ಮೇಲ್ಛಾವಣಿ ಸೌರಶಕ್ತಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಮತ್ತು ಸಹಾಯಧನ ಪಡೆಯುವುದು ಹೇಗೆ
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅಂದರೆ ಏನು?
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಭಾರತದಲ್ಲಿ ಮೇಲ್ಛಾವಣಿ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಲು ಬಯಸುವ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿದೆ. ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಸಿಗಲಿದೆ. ಇದೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕೇಂದ್ರ ಸಚಿವ ಸಂಪುಟವು 75,021 ಕೋಟಿ ರೂ. ವೆಚ್ಚದೊಂದಿಗೆ ಫೆಬ್ರವರಿ 29 ರಂದು ಅನುಮೋದನೆ ನೀಡಿದೆ.
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಈ ಯೋಜನೆಯು 2 ಕಿ.ವ್ಯಾ. ಸಾಮರ್ಥ್ಯದವರೆಗಿನ ಸಿಸ್ಟಮ್ ಗಳಿಗೆ ಸೌರ ಘಟಕ ವೆಚ್ಚದ ಶೇ.60 ಮತ್ತು 2 ರಿಂದ 3 ಕಿ.ವ್ಯಾ. ಸಾಮರ್ಥ್ಯದ ನಡುವಿನ ಸಿಸ್ಟಮ್ ಗಳಿಗೆ ಹೆಚ್ಚುವರಿ ಸಿಸ್ಟಮ್ ವೆಚ್ಚದ ಶೇ.40 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಸಹಾಯಧನವನ್ನು 3 ಕಿ.ವ್ಯಾ. ಸಾಮರ್ಥ್ಯಕ್ಕೆ ಮಿತಿಗೊಳಿಸಲಾಗಿದೆ.
ಪ್ರಸ್ತುತ ಮಾನದಂಡದ ಬೆಲೆಗಳಲ್ಲಿ, 1 ಕಿ.ವ್ಯಾ. ಸಿಸ್ಟಮ್ ಗೆ 30,000 ರೂ. ಸಹಾಯಧನ, 2 ಕಿ.ವ್ಯಾ. ಸಿಸ್ಟಮ್ ಗಳಿಗೆ 60,000 ರೂ. ಮತ್ತು 3 ಕಿ.ವ್ಯಾ. ಅಥವಾ ಹೆಚ್ಚಿನ ಸಾಮರ್ಥ್ಯದ ಸಿಸ್ಟಮ್ ಗಳಿಗೆ 78,000 ರೂ. ಸಹಾಯಧನ ದೊರೆಯುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
1. ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು.
2. ಸೌರ ಫಲಕಗಳನ್ನು ಅಳವಡಿಸಲು ಸೂಕ್ತವಾದ ಮೇಲ್ಛಾವಣಿಯನ್ನು ಹೊಂದಿರುವ ಮನೆಯನ್ನು ಹೊಂದಿರಬೇಕು.
3. ಮನೆಯು ಮಾನ್ಯವಾದ ವಿದ್ಯುತ್ ಸಂಪರ್ಕವನ್ನು ಹೊಂದಿರಬೇಕು.
4. ಮನೆಯವರು ಸೌರ ಫಲಕಗಳಿಗೆ ಬೇರೆ ಯಾವುದೇ ಸಹಾಯಧನಯನ್ನು ಪಡೆದಿರಬಾರದು
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ, ಆಸಕ್ತ ಗ್ರಾಹಕರು ರಾಷ್ಟ್ರೀಯ ಪೋರ್ಟಲ್ www.pmsuryaghar.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡುವ ಮೂಲಕ ನೋಂದಾವಣೆ ಮಾಡಬೇಕು. ಸೂಕ್ತವಾದ ಸಿಸ್ಟಮ್ ಗಾತ್ರಗಳು, ಪ್ರಯೋಜನಗಳ ಕ್ಯಾಲ್ಕುಲೇಟರ್, ಮಾರಾಟಗಾರರ ರೇಟಿಂಗ್ ಇತ್ಯಾದಿ ಸಂಬಂಧಿತ ಮಾಹಿತಿಯನ್ನು ಒದಗಿಸುವ ಮೂಲಕ ರಾಷ್ಟ್ರೀಯ ಪೋರ್ಟಲ್ ಸಹಾಯ ಮಾಡುತ್ತದೆ. ಮೇಲ್ಛಾವಣಿ ಸೌರ ಘಟಕವನ್ನು ಸ್ಥಾಪಿಸಲು ಬಯಸುವ ಗ್ರಾಹಕರು ಮಾರಾಟಗಾರರನ್ನು ಆಯ್ಕೆ ಮಾಡಬಹುದು.
ಸೌರ ಘಟಕಕ್ಕಾಗಿ ಗ್ರಾಹಕರು ಸಾಲ ಸೌಲಭ್ಯವನ್ನು ಪಡೆಯಬಹುದೇ?
ಹೌದು. 3 ಕಿ.ವ್ಯಾ. ವರೆಗಿನ ವಸತಿ RTS ಸಿಸ್ಟಮ್ ಗಳ ಸ್ಥಾಪನೆಗಾಗಿ ಪ್ರಸ್ತುತ ಸುಮಾರು ಶೇ.7 ರಷ್ಟು ಖಾತರಿ ರಹಿತ ಕಡಿಮೆ-ಬಡ್ಡಿ ಸಾಲ ಪಡೆಯಬಹುದು. ಕಾಲಕಾಲಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಧರಿಸುವ ಚಾಲ್ತಿಯಲ್ಲಿರುವ ರೆಪೋ ದರಕ್ಕಿಂತ ಶೇ.0.5 ರಷ್ಟು ಬಡ್ಡಿದರವನ್ನು ನಿಗದಿಪಡಿಸಲಾಗಿದೆ. ರೆಪೋ ದರವು ಪ್ರಸ್ತುತ ಶೇ.6.5 ರಷ್ಟಿದ್ದು, ಶೇ.5.5ಕ್ಕೆ ಇಳಿಕೆಯಾದರೆ, ಗ್ರಾಹಕರಿಗೆ ಪರಿಣಾಮಕಾರಿ ಬಡ್ಡಿದರವು ಪ್ರಸ್ತುತ ಇರುವ ಶೇ.7 ರ ಬದಲಿಗೆ ಶೇ.6 ಆಗುತ್ತದೆ.
ಸಹಾಯಧನ ಪಡೆಯಲು ಹಂತ ಹಂತವಾಗಿ ಏನು ಮಾಡಬೇಕು?
ಹಂತ 1
· ಕೆಳಗಿನವುಗಳೊಂದಿಗೆ ಪೋರ್ಟಲ್ನಲ್ಲಿ ನೋಂದಾಯಿಸಿ
· ನಿಮ್ಮ ರಾಜ್ಯ ಮತ್ತು ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆಮಾಡಿ
· ನಿಮ್ಮ ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನಮೂದಿಸಿ.
ಹಂತ 2
· ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ
· ಫಾರ್ಮ್ ಪ್ರಕಾರ ಮೇಲ್ಛಾವಣಿ ಸೌರ ಘಟಕಕ್ಕಾಗಿ ಅರ್ಜಿ ಸಲ್ಲಿಸಿ
ಹಂತ 3
· ನೀವು ಕಾರ್ಯಸಾಧ್ಯತೆಯ ಅನುಮೋದನೆಯನ್ನು ಪಡೆದರೆ, ಯಾವುದೇ ನೋಂದಾಯಿತ ಮಾರಾಟಗಾರರಿಂದ ಘಟಕವನ್ನು ಸ್ಥಾಪಿಸಬಹುದು
ಹಂತ 4
· ಅನುಸ್ಥಾಪನೆಯು ಪೂರ್ಣಗೊಂಡ ನಂತರ, ಘಟಕದ ವಿವರಗಳನ್ನು ಸಲ್ಲಿಸಿ ಮತ್ತು ನೆಟ್ ಮೀಟರ್ಗೆ ಅರ್ಜಿ ಸಲ್ಲಿಸಿ.
ಹಂತ 5
· ನೆಟ್ ಮೀಟರ್ ಅನ್ನು ಸ್ಥಾಪಿಸಿದ ನಂತರ ಮತ್ತು DISCOM ತಪಾಸಣೆಯ ನಂತರ ಕಾರ್ಯಾರಂಭದ ಪ್ರಮಾಣಪತ್ರವನ್ನು ಪೋರ್ಟಲ್ ನಲ್ಲಿ ರಚಿಸಲಾಗುತ್ತದೆ.
ಹಂತ 6
· ನೀವು ಕಾರ್ಯಾರಂಭದ ವರದಿಯನ್ನು ಪಡೆದ ನಂತರ, ಪೋರ್ಟಲ್ ಮೂಲಕ ಬ್ಯಾಂಕ್ ಖಾತೆ ವಿವರಗಳು ಮತ್ತು ರದ್ದುಗೊಂಡ ಚೆಕ್ ಅನ್ನು ಸಲ್ಲಿಸಿ. 30 ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಸಹಾಯಧನವನ್ನು ಪಡೆಯುತ್ತೀರಿ.
ಮನೆಯವರು ಮೇಲ್ಛಾವಣಿ ಸೌರ ಯೋಜನೆಯನ್ನು ಏಕೆ ಆರಿಸಿಕೊಳ್ಳಬೇಕು?
ಅರ್ಥಶಾಸ್ತ್ರ ಸರಳವಾಗಿದೆ. ಮನೆಗಳು ವಿದ್ಯುತ್ ಬಿಲ್ ಗಳನ್ನು ಉಳಿಸಲು ಮತ್ತು ಹೆಚ್ಚುವರಿ ವಿದ್ಯುತ್ ಅನ್ನು DISCOM ಗಳಿಗೆ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.
ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯು 3 ಕಿ.ವ್ಯಾ. ಸಾಮರ್ಥ್ಯದ ಮೇಲ್ಛಾವಣಿ ಸೌರ ಘಟಕವನ್ನು ಸ್ಥಾಪಿಸುವ ಮೂಲಕ ತಿಂಗಳಿಗೆ 300 ಯೂನಿಟ್ ಗಳವರೆಗೆ ವಿದ್ಯುತ್ ಬಳಸುವ ಕುಟುಂಬಕ್ಕೆ ಒಂದು ವರ್ಷದಲ್ಲಿ ಅಂದಾಜು 15,000 ರೂ. ಉಳಿತಾಯದ ಭರವಸೆ ನೀಡುತ್ತದೆ. ಅಂತಹ ಕುಟುಂಬವು ತನ್ನ ಸ್ವಂತ ವಿದ್ಯುತ್ ಅನ್ನು ಉತ್ಪಾದಿಸುವ ಮೂಲಕ ತಿಂಗಳಿಗೆ ಸುಮಾರು ರೂ. 1,800 – ರೂ.1875 ರವರೆಗೆ ವಿದ್ಯುತ್ ಬಿಲ್ ನಲ್ಲಿ ಉಳಿಸುತ್ತದೆ.
ಸೌರ ಘಟಕಕ್ಕೆ ಹಣಕಾಸು ಒದಗಿಸಲು ಪಡೆದ ಸಾಲದ ಮೇಲೆ ರೂ.610 ರ ಇಎಂಐ ಪಾವತಿಯನ್ನು ಕಳೆದ ನಂತರವೂ, ತಿಂಗಳಿಗೆ ಸುಮಾರು 1,265 ರೂ. ಅಥವಾ ವರ್ಷದಲ್ಲಿ ಸುಮಾರು 15,000 ರೂ. ಉಳಿತಾಯವಾಗುತ್ತದೆ. ಸಾಲವನ್ನು ಪಡೆಯದ ಕುಟುಂಬಗಳ ಉಳಿತಾಯವು ಇನ್ನೂ ಹೆಚ್ಚಾಗಿರುತ್ತದೆ. ಇದಲ್ಲದೆ, ನವೀಕರಿಸಬಹುದಾದ ಇಂಧನವನ್ನು ಆರಿಸಿಕೊಳ್ಳುವ ಮೂಲಕ, ಹಸಿರು ಗ್ರಹಕ್ಕೆ ಕೊಡುಗೆ ನೀಡಲು ಇದೊಂದು ಸದಾವಕಾಶವಾಗಿದೆ.