ವ್ಯವಹಾರದ ಜ್ಞಾನಕ್ಕೆ ಮಕ್ಕಳ ಸಂತೆ ಉತ್ತಮ ವೇದಿಕೆ

varthajala
0

ಶಿಡ್ಲಘಟ್ಟ : ಮಕ್ಕಳಲ್ಲಿ ವ್ಯಾವಹಾರ ಜ್ಞಾನ ಅಭಿವೃದ್ದಿಗೆ ಶಾಲೆಗಳಲ್ಲಿ ನಡೆಸುವ ಮಕ್ಕಳ ಸಂತೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು  ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್ಅಭಿಪ್ರಾಯಪಟ್ಟರು.

ನಗರದ ಹೊರವಲಯದ ವರದನಾಯಕನಹಳ್ಳಿ ಗೇಟ್ ಬಳಿಯಿರುವ ಯುನಿವರ್ಸಲ್ ಪಬ್ಲಿಕ್ ಸ್ಕೂಲ್ ನಲ್ಲಿ  ಶನಿವಾರ 1ರಿಂದ 10 ನೇ ತರಗತಿ ಮಕ್ಕಳಿಂದ ಆಯೋಜಿಸಲಾಗಿದ್ದ ಮಕ್ಕಳಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ಪಠ್ಯಕ್ಕೆ ಸೀಮಿತ ಮಾಡುವುದು ಸರಿಯಲ್ಲ. ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುತ್ತದೆ. ಮಕ್ಕಳು ಜೀವನ ನಡೆಸಲು ವ್ಯವಹಾರ ಜ್ಞಾನದ ಅರಿವು ಮೂಡಿಸಬೇಕು. ಪೋಷಕರು ಮಕ್ಕಳನ್ನು ಅಂಗಡಿಗೆ ಕಳುಹಿಸಿದರೆ ವ್ಯಾಪಾರ ಮಾಡಿ ಸಾಮಗ್ರಿ ತರುವ ಶಕ್ತಿ ಬೆಳೆಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಶಾಸ್ತ್ರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಅನೇಕ ಉದ್ಯಮಗಳಲ್ಲಿ ವಾಣಿಜ್ಯ ಪದವಿಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಲ್ಲಿ ಪ್ರಾಯೋಗಿಕವಾಗಿ ವ್ಯವಹಾರ ಜ್ಞಾನ ಬೆಳೆಸಲು ಮಕ್ಕಳ ಸಂತೆಗಳು ನಡೆಸಬೇಕು ಎಂದರು.

ಯೂನಿವರ್ಸಲ್ ಪಬ್ಲಿಕ್ ಶಾಲೆ ಹಾಗೂ ಕಾಲೇಜಿನ ಪ್ರಾಂಶುಪಾಲ ಶಾಂತರಾಜು ಮಾತನಾಡಿ,ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಲಾಭ-ನಷ್ಟದ ವ್ಯವಹಾರ ಜ್ಞಾನ ಬೆಳೆಸುವ ಸದುದ್ದೇಶದಿಂದ ಮಾರುಕಟ್ಟೆಯಲ್ಲಿ ಹೇಗೆ ವ್ಯವಹರಿಸಬೇಕು ಹಾಗೂ ವ್ಯಾಪಾರದಿಂದಾಗುವ ಲಾಭ ನಷ್ಟ ಹೇಗೆ ತಿಳಿಯಬೇಕು ಎಂಬುದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ವಿದ್ಯಾರ್ಥಿಗಳು ಸುಮಾರು 200 ಅಂಗಡಿಗಳನ್ನು ತೆರೆದು ವ್ಯಾಪಾರದ ವಹಿವಾಟು ನಡೆಸಿದ್ದಾರೆ. 500 ಕ್ಕೂ ಹೆಚ್ಚು ಗ್ರಾಹಕರು ವ್ಯವಹಾರ ನಡೆಸಿ ಲಕ್ಷಕ್ಕೂ ಅಧಿಕ ಹಣ ಗಳಿಸಿದ್ದಾರೆ ಎಂದರು.

ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿ, ಬೇಲ್‍ಪುರಿ, ಬೋಂಡಾ, ಬಜ್ಜಿ, ಕಾಫಿ, ಟೀ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರ ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು.

ಪರಸ್ಪರ ಸ್ವರ್ಧಾ ಮನೋಭಾವದಿಂದ ಮಕ್ಕಳು ನಾವೇ ಹೆಚ್ಚು ವ್ಯಾಪಾರ ಮಾಡಬೇಕು ಎಂಬ ಛಲದಿಂದ ಪೋಷಕರನ್ನು ಕರೆದು ತಮ್ಮ ಅಂಗಡಿಯ ಸಾಮಗ್ರಿ ಖರೀದಿಸಲು ಒತ್ತಾಯಿಸುತ್ತಿದ್ದರು.

ಈ ಸಂದರ್ಭದಲ್ಲಿ ಯುನಿವರ್ಸಲ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯ ಒಂಗಲ್ ಲೆಪ್ಚಾ,  ಬೃಂದಾ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಮಂಜುನಾಥ್ , ಸಾಯಿ ಇಂಟರ್ ನ್ಯಾಷನಲ್ ಶಾಲೆಯ ಮುಖ್ಯಸ್ಥ ಮಂಜುನಾಥ್  , ಯುನಿವರ್ಸಲ್ ಪಬ್ಲಿಕ್ ಸ್ಕೂಲ್ ಅಂಡ್ ಪಿಯು ಕಾಲೇಜ್ ನ ಕಾರ್ಯದರ್ಶಿ ಶೈಲೇಶ್ ರಾಜ್,ಆಡಳಿತಾಧಿಕಾರಿ ಸುಶಾಂತ್ ಶರ್ಮ್, ಎಸ್ಎಂ ಇಟಿ ಉಪಾಧ್ಯಕ್ಷ ಸುಭೀರ್ ದಾಸ್, ಶಿಕ್ಷಕರು ಮತ್ತು ಪೋಷಕರು ಹಾಜರಿದ್ದರು.

Post a Comment

0Comments

Post a Comment (0)