BIG NEWS ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ

varthajala
0

ನವದೆಹಲಿ : ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಸಿಎಎ ಪೌರತ್ವ ಕಾಯ್ದೆಯ ನಿಯಮಗಳ ಅಧಿಸೂಚನೆ ಹೊರಬಿದ್ದಿದೆ. 2019ರಲ್ಲಿ ಸಂಸತ್ತಿನಲ್ಲಿ ಸಿಎಎ ಕಾಯ್ದೆಗೆ ಅನುಮೋದನೆ ಸಿಕ್ಕರೂ, ಅಧಿಸೂಚನೆ ಹೊರಡಿಸಿರಲಿಲ್ಲ. ಪ್ರತಿಭಟನೆ, ವಿರೋಧಗಳಿಂದ ವಿಳಂಬವಾಗಿತ್ತು. ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಮುನ್ನ ಸಿಎಎ ಜಾರಿಗೊಳಿಸುವುದಾಗಿ ಅಮಿತ್ ಶಾ ಪುನರುಚ್ಚರಿಸಿದ್ದರು. ಸಿಎಎ ನಿಮಯಗಳ ಅಧಿಸೂಚನೆ ಹೊರಡಿಸಲಾಗಿದೆ.  ಗೃಹ ಸಚಿವಾಲಯ ಇಂದು ಪೌರತ್ವ ಕಾಯ್ದೆ 2019 (CAA-2019)ಅಡಿಯಲ್ಲಿನ ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ 2024ರ ನಿಯಮದ ಪ್ರಕಾರ  CAA-2019 ಅಡಿಯಲ್ಲಿ ಅರ್ಹರಾಗಿರುವ ವ್ಯಕ್ತಿಗಳು ಭಾರತೀಯ ಪೌರತ್ವ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಹಾಗೂ ಅರ್ಹರಿಗೆ ಪೌರತ್ವ ನೀಡಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. 

ಮುಸ್ಲಿಮರ ಪೌರತ್ವ ಕಿತ್ತುಕೊಳ್ಳಲಾಗುತ್ತದೆ ಅನ್ನೋ ಉಹಾಪೋಹಗಳು ಕಾಯ್ದೆ ಜೊತೆಗೆ ಹಬ್ಬಿತ್ತು. ಹೀಗಾಗಿ ಭಾರಿ ಪ್ರತಿಭಟನೆಗಳು  ನಡೆದಿತ್ತು. ಭಾರತದಲ್ಲಿನ ಮುಸ್ಲಿಮರ ಅಥವಾ ಇನ್ಯಾವುದೇ ಸಮುದಾಯದ ನಾಗರೀತರ ಪೌರತ್ವಕ್ಕೆ ಈ ಕಾಯ್ದೆಯಿಂದ ಧಕ್ಕೆ ಇಲ್ಲ ಅನ್ನೋದನ್ನು ಕೇಂದ್ರ ಸ್ಪಪ್ಟಪಡಿಸಿದೆ.

2019ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಇದೀಗ ಈ ಕಾಯ್ದೆ ಕುರಿತು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಪ್ರಮುಖವಾಗಿ ಈ ಕಾಯ್ದೆಯಡಿ ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಗಾನಿಸ್ತಾನದಿಂದ ಭಾರತಕ್ಕೆ 2014ರ ಡಿ. 31ಕ್ಕಿಂತ ಮೊದಲು ಆಗಮಿಸಿ ನೆಲೆಸಿದವರಿಗೆ ಭಾರತದ ಪೌರತ್ವ ನೀಡುವ ಕುರಿತಾಗಿದೆ. ಈ ಮೂರು ದೇಶಗಳಿಂದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರು ತಮ್ಮ ತಮ್ಮ ದೇಶದಲ್ಲಿ ನಡೆದ ನರಮೇಧ, ದೌರ್ಜನ್ಯಗಳಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದು ನೆಲೆಸಿದವರಿಗೆ ಪೌರತ್ವ ನೀಡುವ ಕುರಿತು ಕಾಯ್ದೆ ಹೇಳುತ್ತದೆ. 

ಕಾಯ್ದೆಯಲ್ಲಿ ಪ್ರಮುಖಾಗಿ ಉಲ್ಲೇಖಿಸಿರುವ ಅಂಶ, ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವುದಾಗಿದೆ. ಮುಸ್ಲಿಮರನ್ನು ಕಾಯ್ದೆಯಿಂದ ಹೊರಗಿಟ್ಟ ವಿಚಾರಕ್ಕೆ ಅಸಮಾಧಾನಗಳು ವ್ಯಕ್ತವಾಗಿತ್ತು.

ಅಧಿಸೂಚನೆಯಿಂದ ಇದೀಗ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ, ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವ ಸಿಗಲಿದೆ. ಇದರಿಂದ ಕೇಂದ್ರ ಹಾಗೂ ಆಯಾ ರಾಜ್ಯದ ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿದೆ. ಈ ಮಹತ್ವದ ಕಾಯ್ದೆ ಅಧಿಸೂಚನೆ ಹೊರಡಿಸುವ ಮೂಲಕ ಬಿಜೆಪಿ ತನ್ನ ಪ್ರಣಾಲಿಕೆಯಲ್ಲಿ ಹೇಳಿದ ಅತೀ ದೊಡ್ಡ ಭರವಸೆಯೊಂದನ್ನು ಪೂರೈಸಿದೆ.

Post a Comment

0Comments

Post a Comment (0)