ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕೆಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ಕೋರ್ಟ್ 6 ಕೋಟಿ 96 ಲಕ್ಷದ 70 ಸಾವಿರ ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದರೆ 6 ತಿಂಗಳ ಸೆರೆವಾಸ ಅನುಭವಿಸಬೇಕು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ. ಇಂಥ ಹಿನ್ನೆಲೆಯಿರುವ ಸಚಿವರು ಶಿಕ್ಷಣ ಇಲಾಖೆಗೆ ಕಪ್ಪುಚುಕ್ಕಿ; ಅವರು ಈ ಇಲಾಖೆಯನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
2011ರಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ. ಮಧು ಬಂಗಾರಪ್ಪರವರು ತಮ್ಮ ಆಕಾಶ್ ಆಡಿಯೋ ಸಂಸ್ಥೆಯಿಂದ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ 6 ಕೋಟಿ 96 ಲಕ್ಷದ 60 ಸಾವಿರ ರೂ. ಸಂದಾಯ ಮಾಡಬೇಕಿತ್ತು. ಹಲವಾರು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಪಾವತಿಸಲು ಚೆಕ್ ನೀಡಿದ್ದು, ಅದು ಬೌನ್ಸ್ ಆಗಿತ್ತು. ಈಗ ಒಟ್ಟು ಮೊತ್ತದಲ್ಲಿ 6 ಕೋಟಿ 96 ಲಕ್ಷದ 60 ಸಾವಿರ ರೂ.ಗಳನ್ನು ಫಿರ್ಯಾದುದಾರ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ ನೀಡಲು ಮತ್ತು 10 ಸಾವಿರವನ್ನು ಸರಕಾರಕ್ಕೆ ದಂಡದ ರೂಪದಲ್ಲಿ ಕಟ್ಟಲು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಸದ್ಯಕ್ಕೆ 50 ಲಕ್ಷ ಪಾವತಿಸಿ ಉಳಿದ ಮೊತ್ತವನ್ನು ಜನವರಿ ಅಂತ್ಯದವೇಳೆಗೆ ಕೊಡುವುದಾಗಿ ಮಧು ಬಂಗಾರಪ್ಪ ಅವರು ಮುಚ್ಚಳಿಕೆ ಸಲ್ಲಿಸಿದ್ದರು. ಆದರೆ, ಹಿಂದಿನ ಮುಚ್ಚಳಿಕೆಯನ್ನು ಪಾಲಿಸದ ಕಾರಣ ಅವರ ಕೋರಿಕೆಯನ್ನು ನ್ಯಾಯಾಲಯ ಮನ್ನಿಸಿಲ್ಲ ಎಂಬ ಮಾಹಿತಿಯನ್ನು ರವಿಕುಮಾರ್ ಅವರು ತಿಳಿಸಿದ್ದಾರೆ.
ಚೆಕ್ ಬೌನ್ಸ್ ಮತ್ತು ಮುಚ್ಚಳಿಕೆ ಬರೆದುಕೊಟ್ಟರೂ ಅದನ್ನು ಪಾಲಿಸದ ಹಿನ್ನೆಲೆ ಇರುವ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯುವಂತೆ ರವಿಕುಮಾರ್ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಕಳಂಕವಾಗುವಂತೆ ವರ್ತಿಸಿದ ಮಧು ಬಂಗಾರಪ್ಪ ಅವರು ಆ ಹುದ್ದೆಯಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂದೂ ತಿಳಿಸಿದ್ದಾರೆ.