ ನಾನು ನನ್ನ ಡಬ್ಬಿಯಲ್ಲಿದ್ದ ಸೇಬನ್ನು ಕೊಟ್ಟು ನನ್ನ ಬಿಟ್ಟುಬಿಡಿ ಎಂದಿದ್ದೆ. ಪುನಃ ನಾನು ಹತ್ತನೇ ತರಗತಿಯಲ್ಲಿದ್ದಾಗ ಒಮ್ಮೆ ಅವರು ನನ್ನ ಮಗಳನ್ನು ಮದುವೆಯಾಗುತ್ತಿಯಾ ಎಂದು ಕೇಳಿದ್ದರು.ನನಗೆ ಆಗ ಅದು ಮುಜುಗರದ ಕ್ಷಣ,ಆಗ ಅದು ಅವರ ಹಾಸ್ಯದ ಮಾತಾಗಿತ್ತು. ಪುನಃ ನಾನು ಸರ್ವೋದಯ ಪದವಿಪೂರ್ವ ಕಾಲೇಜಿನಲ್ಲಿ ಅವರ ಸಹೋದ್ಯೋಗಿಯಾದಾಗ ಪುನಃ ನನ್ನ ಮಗಳನ್ನು ಮದುವೆಯಾಗುತ್ತಿಯಾ ಎಂದು ಕೇಳಿದ್ದರು.ಆದರೆ ಅವರು ಗಂಭೀರವಾಗಿಯೇ ಕೇಳಿದ್ದರು.ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ.ಆರು ತಿಂಗಳ ಹಿಂದೆ ಅವರ ಮನೆಗೆ ಬರಲು ಹೇಳಿದ್ದರು.ನನಗೆ ಹೋಗಲು ಸಾಧ್ಯವಾಗಲಿಲ್ಲ.ಮತ್ತೆಂದೂ ಅವರನ್ನು ನೋಡದಂತೆ ಅವರು ಕಣ್ಮರೆಯಾದರು.ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎನ್ನುತ್ತಾರೆ.
ಮತ್ತೊಬ್ಬ ವಿದ್ಯಾರ್ಥಿ ಎಂ ಎಸ್ ರಾಘವೇಂದ್ರ ಅವರು ಎಸ್ ಆರ್ ಆರ್ ಅವರ ಬಗ್ಗೆ ತುಂಬಾ ನೆನಪುಗಳು ಇದೆ.ನಾನು ಎಂಟನೇ ತರಗತಿಗೆ ಸೇರಿದಾಗ ಅವರ ಪರಿಚಯ ಆಯಿತು.ನಮ್ಮ ತಂದೆಗೆ ಪಾಠ ಮಾಡ್ತಿದ್ದರು,ನಮ್ಮ ತಂದೆಯ ಸೋದರ ಮಾವ ಕೆ ಎನ್ ನರಹರಿ ಸಹ ಅವರ ಸಹೋದ್ಯೋಗಿ ಆಗಿದ್ದರು.ಅವರ ಮನೆಗೆ ಸಂಜೆ ಪಾಠಕ್ಕೆ ಹೋಗಿತ್ತಿದ್ದೆ. ಲಅವರಿಗೆ ಎರಡು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದರು. ಅವರು ಬಹಳ ಪ್ರಖ್ಯಾತರಾಗಿದ್ದವರು.ನಮಗೆ ಇಂಗ್ಲಿಷ್ ಟೀಚರ್ ಆಗಿದ್ದರು,
ನಾನು ಅವರು ಹತ್ತನೇ ತರಗತಿಯ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದಾಗ ನಾನು ಕೂಡಾ ಹೋಗಿ ಕೇಳುತ್ತಿದ್ದೆ. ಅಂತಹ ಆಸಕ್ತಿ ಅವರ ಪಾಠದಲ್ಲಿ ನನಗಿತ್ತು ಎನ್ನುತ್ತಾರೆ. ಇಂತಹ ಹಲವಾರು ವಿದ್ಯಾರ್ಥಿಗಳ ಅನುಭವಗಳಲ್ಲಿ ಮತ್ತು ಹೃದಯಗಳಲ್ಲಿ ಶ್ರೀ.ಎಸ್ ಆರ್ ರಾಮಮೂರ್ತಿಯವರು "ಎಸ್ ಆರ್ ಆರ್" ಎಂಬ ರೋಮಾಂಚನ ನೀಡುವ ಸಂಕ್ಷಿಪ್ತ ಹೆಸರಿನಿಂದಲೇ ಖಾಯಂ ನೆಲೆಸಿದ್ದಾರೆ.
ಸಿ ಎನ್ ರಮೇಶ್
9844295260