ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ ಅನುಷ್ಟಾನ ಕಡ್ಡಾಯ

varthajala
0

ತುಮಕೂರು : ಶಾಲೆ, ವಸತಿ ನಿಲಯ ಹಾಗೂ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲೂ ಮಕ್ಕಳ ರಕ್ಷಣಾ ನೀತಿ ಅನುಷ್ಟಾನ ಮಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಕರ್ನಾಟಕದಲ್ಲಿ ರಾಜ್ಯ ಮಕ್ಕಳ ರಕ್ಷಣಾ ನೀತಿ-2016ರಲ್ಲೇ ಜಾರಿಗೆ ಬಂದಿದ್ದರೂ ಕೂಡ ಬೆರಣಿಕೆಯಷ್ಟು ಸಂಸ್ಥೆಗಳಲ್ಲಿ ಈ ನೀತಿ ಅನುಷ್ಟಾನವಾಗದಿರುವುದು ವಿಪರ್ಯಾಸ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಸದರಿ ನೀತಿಯ ಕಟ್ಟುನಿಟ್ಟಿನ ಅನುಷ್ಟಾನ ಮಾಡುವ ಬಗ್ಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಕ್ತ ಶಿಪಾರಸ್ಸು ನೀಡಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು. 






ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತುಮಕೂರು ಇವರ ಸಹಭಾಗಿತ್ವದಲ್ಲಿ ತುಮಕೂರು ನಗರದ ಬಾಲಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಹಾಗೂ ಮಕ್ಕಳ ರಕ್ಷಣಾ ಕಾನೂನುಗಳ ಕುರಿತು ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ರಾಜ್ಯದಲ್ಲಿ ಮಕ್ಕಳು ವಿವಿಧ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ, ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ, ಬಾಲ ಗರ್ಭಿಣಿಯರು, ಬಾಲ್ಯ ವಿವಾಹ, ಬಾಲ ಕಾರ್ಮಿಕರು ಹೀಗೆ ಮಕ್ಕಳು ಹಲವು ರೀತಿಯ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕಿದ್ದು ಮಕ್ಕಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ತುಮಕೂರು ಜಿಲ್ಲೆಯಲ್ಲಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲೂ 2024 ಜೂನ್ ತಿಂಗಳ ಒಳಗಾಗಿ ಮಕ್ಕಳ ರಕ್ಷಣಾ ನೀತಿ ಜಾರಿಗೊಳಿಸುವುದು ಕಡ್ದಾಯವೆಂದರು. 

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನೀಸರವರು ಮಾತನಾಡಿ ಮಕ್ಕಳ ಪರವಾದ ಕಾಯಿದೆ ಮತ್ತು ಕಾರ್ಯಕ್ರಮಗಳನ್ನು ಅರ್ಥಮಾಡಿಕೊಂಡು ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸಾಧ್ಯ. ತಳಮಟ್ಟದಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ತಮ್ಮ ವ್ಯಾಪ್ತಿಯ ಬರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ಪಾಲನೆ ಮಾಡಬೇಕು. ದೇಶದ ದೊಡ್ಡ ಸಂಖ್ಯೆಯಲ್ಲಿನ ಮಕ್ಕಳು ದೇಶದ ಸಂಪತ್ತು ಅವರ ಹಕ್ಕುಗಳನ್ನು ಗೌರವಿಸುವುದು ಹಾಗೂ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. 

ಕಾರ್ಯಕ್ರಮದ ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಕೆ. ರಾಘವೇಂದ್ರ ಭಟ್, ಪ್ರಾದೇಶಿಕ ಸಂಯೋಜಕರು, ಯುನಿಸೆಫ್, ಮಕ್ಕಳ ಸಂರಕ್ಷಣಾ ಯೋಜನೆ, ಇವರು ಮಾತನಾಡಿ ದೇಶದ ಜನಸಂಖ್ಯೆಯಲ್ಲಿ ಶೇ.42ರಷ್ಟು ಮಕ್ಕಳಿದ್ದು, ಮಕ್ಕಳಿಗೆ ಹಲವಾರು ಕಾನೂನುಗಳಿದ್ದರೂ ಸಮಾಜದಲ್ಲಿ ಮಕ್ಕಳು ಒಂದಲ್ಲಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವುದು ಕಂಡುಬಂದಿರುತ್ತದೆ. ಇಂತಹ ಮಕ್ಕಳು ಸಂಕಷ್ಟದಿಂದ ಪಾರಾಗಲು ಮಕ್ಕಳ ಸಹಾಯವಾಣಿ-1098ಕ್ಕೆ ಮಾಹಿತಿ ನೀಡುವಂತೆ ತಿಳಿಸಿದರು.
ಪ್ರತಿಯೊಂದು ಶಾಲೆಯಲ್ಲಿಯೂ ಶಾಶ್ವತ ಫಲಕದಲ್ಲಿ ಮಕ್ಕಳ ಸಹಾಯವಾಣಿ-1098 ಅಳವಡಿಸುವಂತೆ ಹಾಗೂ ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ ರಚಿಸಿ ಸಂಸ್ಥೆಯ ಮುಖ್ಯಸ್ಥರಿಂದ ಹಿಡಿದು ಸ್ವಚ್ಛತಾಗಾರರವರೆಗೂ ಬದ್ಧತಾ ಪತ್ರಕ್ಕೆ ಸಹಿ ಹಾಕುವಂತೆ ತಿಳಿಸಿದರು. ತೆರೆದ ಮನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿ ಗುರುವಾರ ಪೊಲೀಸ್ ಠಾಣೆಗೆ ಮಕ್ಕಳನ್ನು ಕರೆ ತಂದು ಠಾಣೆಯ ಬಗ್ಗೆ, ಮಕ್ಕಳ ಕಾನೂನುಗಳ ಬಗ್ಗೆ ಪರಿಚಯಿಸುವಂತೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಅನುಷಾ, ಬಾಲ ನ್ಯಾಯ ಮಂಡಳಿ ಸದಸ್ಯೆ ಶ್ರೀಮತಿ ಶಾಲಿನಿ ಹೆಚ್. ಆರ್ ಹಾಗೂ ತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ  ವಸತಿ ಶಾಲೆಯ ಪ್ರಾಂಶುಪಾಲರು, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು, ಅಧಿಕಾರಿ/ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಸಂಯೋಜಕರು, ಸಿ.ಆರ್.ಪಿ, ಬಿ.ಆರ್.ಪಿ,  ಶಾಲಾ ಮುಖ್ಯ ಶಿಕ್ಷಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಸಹಯಾವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು. 

Post a Comment

0Comments

Post a Comment (0)