ಬೆಂಗಳೂರು, ಜ,2; ರಾಜ್ಯ ಸರ್ಕಾರ ಸಾವಯವ ಕೃಷಿಗೆ ವಿಶೇಷ ಒತ್ತು ನೀಡಿದ್ದು, ಮುಂದಿನ ಒಂದು ವರ್ಷದಲ್ಲಿ ಸಿರಿಧಾನ್ಯ ಉತ್ಪಾದನೆ ಮತ್ತು ರಫ್ತು ಚಟುವಟಿಕೆಯಲ್ಲಿ ಇಡೀ ದೇಶದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರಬೇಕು. ರಫ್ತು ಪ್ರಮಾಣ ಎರಡರಿಂದ ಮೂರು ಪಟ್ಟು ಏರಿಕೆ ಮಾಡುವುದು ನಮ್ಮ ಗುರಿ ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಜನವರಿ 5 ರಿಂದ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ನಡೆಯಲಿರುವ ನಡೆಯಲಿರುವ ಅಂತರರಾಷ್ಟ್ರೀಯ ಸಿರಿಧಾನ್ಯ ವಾಣಿಜ್ಯ ಮೇಳದ ಹಿನ್ನೆಲೆಯಲ್ಲಿ “ಸಿರಿಧಾನ್ಯಗಳು ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯ ಅನ್ವೇಷಣೆ” ಕುರಿತ ರಫ್ತುದಾರರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಮೊದಲ ಬಾರಿಗೆ 2017 ರಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಿರಿಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಅಂತರರಾಷ್ಟ್ರೀಯ ಸಮಾವೇಶ ನಡೆಸಿತು. ನಂತರ ಬರಗಾಲ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಪದ್ಧತಿ ಕುರಿತು ಚಿಂತನೆ ನಡೆಸಿದ ಪರಿಣಾಮ ಮೊದಲ ಬಾರಿಗೆ 2017ರಲ್ಲಿ ಪರಿಷ್ಕೃತ ಸಾವಯುವ ನೀತಿಯನ್ನು ಹೊರತರಲಾಯಿತು ಎಂದರು. ರಾಜ್ಯ ಸರ್ಕಾರ ಸಾಂಪ್ರದಾಯಿಕ ಮತ್ತು ಸಾವಯವ ಪದ್ಧತಿಯಲ್ಲಿ ಬೆಳೆದ ಸಿರಿಧಾನ್ಯಗಳನ್ನು "ಪುಜ್ಞಾವಂತ ಆಹಾರ"ವಾಗಿ ಉತ್ತೇಜಿಸುತ್ತಿದೆ. ಒಂದು ಹೆಕ್ಟೇರ್ ಉತ್ಪಾನೆಗೆ ಹತ್ತು ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತಿದ್ದು, ಬರುವ ದಿನಗಳಲ್ಲಿ ಈ ಮೊತ್ತ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ವರ್ಷದ ವೇಳೆಗೆ ರಫ್ತು ಪ್ರಮಾಣ ದ್ವಿಗುಣ, ತ್ರಿಗುಣಗೊಳಿಸಬೇಕು. ರಫ್ತು ಮತ್ತು ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೆ ತಲುಪುವುದು ನಮ್ಮ ಗುರಿ. ರಫ್ತು ಮಾಡುವವರಿಗೆ ಕೆಫೆಕ್ ನಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು. ಕೆಡಿಮೆ ನೀರು, ಹೆಚ್ಚು ಶ್ರಮವಿಲ್ಲದೇ ಬೆಳೆಯಲು ಅವಕಾಶವಿದೆ. ಇದೀಗ ಪಂಚ ತಾರಾ. ಸಪ್ತತಾರಾ ಹೋಟೆಲ್ ಗಳಲ್ಲೂ ಸಿರಿಧಾನ್ಯಗಳ ಆಹಾರ ದೊರೆಯುತ್ತಿದೆ ಎಂದರು.
ಆಹಾರ ಸಂಸ್ಕರಣೆ ಮತ್ತು ಕಟಾವು ತಂತ್ರಜ್ಞಾನ ಇಲಾಖೆಯ ವಿಶೇಷ ಕಾರ್ಯದರ್ಶಿ, ರೋಹಿಣಿ ಸಿಂಧೂರಿ ಮಾತನಾಡಿ, ರಫ್ತು ಚಟುವಟಿಕೆ ಉದಯೋನ್ಮುಖ ವಲಯವಾಗಿದ್ದು, ಭಾರತದ ಆಹಾರ ಸಂಸ್ಕರಣಾ ವಲಯದಲ್ಲಿ ಶೇ ೨೬ ರಷ್ಟು ಪ್ರಗತಿಯಾಗಿದೆ. ಕರ್ನಾಟಕದಲ್ಲಿ ಹತ್ತು ಕೃಷಿ ಹವಾಮಾನ ವಲಯಗಳಿದ್ದು, ಆರು ವಿಧದ ಮಣ್ಣು ವಿಧಗಳಿವೆ. ರಾಜ್ಯ ೬ನೇ ಅತಿ ದೊಡ್ಡ ರಫ್ತು ರಾಜ್ಯವಾಗಿದೆ. ಸಿರಿಧಾನ್ಯಗಳ ರಫ್ತು ಚಟುಟಿಕೆಗೆ ವಿಶೇಷ ಗಮನಹರಿಸಲಾಗಿದೆ ಎಂದು ಹೇಳಿದರು.
ನಂತರ ಸಿರಿಧಾನ್ಯ ವಿಶೇಷತೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಚೆಲುವರಾಯ ಸ್ವಾಮಿ, ಪ್ರಸ್ತುತ ರಾಜ್ಯದಲ್ಲಿ 15.61 ಲಕ್ಷ ಹೆಕ್ಟೇರ್ ನಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಸಿರಿಧಾನ್ಯ ಮೇಳಕ್ಕೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯು ನೋಡೆಲ್ ಸಂಸ್ಥೆಯಾಗಿದೆ. ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆ ಜಿಐಝಡ್ ಮತ್ತು ಐಐಎಂಆರ್ ಸಹ ಸಹಭಾಗಿ ಸಂಸ್ಥೆಗಳಾಗಿದ್ದು, ಐಸಿಸಿಒಎ ಸಂಸ್ಥೆಯು ವಸ್ತುಪ್ರದರ್ಶನದ ಪಾಲುದಾರ ಸಂಸ್ಥೆ ಎಂದರು.
ವಸ್ತುಪ್ರದರ್ಶನ: ಸಾವಯವ ಮತ್ತು ಸಿರಿಧಾನ್ಯಗಳ ಸಂಸ್ಥೆಗಳು, ಮಾರುಕಟ್ಟೆದಾರರು, ರಫ್ತುದಾರರು, ಚಿಲ್ಲರೆ ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರಗಳ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ. ಮೇಳದಲ್ಲಿ ಉತ್ತರ ಪುದೇಶ, ಪಂಜಾಬ್, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ತಮಿಳುನಾಡು ಮತ್ತು ಮೇಘಾಲಯ ಮುಂತಾದ ರಾಜ್ಯಗಳು ಭಾಗವಹಿಸುತ್ತಿವೆ. ವಸ್ತು ಪುದರ್ಶನದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿರುತ್ತವೆ ಎಂದರು.
ಕರ್ನಾಟಕ ಪೆವಿಲಿಯನ್ ನಲ್ಲಿ ಕರ್ನಾಟಕದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನ ಸಂಸ್ಥೆಗಳಿಂದ ಉತ್ತೇಜನಗೊಂಡಿರುವ ಕರ್ನಾಟಕದ ನವೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಸಿರಿಧಾನ್ಯ, ಸಾವಯವ ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಸೇರಿದಂತೆ ಒಟ್ಟು 100 ಮಳಿಗೆಗಳನ್ನು ತೆರೆಯಲಾಗಿದೆ. ಉತ್ಪಾದಕರು, ಮಾರುಕಟ್ಟೆದಾರರ ಸಮಾಲೋಚನಾ ಸಭೆಗಳನ್ನು ಏರ್ಪಡಿಸಲಾಗುತ್ತದೆ. ಎಂದು ಹೇಳಿದರು.
ಸಾವಯವ ಮತ್ತು ಸಿರಿಧಾನ್ಯ ಬೆಳೆಯುವ ರೈತರಿಗಾಗಿ ಕನ್ನಡ ಭಾಷೆಯಲ್ಲಿ ಮೂರು ದಿನಗಳ ಕಾರ್ಯಗಾರವನ್ನು ಕೃ.ವಿ.ವಿ ಸಂಶೋಧನಾ ವಿಭಾಗದಿಂದ ಆಯೋಜಿಸಲಾಗಿದೆ. 10 ವಿವಿಧ ಸಿರಿಧಾನ್ಯ ಹೋಟಲ್, ರೆಸ್ಟೋರೆಂಟ್ಗಳ ಮಳಿಗೆಗಳ ಮೂಲಕ ವೈವಿದ್ಯ ಮಯ ಮತ್ತು ರುಚಿಕರವಾದ ಸಿರಿಧಾನ್ಯಗಳ ಊಟ ಮತ್ತು ಉಪಹಾರಗಳನ್ನು ಸವಿಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ರಾಜ್ಯ ಮಿಡಿಸೌತೆ, ಗುಲಾಬಿ, ಈರುಳ್ಳಿ ಮತ್ತು ಕಾಫಿ ರಪ್ತಿನಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಸಿರಿಧಾನ್ಯಗಳು, ದಾಳಿಂಬೆ, ಕರಿಮೆಣಸು, ಅರಿಶಿನ, ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಮಾವು, ಬಾಳೆಹಣ್ಣು, ಬೆಲ್ಲ, ನೆಲಗಡಲೆ, ಒಣದ್ರಾಕ್ಷಿ, ಜಿಐಉತ್ಪನ್ನಗಳು, ಸಂಸ್ಕರಿಸಿದ ಆಹಾರಗಳು, ತರಕಾರಿ ಸೇರಿದಂತೆ ಹಲವಾರು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ರಾಜ್ಯವು ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ ಎಂದರು.
ಕೃಷಿ ಆಯುಕ್ತರಾದ ಎನ್.ವೈ. ಪಾಟೀಲ್. ಕಾರ್ಯದರ್ಶಿ ಅನ್ಬು ಕುಮಾರ್, ಕೃಷಿ ಇಲಾಖೆ ನಿರ್ದೇಶಕರಾದ ಡಾ. ಜಿ.ಟಿ. ಪುತ್ರ ಮತ್ತಿತರರು ಉಪಸ್ಥಿತರಿದ್ದರು.