ಸುಳಗಾದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ : ನಾಡೋಜ ಡಾ.ಮಹೇಶ ಜೋಶಿ ಖಂಡನೆ

varthajala
0

ಬೆಂಗಳೂರು: ಬೆಳಗಾವಿ ತಾಲ್ಲೋಕು ಸುಳಗಾದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹೆಚ್ಚಿದ ಘಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತೀವ್ರವಾಗಿ ಖಂಡಿಸಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೊಸ ವರ್ಷದ  ಆಚರಣೆ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದ್ದು. ಇದು ಆತಂಕ ಮತ್ತು ಖೇದವನ್ನು ತರುವ ಸಂಗತಿ ಎಂದು ಅವರು ಹೇಳಿದ್ದಾರೆ.

ಕನ್ನಡ ಬಾವುಟ ಎನ್ನುವುದು ಕೇವಲ ಬಟ್ಟೆಯಲ್ಲ  ಅದು ಕನ್ನಡಿಗರ ಅಸ್ಮಿತೆಯ ಸಂಕೇತ. ಶತ ಶತಮಾನದ ಕನ್ನಡದ  ಪರಂಪರೆಯು ಅದರಲ್ಲಿ ಬಿಂಬಿತವಾಗಿರುತ್ತದೆ. ಇಂತಹ ಧ್ವಜಕ್ಕೆ ಬೆಂಕಿ ಹೆಚ್ಚುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದಂತಾಗಿದೆ ಎಂದಿರುವ ನಾಡೋಜ ಡಾ,ಮಹೇಶ ಜೋಶಿಯವರು ‘ಸ್ನೇಹಕ್ಕೆ ಸಿದ್ದ ಸಮರಕ್ಕೆ ಬದ್ದ’ ಎನ್ನುವ ಧೋರಣೆಯನ್ನು ಹೊಂದಿರುವ ಕನ್ನಡಿಗರ ಶಾಂತಿ ಪ್ರಿಯರು  ಆದರೆ ಕೆಣಕಿದರೆ ಹೋರಾಟಕ್ಕೆ  ಸದಾ ಸನ್ನದ್ದರು ಎಂದು ಹೇಳಿ, ಬೆಳಗಾವಿ ಭಾಗದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದಕ್ಕೆ ಆತಂಕ ವ್ಯಕ್ತ ಪಡಿಸಿದ್ದಾರೆ. ಬೆಳಗಾವಿ ಎಂದಿದ್ದರೂ ಕನ್ನಡದೇ ಪ್ರದೇಶ ಎಂದಿರುವ ಮಹಾಜನ್ ಅಯೋಗದ ವರದಿಯನ್ನು ಅಂತಿಮವೆಂದು ಕೇಂದ್ರ ಸರ್ಕಾರವೇ  ಹಲವು ಸಲ ಹೇಳಿದೆ, ಹೀಗಿದ್ದರೂ ಮರಾಠಿಗರು ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ರಾಜ್ಯ ಸರ್ಕಾರ ಈ ಕುರಿತು ತಕ್ಷಣವೇ ಕ್ರಮ ಕೈಗೊಂಡು ಕಿಡಿಗೇಡಿಗಳನ್ನು ಶಿಕ್ಷಿಸ ಬೇಕು ಮತ್ತು ಕನ್ನಡಿಗರಿಗೆ ರಕ್ಷಣೆ ನೀಡ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

‘ನಮ್ಮ ಊರಿನಲ್ಲಿ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ, ಹಿಂದೆ ಎರಡು ಸಲ ಕನ್ನಡ ನಾಮ ಫಲಕಗಳಿಗೆ ಮಸಿ ಬಳಿಯಲಾಗಿತ್ತು’ ಎನ್ನುವ ಸುಳಗಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾಗಣ್ಣ ನರೋಟಿಯವರ ಹೇಳಿಕೆಯನ್ನು ಪ್ರಸ್ತಾಪಿಸಿರುವ ನಾಡೋಜ ಡಾ.ಮಹೇಶ ಜೋಶಿಯವರು ಇಂತಹ ಸೂಕ್ಷ್ಮ ಸ್ಥಿತಿಯಿದ್ದರೂ ಪೊಲೀಸರು ಸಾಕಷ್ಟು ಮಂಜಾಗೃತೆ ವಹಿಸದೆ ಹೋಗಿದ್ದು ತಪ್ಪು ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸ ಬೇಕು ಎಂದು ಆಗ್ರಹಿಸಿದ್ದಾರೆ.

1965ರಲ್ಲಿ ಕನ್ನಡ ಧ್ವಜವನ್ನು ರೂಪಿಸಿದ ಮ.ರಾಮಮೂರ್ತಿಗಳು ಇದನ್ನು ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಶಾಂತಿಯ ಸಂಕೇತವೆಂದು ಹೇಳಿದ್ದರು. ನಾವು ಈಗ  ಅದನ್ನು ಸ್ವಾಭಿಮಾನದ ಸಂಕೇತವೆಂದು ಕೂಡ ಹೇಳ ಬಹುದು. ರಾಜ್ಯ ಸರ್ಕಾರವು ಈಗಾಗಲೇ ಈ ಧ್ವಜವನ್ನು ಅಧಿಕೃತಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಇದು ಇನ್ನೂ ಅಂಗೀಕಾರವಾಗಿಲ್ಲ. ಪ್ರತ್ಯೇಕ ಧ್ವಜವನ್ನು ಹೊಂದಲು ಸೇನೆಯಲ್ಲಿ ಅವಕಾಶವಿದೆ. ಇದು ಪ್ರತ್ಯೇಕತೆಯ ಬದಲು ಅಸ್ಮಿತೆಯನ್ನು ಹೇಳುತ್ತದೆ. ಈ ಕಾರಣದಿಂದ ಪಕ್ಷಬೇಧ ಮರೆತು ಕನ್ನಡ ಧ್ವಜಕ್ಕೆ ಮಾನ್ಯತೆಯನ್ನು ಪಡೆಯಲು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ಪ್ರಯತ್ನಿಸ ಬೇಕೆಂದು ಈ ಕುರಿತ ಆಂದೋಲನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.


Post a Comment

0Comments

Post a Comment (0)