ವಾರ್ತಾಜಾಲ,ಶಿಡ್ಲಘಟ್ಟ
ತಾಲ್ಲೂಕಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳಲ್ಲಿ ಇಂದಿನಿಂದ ಪರೀಕ್ಷೆ ಬರೆಯಲಿರುವ ಸರ್ಕಾರಿ, ವಸತಿಯುತ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದ್ದಾರೆ.
ಈ ಕುರಿತು ವಿವರಿಸಿದ ಅವರು, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಗೊತ್ತುಪಡಿಸಿದ ನಾಲ್ಕು ಬಿಸಿಯೂಟ ತಯಾರಿಕೆ ಶಾಲಾಕೇಂದ್ರಗಳಲ್ಲಿ ಆಹಾರವನ್ನು ಪಡೆಯಬಹುದಾಗಿದೆ. ಶಿಡ್ಲಘಟ್ಟ ಪಟ್ಟಣದ ಸರ್ಕಾರಿ ಪ್ರೌಢಶಾಲೆ, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ, ಬಶೆಟ್ಟಹಳ್ಳಿ ಕೆಪಿಎಸ್ ಶಾಲೆ, ಮಳ್ಳೂರು ಸ್ವಾಮಿವಿವೇಕಾನಂದ ಪ್ರೌಢಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ದಿನಗಳಂದು ಮಧ್ಯಾಹ್ನ ಪರೀಕ್ಷೆ ನಂತರ ಬಿಸಿಯೂಟ ಪಡೆಯಬೇಕು. ಒಟ್ಟು ಸುಮಾರು 1129 ವಿದ್ಯಾರ್ಥಿಗಳು ಬಿಸಿಯೂಟ ಪ್ರಯೋಜನ ಪಡೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ.