ಬಹು ಸಣ್ಣವಯಸ್ಸಿಗೇ ಸಾಧನೆಯ ಪಥದಲ್ಲಿ ಕ್ರಮಿಸುತ್ತಿರುವ ಭರತನಾಟ್ಯ ನೃತ್ಯಕಲಾವಿದೆ, ನಾಟ್ಯಗುರು, ನೃತ್ಯಸಂಯೋಜಕಿ-ಸಂಶೋಧಕಿ, ಸಂಗೀತಗಾರ್ತಿ ಹಾಗೂ ರಂಗಭೂಮಿ-ಚಲನಚಿತ್ರ ರಂಗದ ಚಟುವಟಿಕೆಗಳಲ್ಲಿ ನಿರತರಾದ ಅದ್ಭುತ ಪ್ರತಿಭೆ ಅಕ್ಷರಾ ಭಾರದ್ವಾಜ್ ವಿಶೇಷ ವ್ಯಕ್ತಿತ್ವವುಳ್ಳವರು.
‘ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ ನೃತ್ಯಶಾಲೆಯ ಸಮರ್ಥಶಾಲಿ ಗುರುವಿನ ಮಾರ್ಗದರ್ಶನದಲ್ಲಿ ರೂಹುಗೊಂಡ ಕಲಾಶಿಲ್ಪ ಬಹುಮುಖ ಪ್ರತಿಭೆಯ ಕು. ಅದಿತಿ ಜಗದೀಶ್, ಕಳೆದ ಒಂಭತ್ತು ವರ್ಷಗಳಿಂದ ನಿಷ್ಠೆಯಿಂದ ಗುರು ಅಕ್ಷರ ಅವರ ಬಳಿ ಭರತನಾಟ್ಯ ನೃತ್ಯ ತರಬೇತಿ ಪಡೆಯುತ್ತಿದ್ದಾಳೆ.
ಶ್ರೀಮತಿ ವೈಶಾಲಿ ಶೆಟ್ಟಿ ಮತ್ತು ಆರ್. ಜಗದೀಶ್ ಪುತ್ರಿಯಾದ ಹದಿಮೂರು ವರ್ಷದ ಅದಿತಿ ಈಗಾಗಲೇ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ‘ಡಿಸ್ಟಿಂಕ್ಷನ್’ ಪಡೆದು ತೇರ್ಗಡೆಯಾಗಿ ನಾಡಿನಾದ್ಯಂತ ನೃತ್ಯ ಪ್ರದರ್ಶನಗಳನ್ನು ನೀಡಿದ ಬಾಲಪ್ರತಿಭೆ. ಇವಳು ಜನವರಿ ತಿಂಗಳ 13 ಶನಿವಾರದಂದು ಸಂಜೆ 5 ಗಂಟೆಗೆ ಜೆ.ಸಿ ರಸ್ತೆಯ ಎ.ಡಿ .ಎ. ರಂಗಮಂದಿರದಲ್ಲಿ ತನ್ನ ಭರತನಾಟ್ಯದ ಕಲಾಪ್ರಾವೀಣ್ಯದ ಪ್ರದರ್ಶನವನ್ನು ನೀಡಲು ವಿದ್ಯುಕ್ತವಾಗಿ ರಂಗಪ್ರವೇಶ ಮಾಡಲಿದ್ದಾಳೆ. ಈ ಮೋಹಕ ಕಲಾವಿದೆಯ ಕಲಾತ್ಮಕ ನರ್ತನವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.