ಅಪೊಲೊ ಆಸ್ಪತ್ರೆಗಳ 11 ನೇ ಅಂತರರಾಷ್ಟ್ರೀಯ ಆರೋಗ್ಯ ಸಂವಾದ: ರೋಗಿಗಳ ಸುರಕ್ಷತೆ ಪರಿವರ್ತಿಸುವ ತಾಂತ್ರಿಕ ಪ್ರಗತಿಗೆ ಆದ್ಯತೆ
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮತ್ತಿತರ ಗಣ್ಯರು ಭಾಗಿ
ಆರೋಗ್ಯ ರಕ್ಷಣೆಯಲ್ಲಿ ಕೃತಕಬುದ್ದಿಮತ್ತೆ, ಸ್ಮಾರ್ಟ್ ಆಸ್ಪತ್ರೆಗಳು, ರೋಗಿಗಳ ಸುರಕ್ಷತೆ, ಮಾನಸಿಕ ಆರೋಗ್ಯ ಮತ್ತಿತರ ವಿಷಯಗಳ ಕುರಿತು ಬೆಳಕು ಚೆಲ್ಲಿದ ತಜ್ಞರು
ಬೆಂಗಳೂರು, ಫೆ, ೨೩; ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ದೇಶ ಪ್ರಗತಿ ಸಾಧಿಸಿದ್ದು, ರೋಗಿಗಳ ಸುರಕ್ಷತೆ ಮತ್ತು ಡಿಜಿಟಲ್ ಆರೋಗ್ಯ ಉಪಕ್ರಮಗಳಿಗೆ ಸರ್ಕಾರ ಒತ್ತು ನೀಡಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ದೇಶದ ಅತಿದೊಡ್ಡ ಆರೋಗ್ಯ ಸೇವೆ ಒದಗಿಸುವ ಅಪಲೋ ಆಸ್ಪತ್ರೆಗಳ ಸಮೂಹದಿಂದ ರೋಗಿಗಳ ರಕ್ಷಣೆ ಕುರಿತ ಸಮ್ಮೇಳನ ಮತ್ತು ಮಾಹಿತಿ ತಂತ್ರಜ್ಞಾನದ ಮೂಲಕ ಆರೋಗ್ಯ ವಲಯದ ಪರಿವರ್ತನೆ ಕುರಿತು ವೈಟ್ ಫೀಲ್ಡ್ ನ ಶೆರಟನ್ ಹೋಟೆಲ್ ನಲ್ಲಿ ಆಯೋಜಿಸಲಾದ ಸಮ್ಮೇಳನದಲ್ಲಿ ಮಾತನಾಡಿದ ಅವರು, ರೋಗಿಗಳ ರಕ್ಷಣೆ ಮತ್ತು ಮಾಹಿತಿ ತಂತ್ರಜ್ಞಾನದ ಮೂಲಕ ಆರೋಗ್ಯ ವಲಯದ ಪರಿವರ್ತನೆ ಕುರಿತ ಚರ್ಚೆ ಅತ್ಯಂತ ಅರ್ಥಪೂರ್ಣವಾದದ್ದು. ಸುರಕ್ಷಿತ ಮತ್ತು ಪರಿಣಾಮಕಾರಿ ಅರೋಗ್ಯ ಪರಿಸರ ವ್ಯವಸ್ಥೆ ರೂಪಿಸಲು ಇದರಿಂದ ಸಹಕಾರಿಯಾಗಲಿದೆ ಎಂದರು.
ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನ ಕ್ರಾಂತಿಕಾರಕವಾಗಿವೆ. ಆದರೂ ಈ ವಲಯದಲ್ಲಿ ಸಾಕಷ್ಟು ಸವಾಲುಗಳಿವೆ. ಸಮಗ್ರ ಆರೋಗ್ಯ ಕೀಲಿ ಕೈ ಆಗಿದ್ದು, ರೋಗಿಗಳ ಸುರಕ್ಷತೆಯನ್ನು ಪ್ರಧಾನ ಉದ್ದೇಶವಾಗಿಟ್ಟುಕೊಂಡು ಇತ್ತೀಚಿನ ತಂತ್ರಜ್ಞಾನದೊಂದಿಗೆ ಕೇಂದ್ರ ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳನ್ನು ಸಂಯೋಜಿಸಲಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
ಅಪಲೋ ಆಸ್ಪತ್ರೆಗಳ ಸಮೂಹದ ಕಾರ್ಯಕಾರಿ ಉಪಾಧ್ಯಕ್ಷರಾದ ಪ್ರೀತಾ ರೆಡ್ಡಿ ಮಾತನಾಡಿ, “ಇಂದು, ಡಿಜಿಟಲ್ ಮತ್ತು ಟೆಲಿ-ಸೇವೆಗಳು ಆರೋಗ್ಯ ಮುಖ್ಯವಾಹಿನಿಯಲ್ಲಿದ್ದು, ರೋಗಿಗಳ ಸುರಕ್ಷತೆಯ ಮೂಲಭೂತ ಆದರ್ಶಗಳಾಗಿವೆ. ಆರೋಗ್ಯ ವಿತರಣೆಗೆ ನಮ್ಮ ವಿಧಾನ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಕ್ರಿಯಾತ್ಮಕ ಅಗತ್ಯಗಳಿಗೆ ಅನುಗುಣವಾಗಿರಬೇಕು. ಭವಿಷ್ಯದ ರೋಗಿಗಳ ಸುರಕ್ಷತಾ ಕ್ರಮಗಳನ್ನು ಸಂಯೋಜಿಸಲು ಇದು ಸಹಾಯ ಮಾಡುತ್ತದೆ ಎಂದರು.
ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಸಂಗೀತಾ ರೆಡ್ಡಿ ಮಾತನಾಡಿ, “ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ನಿಟ್ಟಿನಲ್ಲಿ ದೇಶ ದಾಪುಗಾಲಿಡುತ್ತಿರುವ ಸಂದರ್ಭದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಭವಿಷ್ಯವನ್ನು ಅರಿತುಕೊಳ್ಳಲು ಅಗತ್ಯವಾದ ಹೆಜ್ಜೆ ಇದಾಗಿದೆ. ಅಂತರಾಷ್ಟ್ರೀಯ ಆರೋಗ್ಯ ಸಂವಾದಗಳೊಂದಿಗೆ ನಾವು ಹೊಸ ಪೀಳಿಗೆಯ ಅಗತ್ಯಗಳನ್ನು ಪೂರೈಸುವ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಬಯೋಕಾನ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ ಮತ್ತು ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ ವಿಶ್ವ ಸಂಸ್ಥೆ ಸಮಿತಿಯ ಮಾಜಿ ಅಧ್ಯಕ್ಷರಾದ ದುಮಿತ್ರು ಪ್ರುನಾರಿಯು ಅವರು "ಐಟಿಯೊಂದಿಗೆ ಆರೋಗ್ಯ ರಕ್ಷಣೆಯನ್ನು ಪರಿವರ್ತಿಸುವ" ಕುರಿತು ತಮ್ಮ ವಿಚಾರ ಮಂಡಿಸಿದರು. ಆರೋಗ್ಯ ರಕ್ಷಣೆಯಲ್ಲಿ ಕೃತಕಬುದ್ದಿಮತ್ತೆ, ಸ್ಮಾರ್ಟ್ ಆಸ್ಪತ್ರೆಗಳು, ರೋಗಿಗಳ ಸುರಕ್ಷತೆ, ಮಾನಸಿಕ ಆರೋಗ್ಯ ಮತ್ತಿತರೆ ವಿಷಯಗಳ ಕುರಿತು ತಜ್ಞರು ಬೆಳಕು ಚೆಲ್ಲಿದರು.