ಬೆಂಗಳೂರು, ಫೆ, 29; ಜನರಿಂದ ಜನರ ಜೊತೆ ಸಂಪರ್ಕ ಹೊಂದುವ ಉದ್ದೇಶದೊಂದಿಗೆ ನಗರದಲ್ಲಿ ಪೆರು ದೇಶದ ಜೊತೆಗೂಡಿ “ಅಂತರರಾಷ್ಟ್ರೀಯ ಪಿಸ್ಕೋ ಸೌರ್ ಡೇ” ಆಚರಿಸಲಾಯಿತು. ದೇಶ, ವಿದೇಶಗಳ 30ಕ್ಕೂ ಅಧಿಕ ರಾಯಭಾರಿಗಳು, ಗೌರವ ರಾಯಭಾರಿಗಳು, ಗಣ್ಯರು ಭಾಗಿಯಾಗಿದ್ದರು.
ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೆರು ದೇಶದ ಕಲೆ, ಸಂಸ್ಕೃತಿ ಮತತಿತರ ವಿಚಾರಗಳ ಬಗ್ಗೆ ವಿಚಾರ ವಿನಿಯಮ ನಡೆಯಿತು. ದ್ರಾಕ್ಷಿಯಿಂದ ತಯಾರಿಸುವ ಪೆರು ರಾಷ್ಟ್ರದ ರಾಷ್ಟ್ರೀಯ ಪಾನೀಯವಾದ “ಪಿಸ್ಕೋ” ಮದ್ಯವನ್ನು ವಿತರಿಸಲಾಯಿತು.
ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ “ಪಿಸ್ಕೋ” ಪಾನೀಯ ಮಾರಾಟ, ಪರಸ್ಪರ ವ್ಯಾಪಾರ ವಹಿವಾಟು ವೃದ್ಧಿಸುವ, ಸಾಂಸ್ಕೃತಿಕ ವಿನಿಯಮ ಮಾಡುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಪೆರು ರಾಯಭಾರಿ ಜೇವಿಯರ್ ಪುಲಿನಿಚ್ ಮಾತನಾಡಿ, ಬೆಂಗಳೂರಿನಲ್ಲಿ ಇಂತಹ ಮಹತ್ವದ ಕಾರ್ಯಕ್ರಮ ಆಯೋಜಿಸುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಬೆಂಗಳೂರಿನಲ್ಲಿರುವ ವಿಶ್ವಮಟ್ಟದ ಉದ್ಯಮಿಗಳ ಒಡನಾಟದಿಂದ ಪೆರು ಮತ್ತು ಭಾರತಕ್ಕೆ ಅನುಕೂಲವಾಗಲಿದೆ. ಜನರಿಂದ ಜನರ ನಡುವಿನ ಸಂಪರ್ಕದಿಂದ ಎಲ್ಲಾ ವಲಯಗಳಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದರು.
ಬೆಂಗಳೂರಿನಲ್ಲಿ ಪೆರು ರಾಷ್ಟ್ರದ ಗೌರವ ರಾಯಭಾರಿ ವಿಕ್ರಮ್ ವಿಶ್ವನಾಥ್ ಮಾತನಾಡಿ, ಈ ಕಾರ್ಯಕ್ರಮದಿಂದ ವ್ಯಾಪಾರ ವಹಿವಾಟಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಇದೇ ಮೊದಲ ಬಾರಿಗೆ ಬಾರಿ “ಪಿಸ್ಕೋ” ಮದ್ಯ ಪೂರೈಕೆ ಮಾಡಲಾಗಿದ್ದು, ಈ ಬ್ರ್ಯಾಂಡ್ ಮಾರಾಟಕ್ಕೆ ಇಲ್ಲಿ ವೇದಿಕೆ ಸೃಷ್ಟಿಸಲಾಗುವುದು. ಭಾರತದ ದೇಶೀಯ ಮದ್ಯವನ್ನು ಪೆರುವಿನಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು. ಪ್ರವಾಸೋದ್ಯಮ, ಗಣಿಗಾರಿಕೆ ಮತ್ತಿತರ ವಲಯಗಳಲ್ಲಿ ಬೆಂಗಳೂರು – ಪೆರು ನಡುವೆ ವಿಪುಲ ಅವಕಾಶಗಳಿವೆ. ಪೆರು ದೇಶ ಮುಕ್ತ ವ್ಯಾಪಾರ ಒಡಂಬಡಿಕೆಗೆ ಸಹಿ ಮಾಡುತ್ತಿದ್ದು, ಇದರಿಂದ ವ್ಯಾಪಾರ ಕ್ಷೇತ್ರದ ಎಲ್ಲಾ ಬಾಗಿಲುಗಳು ಮುಕ್ತವಾಗಲಿವೆ ಎಂದು ಹೇಳಿದರು.