ಬೆಂಗಳೂರು, ಫೆಬ್ರವರಿ 19, (ಕರ್ನಾಟಕ ವಾರ್ತೆ) : ಅಕ್ಟೋಬರ್'2021 ರಲ್ಲಿ ನಡೆದ 545 ಪಿಎಸ್‍ಐ ಹುದ್ದೆಗಳ ಆಯ್ಕೆಯ ಅಖಿತ ಪರೀಕ್ಷೆಯಲ್ಲಿ ಅಕ್ರಮ ನೇಮಕ ಹಗರಣದಲ್ಲಿ ಕಲಬುರಗಿ ನಗರ, ಅಶೋಕನಗರ ಪೆÇಲೀಸ್ ಠಾಣೆ ಮೊ.ಸಂ.98/2022 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದುಗೌಡ ಮತ್ತು ಪರಮೇಶ ಎಂಬ ಅಭ್ಯರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಉತ್ತರಗಳನ್ನು ಬ್ಲೂಟೂತ್ ಡಿವೈಸ್ ಮೂಲಕ ಉತ್ತರ ಹೇಳಿ ಅವರುಗಳನ್ನು ಅಕ್ರಮವಾಗಿ ಆಯ್ಕೆ ಮಾಡಲು ಕಾರಣೀಕರ್ತರಾದ 3 ಜನ ಆರೋಪಿತರನ್ನು ಸಿಐಡಿಯ ಎಫ್‍ಐಯು ಘಟಕದ ಅಧಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ.
ಕಲಬುರಗಿ ಜಿಲ್ಲಾ, ಅಫಜಲ್‍ಪುರ ಗ್ರಾಮದ ಚಂದ್ರಕಾಂತ್ ತಿಪ್ಪಣ್ಣ ಪ್ಯಾಟಿ. ಪ್ರಥಮ ದರ್ಜೆ ಸಹಾಯಕ, ಷಹಬಾದ್ ಸಮುದಾಯ ಆರೋಗ್ಯ ಕೇಂದ್ರ. ಕರೇಕನಹಳ್ಳಿ ಗ್ರಾಮದ ಬಸವರಾಜ್ ಸಿದ್ದರಾಮಪ್ಪ ಜಮಾದಾರ್, ಹಾಸ್ಟೆಲ್ ಸೂಪರಿಂಟೆಂಡೆಂಟ್, ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ, ಅಫ್‍ಜಲ್‍ಪುರ, ಕಲಬುರಗಿ ಜಿಲ್ಲೆ. ಕಲಬುರಗಿ ನಗರ, ಹೀರಾಪುರದ ಶಶಿಧರ ಶಿವಶರಣಪ್ಪ ಜಮಾದಾರ್. ಈ ಆರೋಪಿತರುಗಳೆಲ್ಲರೂ ಈಗಾಗಲೇ ದಸ್ತಗಿರಿಯಾಗಿರುವ ಕಲಬುರಗಿ ನಗರದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಜೊತೆ ಸಂಪರ್ಕವಿದ್ದ ಆರೋಪಿಗಳಾಗಿದ್ದು, ಪರೀಕ್ಷಾ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಮೂಲಕ ಉತ್ತರ ಹೇಳಲು ಸಹಾಯ ಮಾಡಿರುತ್ತಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಆರೋಪಿತರುಗಳ ವಿರುದ್ಧ ಎಲ್ಲಾ ಆಯಾಮಗಳಲ್ಲಿ ಮುಂದುವರೆಸಿರುತ್ತಾರೆ. ಸಿಐಡಿಯ ಎಫ್‍ಐಯು ವಿಭಾಗದ ಅಧಿಕಾರಿಗಳು ತನಿಖೆ ಮುಂದುವರೆಸಿರುತ್ತಾರೆ. ಇದುವರೆವಿಗೂ ಪಿಎಸ್‍ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ವಿವಿಧ ಪ್ರಕರಣಗಳಲ್ಲಿ ಒಟ್ಟು 113 ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ದಸ್ತಗಿರಿ ಮಾಡಿರುತ್ತಾರೆ ಎಂದು ಅಪರಾಧ ತನಿಖಾ ಇಲಾಖೆ ಪ್ರಕಟಣೆ ತಿಳಿಸಿದೆ.