ಬೆಂಗಳೂರು: ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊಟ್ಟಮೊದಲ ಕನ್ನಡಿಗ ಸನ್ಮಾನ್ಯ ಎಚ್.ಡಿ.ದೇವೇಗೌಡರ ಕುರಿತು ಕನ್ನಡ ಹೋರಾಟಗಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಆಗಿರುವ ನೇ.ಭ.ರಾಮಲಿಂಗ ಶೆಟ್ಟಿಯವರು ರಚಿಸಿದ ‘ಮಣ್ಣಿನ ಮಗ’ ಕೃತಿಯನ್ನು ನಾಳೆ ಎಂದರೆ ಫೆಬ್ರವರಿ 29ನೆಯ ಗುರುವಾರ ಕನ್ನಡ ಸಾಹಿತ್ಯ ಪರಿಷತ್ ನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ’ದಲ್ಲಿ ಸಂಜೆ 5-00 ಗಂಟೆಗೆ ಬಿಡುಗಡೆ ಮಾಡಲಾಗುವುದು. ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ಈ ಕೃತಿಯ ಬಿಡುಗಡೆಗೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗ ನೀಡಿದೆ.
ಶ್ರೀ ಆದಿ ಚುಂಚನಗಿರಿ ಮಹಾಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ಉದ್ಘಾಟನೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರ ಸ್ವಾಮಿ ಮತ್ತು ಶ್ರೀ ಬಸವರಾಜ ಬೊಮ್ಮಾಯಿಯವರು ವಹಿಸಲಿದ್ದಾರೆ. ‘ಮಣ್ಣಿನ ಮಗ’ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಮಾಡಲಿದ್ದು ಕೃತಿಯ ಕುರಿತು ನಾಡಿನ ಹಿರಿಯ ಸಂಶೋಧಕರಾದ ನಾಡೋಜ ಡಾ.ಹಂಪ ನಾಗರಾಜಯ್ಯನವರು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಹೃದಯ ತಜ್ಞರಾದ ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಮತ್ತು ಮಾಜಿ ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ವಿ.ಆರ್.ಸುದರ್ಶನ್ ಅವರು ಭಾಗವಹಿಸಲಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣ ಗೌಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ನೇ.ಭ.ರಾಮಲಿಂಗ ಶೆಟ್ಟರು ಆರು ವರ್ಷಗಳ ಕಾಲ ಸತತ ಶ್ರಮ ವಹಿಸಿ ಶ್ರೀ ದೇವೇಗೌಡರ ಕುರಿತು ಮಾಹಿತಿಗಳನ್ನು ಸಂಗ್ರಹಿಸಿ, ಅವರನ್ನು ಸಂದರ್ಶಿಸಿ ಈ ಕೃತಿಯನ್ನು ಸಿದ್ದ ಪಡಿಸಿದ್ದಾರೆ. ರಾಜಕಾರಣದ ಮೊಗ್ಗಲು ಮತ್ತು ವ್ಯಕ್ತಿ ಚಿತ್ರಣದ ನೆಲೆ ಎರಡನ್ನೂ ಸರಿದೂಗಿಸಿರುವ ಈ ಕೃತಿ ಎಲ್ಲಿಯೂ ವೈಭವೀಕರಣಕ್ಕೆ ಹೋಗದೆ ವಾಸ್ತವಿಕ ನೆಲೆಗಟ್ಟಿನಲ್ಲಿಯೇ ಸಾಗಿ.. ಶ್ರೀ ದೇವೇಗೌಡರ ಕುರಿತು ಮಹತ್ವದ ಚಿತ್ರಣಗಳನ್ನು ಕಟ್ಟಿ ಕೊಡುತ್ತದೆ. ನಾಡು-ನುಡಿಗೆ ದೇವೇಗೌಡರು ಕೊಟ್ಟಿರುವ ಕೊಡುಗೆಗಳನ್ನು ಗುರುತಿಸಿರುವ ಕೃತಿ ರಾಷ್ಟ್ರಮಟ್ಟದಲ್ಲಿಯೂ ಅವರು ನೀಡಿದ ಕೊಡುಗೆಗಳನ್ನು ದಾಖಲಿಸಿ ಆಧಾರಸಹಿತ ದೇವೇಗೌಡರ ವ್ಯಕ್ತಿತ್ವದ ಹಿರಿಮೆಯನ್ನು ಎತ್ತಿ ಹಿಡಿದಿದೆ. ರಾಜಕೀಯ ಅಧ್ಯಯನಕ್ಕೆ ಒಂದು ಮಾದರಿಯಂತಿರುವ ಕೃತಿಯಲ್ಲಿ ಅನೇಕ ಅಪರೂಪದ ಇದುವರೆಗೂ ಬೆಳಕಿಗೆ ಬಾರದ ಕುತೂಹಲಕರ ಸಂಗತಿಗಳಿದ್ದು ವಿಶಿಷ್ಟವಾದ ಛಾಯಾಚಿತ್ರಗಳೂ ಇವೆ. ಕನ್ನಡಿಗರೆಲ್ಲರ ಮನೆಯಲ್ಲಿ ಇರಲೇ ಬೇಕಾದ ಈ ಕೃತಿಯನ್ನು ರಚಿಸಿದ ನೇ.ಭ.ರಾಮಲಿಂಗ ಶೆಟ್ಟರು ಮತ್ತು ಪ್ರಕಟಸಿದ ಸ್ನೇಹ ಬುಕ್ ಹೌಸ್‍ನ ಕೆ.ಬಿ.ಪರಶಿವಪ್ಪ ಅಭಿನಂದನಾರ್ಹರಾಗಿದ್ದಾರೆ.