ದೇಶದ್ರೋಹಿಗಳನ್ನು ಬಂಧಿಸುವವರೆಗೂ ಹೋರಾಟ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ
ಬಲಿದಾನಗೈದ ಯೋಧರಿಗೆ ಗೃಹ ಸಚಿವರು ಏನು ಉತ್ತರ ನೀಡುತ್ತಾರೆ?
ಬೆಂಗಳೂರು, ಫೆಬ್ರವರಿ 28, ಬುಧವಾರ : ಪಾಕಿಸ್ತಾನಕ್ಕೆ ಜೈಕಾರ ಹಾಕಿದ ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯ ಹೋರಾಟ ಮುಂದುವರಿಯಲಿದೆ. ಇದು ಕಾಂಗ್ರೆಸ್ ಗೆ ನಾಚಿಕೆಗೇಡಿನ ವಿಚಾರವಾಗಿದ್ದು, ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಒಳಗೆ ದೇಶದ್ರೋಹದ ಚಟುವಟಿಕೆ ನಡೆದಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಹಾಕಲಾಗಿದೆ. ಗೃಹ ಸಚಿವರಿಗೆ ಬೇರೆ ದೇಶಗಳಿಂದಲೂ ಜನರು ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರೆ. ಇಂದು ಅಂತಾರಾಷ್ಟ್ರೀಯ ಸುದ್ದಿಯಾದರೂ ಕಾಂಗ್ರೆಸ್ ಮಾತ್ರ ಇದನ್ನು ನಂಬುತ್ತಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಲಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಂತೂ ಮಾಧ್ಯಮಗಳಿಗೆ ಬೆದರಿಕೆ ಹಾಕಿದ್ದಾರೆ ಎಂದರು.
ಈ ಘಟನೆ ನಡೆದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಚಿವ ಸಂಪುಟ ಸಭೆ ನಡೆಸಿ ಖಂಡಿಸಿ, ಪಾತಕಿಗಳನ್ನು ಹೆಡೆಮುರಿ ಕಟ್ಟಿ ತರುತ್ತೇವೆ ಎಂದು ಪ್ರಕಟಿಸಬೇಕಿತ್ತು. ಆದರೆ ಸಂಪುಟ ಸಭೆ ನಡೆಸಿಲ್ಲ, ಒಬ್ಬ ಸಚಿವರು ಕೂಡ ಘಟನಾ ಸ್ಥಳಕ್ಕೆ ಬಂದಿಲ್ಲ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮಾಧ್ಯಮಗಳನ್ನೇ ನಿಂದಿಸಿದ್ದಾರೆ. ಇದು ಎಲ್ಲೋ ದೂರದ ಹಳ್ಳಿಯಲ್ಲಿ ನಡೆದಿಲ್ಲ. ವಿಧಾನಸೌಧದಲ್ಲೇ ನಡೆದಿರುವ ಘಟನೆಗೆ ಸಾಕ್ಷಿ ಕೇಳುತ್ತಿದ್ದಾರೆ. 24 ಗಂಟೆಯಾದರೂ ಯಾರನ್ನೂ ಬಂಧಿಸಿಲ್ಲ, ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಕುರಿತು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು. ಕೂಡಲೇ ಸರ್ಕಾರವನ್ನು ವಿಸರ್ಜಿಸುವಂತೆ ಮನವಿ ಮಾಡಲಾಗುವುದು. ಗಡಿಗಳಲ್ಲಿ ಯೋಧರು ದೇಶ ಕಾಯುತ್ತಿದ್ದಾರೆ. ಅನೇಕರು ಬಲಿದಾನ ಮಾಡಿದ್ದಾರೆ. ಅವರಿಗೆ ಗೃಹ ಸಚಿವರ ಉತ್ತರ ಏನು? ಎಂದು ಪ್ರಶ್ನಿಸಿದರು.