ಬೆಂಗಳೂರು: ಸಾಹಿತ್ಯ ಪರಿಷತ್ತಿನಲ್ಲಿ ಹೊಸಶಕೆಯನ್ನು ಬಿ.ಎಂ.ಶ್ರೀ ಆರಂಭಿಸಿದರು. ಅವರು ನಾಡಿನಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ಪಾಂಡಿತ್ಯ, ಅಮೋಘ ಕಂಠ, ಅದ್ಭುತ ವಾಗ್ವೈಖರಿಗಳಿಂದ ಕನ್ನಡನಾಡಿನ ಜನರನ್ನು ಹುರಿದುಂಬಿಸಿ ಜಾಗೃತಗೊಳಿಸಿದರು. ಆ ಮೂಲಕ ಪರಿಷತ್ತನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಿದರು. ಕನ್ನಡ ಭಾಷೆ ಸಂಕಷ್ಟದಲ್ಲಿದ್ದಾಗ ಅದನ್ನು ಆರೈಕೆ ಮಾಡಿ ಏಳಿಗೆಗೆ ಕಾರಣರಾದ ಅವರನ್ನು ಸಹಜವಾಗಿಯೇ ‘ಕನ್ನಡದ ಕಣ್ವ’ ರೆಂದು ಕರೆಯುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಹೇಳಿದರು. ಅವರು ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಆಚಾರ್ಯ ಬಿ.ಎಂ.ಶ‍್ರೀಯವರ 140 ಮತ್ತು ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ 132ನೆಯ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪರಿಷತ್ತಿನ ಪ್ರಕಟಣೆಗಳಲ್ಲದೆ, ಕನ್ನಡನುಡಿ, ಪರಿಷತ್ಪತ್ರಿಕೆಗಳನ್ನು ಪರಿಷತ್ತಿನಿಂದ ಹೊರಗೆ ಅಚ್ಚಿಗೆ ಕೊಡುತ್ತಿದ್ದುದರಿಂದ ಕಾರ್ಯವಿಳಂಬದ ಜತೆಗೆ ಅಚ್ಚಿನ ವೆಚ್ಚ ಅಧಿಕವಾಗುತ್ತಿತ್ತು ಹೀಗಾಗಿ ಪರಿಷತ್ತಿಗೇ ಒಂದು ಸ್ವಂತ ಅಚ್ಚುಕೂಟ ಆವಶ್ಯಕತೆ ಇದೆ ಎಂಬುದನ್ನು ಬಿಎಂಶ್ರೀ ಮನಗೊಂಡು. ಈ ಬಗ್ಗೆ ಕಾರ್ಯಕಾರಿ ಸಮಿತಿ ಚರ್ಚಿಸಿ ನಿರ್ಧಾರ ತೆಗೆದುಕೊಂಡ ನಂತರ ೬೫00 ರೂ ಅಂದಾಜು ವೆಚ್ಚದಲ್ಲಿ ಅಚ್ಚುಕೂಟವನ್ನು ಪ್ರಾರಂಭಿಸಲಾಯಿತು. ಆರಂಭದ ಬಂಡವಾಳಕ್ಕೆ ಬಿಎಂಶ್ರೀ ಅವರೇ ೫000ರೂ ಗಳನ್ನು ಮತ್ತೆ ಮರುವರ್ಷ ೧000ರೂಗಳನ್ನು ಕೊಟ್ಟರು. ಒಂದು ಕಾಲದಲ್ಲಿ ಅತಿಥಿ ಕೊಠಡಿಯಾಗಿದ್ದ ಭಾಗದಲ್ಲಿ ಮುದ್ರಣಾಲಯದ ಸ್ಥಾಪನೆ ಆಯಿತು.ಅದು ಇಂದಿಗೂ ಬಿ.ಎಂ.ಶ‍್ರೀ ಅಚ್ಚುಕೂಟವೆಂದು ಹೆಸರು ಪಡೆದಿದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿ ಕೊಂಡರು.
ಹೊಸ ಕಲ್ಪನೆಗಳು ಸೃಜನಕವಿಗಳಾದ ಬಿ.ಎಂ.ಶ್ರೀ ಅವರಲ್ಲಿ ಧಾರಾಳವಾಗಿದ್ದವು. ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಲಾಂಛನ ಇರಬೇಕು. ಒಂದು ಧ್ಯೇಯವಾಕ್ಯ ಇರಬೇಕು ಎಂಬ ಉದ್ದೇಶದಿಂದ ಕಲಾವಿದ ಇನಾಮತಿ ಅವರಿಂದ ಪರಿಷತ್ತಿನ ಲಾಂಛನವೊಂದನ್ನು ಮಾಡಿಸಿದರು. ಅದರಲ್ಲೂ ‘ಸಿರಿಗನ್ನಡಂಗೆಲ್ಗೆ’ಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಲ್ಲಿ ಒಬ್ಬರಾದ ರಾ.ಹ. ದೇಶಪಾಂಡೆಯವರು ವಿಶೇಷವಾಗಿ ಬಳಸಿದರು. ಪರಿಷತ್ತು, ಬಿ.ಎಂ.ಶ್ರೀ ಹಾಗೂ ಇತರರು ಇದಕ್ಕೆ ವ್ಯಾಪಕ ಪ್ರಚಾರವನ್ನು ನೀಡಿದರು ಹಾಗಾಗಿ ಎಲ್ಲ ಕಡೆ ಇದು ಪ್ರಚಾರಕ್ಕೆ ಬಂದಿತು. ಬಿ.ಎಂ.ಶ್ರೀಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಿಳಾ ಶಾಖೆಯನ್ನು ಆರಂಭಿಸಿದರು. ಕನ್ನಡ ಸಾಹಿತ್ಯ ಪರೀಕ್ಷೆಗಳನ್ನು ಆರಂಭಿಸಿದರು ಎಂದು ಬಿ.ಎಂ.ಶ್ರೀಕಂಠಯ್ಯನವರ ಸೇವೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ವಿವರಿಸಿದರು. .
ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿ ಪೋಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಬಿ.ಎಂ.ಶ್ರೀಯವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ಕನ್ನಡ ಇರುವವರೆಗೂ ಅವರು ಹೆಸರು ಚಿರಸ್ಥಾಯಿಯಾಗಿ ಇರುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಿಸಿದರು.
ADVERTISEMENT
ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳು. ಸ್ವತಃ ಕನ್ನಡ ಮಾತೃಭಾಷೆಯವರಾಗಿ ಸಂಸ್ಕೃತದ ಪಾಂಡಿತ್ಯವನ್ನು ಗಳಿಸಿ ತೆಲುಗು, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ ಮುಂತಾದ ಹಲವು ಭಾಷಾ ಪರಿಣತಿಯನ್ನೂ ಪಡೆದುಕೊಂಡವರು ಇವರು. ಇಷ್ಟಾಗಿಯೂ ಅವರು ಕನ್ನಡ ನಾಡು, ನುಡಿ, ಸಾಹಿತ್ಯಕ್ಕಾಗಿಯೇ ತಮ್ಮ ಸಮಸ್ತ ಧೀಶಕ್ತಿಯನ್ನು ಮೀಸಲಾಗಿಟ್ಟರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಹೈದರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದ ಪ್ರದೇಶಗಳಲ್ಲಿ ವೃತ್ತಿ ಸೇವೆ ಸಲ್ಲಿಸಿ ಬೆಂಗಳೂರು-ಮೈಸೂರು ಭಾಗದ ವಿದ್ವಜ್ಜನರ ಸಂಪರ್ಕವನ್ನು ಇಟ್ಟುಕೊಂಡು; ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಅಂತೆಯೇ ಅವರನ್ನು ವ್ಯಾಕರಣಶಾಸ್ತ್ರಿ ಎಂದು ಕರೆಯುವ ಬದಲು ‘ಏಕೀಕರಣಶಾಸ್ತ್ರಿ’ ಎಂದೇ ಅವರ ಸ್ನೇಹಿತರು ಕರೆಯು
ತ್ತಿದ್ದರಂತೆ.
‘ಹಿಂದೂಸ್ಥಾನಕ್ಕೆ ಸ್ವಾತ್ರಂತ್ರ್ಯ ಸಿಗಲಿ ಬಿಡಲಿ ಕರ್ನಾಟಕ ಒಂದುಗೂಡಬೇಕು’ ಎನ್ನುವುದೇ ಅವರ ಮಂತ್ರವಾಗಿತ್ತು. ಹದಿಹರೆಯದಲ್ಲಿ ಇವರು ಏಕೀಕರಣ ಚಳುವಳಿಯಲ್ಲಿ ಧುಮುಕಿದರೆ ತಮ್ಮಹಿರಿಯ ವಯಸ್ಸಿನಲ್ಲಿ ಗೋಕಾಕ ಚಳುವಳಿಯಲ್ಲಿ ಭಾಗಿಯಾಗಿದ್ದರು ಎಂದು ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಕೊಡುಗೆಗಳನ್ನು ನಾಡೋಜ ಡಾ.ಮಹೇಶ ಜೋಶಿಯವರು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ಬಿ.ಎಂ.ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’ ಒಂದು ಯುಗಪ್ರವರ್ತಕ ಕೃತಿ. ಭಾಷೆ, ಕಾವ್ಯಶೈಲಿ, ಛಂದಸ್ಸು, ಕಾವ್ಯದ ವಸ್ತು – ಹೀಗೆ ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಕಾವ್ಯಪರಂಪರೆಯಲ್ಲಿ ಅದರ ಹೊಸತನದ ಛಾಪು ಎದ್ದುಕಾಣುವಂಥದು. ಕನ್ನಡ ಸಾಹಿತ್ಯಕ್ಕೆ ಶ್ರೀಯವರು ಕೊಟ್ಟ ಇನ್ನೊಂದು ಅಭೂತಪೂರ್ವ ಕೊಡುಗೆ ಎಂದರೆ, ಸಂಸ್ಕೃತ ಕಾವ್ಯಪ್ರಪಂಚದಲ್ಲಿ ಇಲ್ಲದ, ದುರಂತ ನಾಟಕಗಳನ್ನು ಕನ್ನಡಕ್ಕೆ ನೀಡಿದ್ದು. ಶ್ರೀಯವರು ಷೇಕ್ಸ್ಪಿಯರ್ ನಾಟಕಗಳನ್ನೂ, ಗ್ರೀಕ್ ರುದ್ರನಾಟಕಗಳನ್ನೂ ಆಳವಾಗಿ ಅಧ್ಯಯನ ಮಾಡಿದ್ದರು; ಕೆಲವು ಹಳಗನ್ನಡ ಕೃತಿಗಳಲ್ಲಿ ಷೇಕ್ಸ್ಪಿಯರ್ ಕವಿ ಸೃಷ್ಟಿಸಿರುವ ದುರಂತ ನಾಯಕ ಪಾತ್ರದ ಕಲ್ಪನೆಗೆ ಹತ್ತಿರ ಬರುವ ಪಾತ್ರಗಳನ್ನು ಗುರುತಿಸಿದರು. ಅಂತಹ ಪಾತ್ರಗಳಲ್ಲಿ, ನಾಗಚಂದ್ರ ಕವಿಯ ‘ಪಂಪ ರಾಮಾಯಣದ’ ರಾವಣ ಮತ್ತು ರನ್ನನ ‘ಸಾಹಸಭೀಮ ವಿಜಯದ’ ದುರ್ಯೋಧನ ಪಾತ್ರಗಳು ಅವರ ಗಮನ ಸೆಳೆದವು. ನಾಗಚಂದ್ರನ ರಾವಣನನ್ನು ಕುರಿತು A Tragic Ravana ಎಂಬ ಲೇಖನವನ್ನು ಬರೆದು ಪ್ರಕಟಿಸಿದರು. ರನ್ನನ ಕಾವ್ಯವನ್ನು ‘ಗದಾಯುದ್ಧ ನಾಟಕ’ವನ್ನಾಗಿ ರೂಪಾಂತರಿಸಿದರು. ‘ಕನ್ನಡ ಛಂದಸ್ಸಿನ ಚರಿತ್ರೆ’ ಬರಹ ಕವಿರಾಜಮಾರ್ಗದ ಕಾಲದಿಂದ ಮೊದಲ್ಗೊಂಡು ಕನ್ನಡ ಕಾವ್ಯದಲ್ಲಿ ಪ್ರಯೋಗವಾಗಿರುವ ಹಾಗೂ ಜನಪದ ಗೀತೆಗಳಲ್ಲಿ ಪ್ರಯೋಗವಾಗಿರುವ ವಿವಿಧ ಛಂದೋರೂಪಗಳಲ್ಲಿ ಕಂಡುಬರುವ ಲಯವಿನ್ಯಾಸಗಳನ್ನೂ ಛಂದೋಗತಿಗಳನ್ನೂ ವೈದಿಕ ಛಂದಸ್ಸಿನ ಹಿನ್ನೆಲೆಯಲ್ಲಿ, ತಮಿಳು ಮತ್ತು ತೆಲುಗು ಛಂದೋರೂಪಗಳೊಂದಿಗೆ ಹೋಲಿಸಿ ಶ್ರೀಯವರು ತೌಲನಿಕವಾಗಿ ನಡೆಸಿರುವ ಕನ್ನಡ ಛಂದಸ್ಸಿನ ಚಾರಿತ್ರಿಕ ವಿಶ್ಲೇಷಣಾತ್ಮಕ ನಿರೂಪಣೆ ಈ ನಿಟ್ಟಿನಲ್ಲಿ ಮೊತ್ತಮೊದಲಿನದು; ಮಾತ್ರವಲ್ಲ, ಆಗಿನ ಕಾಲದ ಸಂಶೋಧನ ಸಂದರ್ಭದಲ್ಲಿ ಸಮಗ್ರವಾದುದು ಅಲ್ಲದೆ, ಮುಂದಿನ ಸಂಶೋಧನೆಗಳ ಪ್ರಯತ್ನಗಳಿಗೆ ಮಾರ್ಗದರ್ಶಕವಾಯಿತು.‘ಕನ್ನಡ ಸಾಹಿತ್ಯ ಚರಿತ್ರೆ’ ಎಂಬ ಗ್ರಂಥದ ಮೂಲಕ ಸಾಹಿತ್ಯ ಚರಿತ್ರೆಯ ವಿವರಗಳನ್ನು ದಾಖಲೆ ಎನಿಸದಂತೆ ಮಾಡಿ, ಸಹೃದಯ ವಿಮರ್ಶಕನ ರಸವತ್ತಾದ ನಿರೂಪಣೆ ಎನಿಸುವಂತೆ ಸಾಹಿತ್ಯ ಚರಿತ್ರೆಯನ್ನು ಶ್ರೀ ಅವರು ರಚಿಸಿದರು ಹೀಗೆ ವ್ಯಾಪಕವಾಗಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅವರ ಕೊಡುಗೆ ಸಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ, ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ ಪಾಂಡು ಸೇರಿದಂತೆ ಪರಿಷತ್ತಿನ ಸಿಬ್ಬಂಧಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಬಿ.ಎಂ.ಶ್ರೀಕಂಠಯ್ಯ ಮತ್ತು ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಭಾವಚಿತ್ರಕ್ಕೆ ಪುಷ್ಟ ನಮನವನ್ನು ಸಲ್ಲಿಸಿದರು.