ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇದ್ದ ಒಟ್ಟು 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಸರ್ಕಾರದ ನೇಮಕಾತಿ ಹಾಗೂ ಮೀಸಲಾತಿ ನಿಯಮಗಳನ್ವಯ ದಿನಾಂಕ: 30-09-2021ರಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ಅದರಂತೆ ಸರ್ಕಾರದ ಸುತ್ತೋಲೆ ದಿನಾಂಕ: 06-06-2020 ರಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿವಿಧಾನಗಳ ಬಗ್ಗೆ ತಿಳಿಸಲಾಗಿರುತ್ತದೆ. ಸದರಿ ಸುತ್ತೋಲೆಯಲ್ಲಿ ಒಂದೇ ಅಧಿಸೂಚನೆ ಮೂಲಕ ಸ್ಥಳೀಯ ಮತ್ತು ಮಿಕ್ಕುಳಿದ ವೃಂದದ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಹೊರಡಿಸುವ ನೇಮಕಾತಿ ಅಧಿಸೂಚನೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳು ಸ್ಥಳೀಯ ವೃಂದದ ಹುದ್ದೆ ಹಾಗೂ ಮಿಕ್ಕುಳಿದ ವೃಂದದ ಹುದ್ದೆ ಈ ಎರಡೂ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಒಂದು ವೇಳೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿ ಪ್ರಸ್ತುತ ನೇಮಕಾತಿಗೆ ಸಂಬಂಧಿಸಿದಂತೆ ಮುಕ್ಕುಳಿದ ವೃಂದದ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ನೇಮಕಾತಿ ಹೊಂದಿದ್ದಲ್ಲಿ ಅಂತಹ ಅಭ್ಯರ್ಥಿಯು ಜಾರಿಯಲ್ಲಿರುವ ನಿಯಮದಂತೆ ತನ್ನ ಸೇವಾ ಅವಧಿಯಲ್ಲಿ ಅನುಚ್ಛೇದ 371 ಜೆ ಮೀಸಲಾತಿ ಸೌಲಭ್ಯವನ್ನು ಪಡೆಯಲು ಅವಕಾಶವಿರುವುದಿಲ್ಲವೆಂದು ಸ್ಪಷ್ಟೀಕರಿಸಲಾಗಿದೆ. ಅದರಂತೆ ದಿನಾಂಕ: 31-09-2021ರಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದಿನಾಂಕ: 15-06-2022ರಂದು ಮತ್ತೊಂದು ಸುತ್ತೋಲೆಯನ್ನು ಹೊರಡಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳನ್ನು ಹೊರತುಪಡಿಸಿ ಒಂದೇ ಅಧಿಸೂಚನೆ ಹೊರಡಿಸಿ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುವ ಪ್ರಕರಣಗಳಿಗೆ ಸೀಮಿತವಾಗುವಂತೆ ಮಾತ್ರ ದಿನಾಂಕ: 06-06-2020ರ ಸುತ್ತೋಲೆಯಲ್ಲಿ ನೀಡಲಾಗಿರುವ ನಿರ್ದೇಶನಗಳನ್ವಯ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತೆ ಸೂಚಿಸಲಾಗಿರುತ್ತದೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯು ಹೊರಡಿಸಿರುವ ಸುತ್ತೋಲೆಗಳಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ದಿನಾಂಕ: 30-01-2023ರಂದು ಪ್ರಕಟಿಸಲಾಗಿತ್ತು. ತದನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸುತ್ತೋಲೆ ದಿನಾಂಕ: 01-02-2023ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ದಿನಾಂಕ:15-06-2022ರ ಸುತ್ತೋಲೆಯ ಕೊನೆಯ ಕಂಡಿಕೆಯನ್ನು ಮಾತ್ರ ಹಿಂಪಡೆಯಲಾಗಿತ್ತು. ಇನ್ನುಳಿದ ಎಲ್ಲಾ ಅಂಶಗಳು ಯಥಾವತ್ತಾಗಿ ಜಾರಿಯಲ್ಲಿರುತ್ತವೆ ಎಂದು ತಿಳಿಸಲಾಗಿದೆ.
ಅದರಂತೆ ಸರ್ಕಾರದ ದಿನಾಂಕ: 01-02-2023ರ ಸುತ್ತೋಲೆಯ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರಿಷ್ಕøತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ: 17-02-2023ರಂದು ಪ್ರಕಟಿಸಿತು. ತದನಂತರ ದಿನಾಂಕ: 03-03-2023ರಂದು 1208 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಹ ಪ್ರಕಟಿಸಿತು. ದಿನಾಂಕ 17-02-2023ರಂದು ಪ್ರಕಟಿಸಲಾದ ಪರಿಷ್ಕøತ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಹಾಗೂ ದಿನಾಂಕ: 03-03-2023ರಂದು ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯಿಂದ ಬಾಧಿತರಾದ ಮಿಕ್ಕುಳಿದ ವೃಂದದ 10 ಅಭ್ಯರ್ಥಿಗಳಿಂದ ಕರ್ನಾಟಕ ನ್ಯಾಯಮಂಡಳಿಯಲ್ಲಿ ದಾವೆ ಹೂಡಲಾಗಿದೆ. ಅಲ್ಲದೇ ಇದೇ ಸಂಬಂಧವಾಗಿ ಕರ್ನಾಟಕ ಉಚ್ಚನ್ಯಾಯಲಯದಲ್ಲಿ ಅರ್ಜಿದಾರರಿಗೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ. ಈ ತೆಡೆಯಾಜ್ಞೆಯನ್ನು ಕೂಡಲೇ ತೆರವುಗೊಳಿಸಲು ಕ್ರಮವಹಿಸಲಾಗಿದೆ.
ಸಕ್ಷಮ ಪ್ರಾಧಿಕಾರಗಳಿಂದ ಒಟ್ಟು 765 ಅಭ್ಯರ್ಥಿಗಳ ದಾಖಲೆಗಳ ಪರಿಶೀಲನಾ ಕಾರ್ಯ ಪೂರ್ಣಗೊಂಡಿರುತ್ತದೆ. ಸಹಾಯಕ ಪ್ರಾಧ್ಯಪಕರ ಹುದ್ದೆಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ರಾಜ್ಯಪತ್ರದಲ್ಲಿ (ವಿಶೇಷ ರಾಜ್ಯ ಪತ್ರಿಕೆ) ದಿನಾಂಕ: 03-11-2023ರಂದು ಪ್ರಕಟಿಸಲಾಗಿರುತ್ತದೆ. ಸದರಿ ಅಧಿಸೂಚನೆಯನ್ವಯ ಆಯ್ಕೆಯಾದ 1208 ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ನೇಮಕಾತಿ ನಿಯಮಗಳಂತೆ ನೈಜತೆ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆಯುವುದು ಬಾಕಿ ಇರುತ್ತದೆ. ಪ್ರಸ್ತುತ ‘ಡಿ’ ಮತ್ತು ‘ಇ’ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಸಹಾಯಕ ಪ್ರಾಧ್ಯಾಪಕರುಗಳನ್ನು ಬೋಧಕರ ವರ್ಗಾವಣೆ ನಿಯಂತ್ರಣ ನಿಯಮಗಳು 2021ರನ್ವಯ ವರ್ಗಾವಣೆಗೊಳಿಸಿ ಹುದ್ದೆಗಳನ್ನು ಖಾಲಿಗೊಳಿಸದ ನಂತರ ಕೌನ್ಸಿಲಿಂಗ್ ಮೂಖಾಂತರ ಸ್ಥಳ ನಿಯುಕ್ತಿಗೊಳಿಸಬೇಕಿರುತ್ತದೆ. ಸದರಿ ನೇಮಕಾತಿ ನೇಮಕಾತಿ ಕುರಿತಂತೆ ಮಾನ್ಯ ಕೆ.ಎ.ಟಿ. ನ್ಯಾಯಮಂಡಳಿ ಹಾಗೂ ಮಾನ್ಯ ಉಚ್ಛ ನ್ಯಾಯಾಲಯಗಳಲ್ಲಿ ದಾಖಲಾದ ಪ್ರಕರಣ / ಅರ್ಜಿಗಳಲ್ಲಿನ ತಡೆಯಾಜ್ಞೆ ತೆರವಾದ ನಂತರ ಮತ್ತು ಅಂತಿಮ ತೀರ್ಪು ಬಂದ ನಂತರ ಹಾಗೂ ಪ್ರಸ್ತುತ ವಿಧಾನ ಪರಿಷತ್ತಿನ ಪದವೀಧರ ಕ್ಷೇತ್ರಕ್ಕೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಹಾಗೂ ಲೋಕಸಭಾ ಚುನಾವಣಾ ನೀತಿ ಸಂಹಿತೆಯನ್ನು ಗಮನದಲ್ಲಿರಿಸಿಕೊಂಡು ಅಂತಿಮ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.