ಬೆಂಗಳೂರು:ಕನ್ನಡ ಎನ್ನುವುದು ಭಾಷೆಯಷ್ಟೆ ಅಲ್ಲ. ಅದು ಸಾವಿರಾರು ವರ್ಷಗಳಿಂದ ಅರಳಿರುವ ಈ ನೆಲದ ಸಂಸ್ಕೃತಿ. ಅದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಸಂಘಟಿತವಾಗಿ ಮುಂದಾಗಬೇಕು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು.
ಯಲಹಂಕ ಬಿ.ಎಂ.ಎಸ್. ವಾಸ್ತುಶಿಲ್ಪ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ದಸರಾ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡಿಗರ ಔದಾರ್ಯ ದೊಡ್ಡದು. ಆ ಕಾರಣಕ್ಕಾಗಿಯೇ ನಾವು ಅನ್ಯ ಭಾಷಿಕರನ್ನು ನಮ್ಮವರನ್ನಾಗಿ ಮಾಡಿಕೊಳ್ಳುತ್ತೇವೆ. ಆದರೆ ಇದೇ ಔದಾರ್ಯವನ್ನು ಬೇರೆ ಭಾಷಿಕರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಅಂದು ಸಿಲ್ಕ್ ಸಿಟಿಯಾಗಿದ್ದ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಎಜುಕೇಶನ್ ಹಬ್ ಆಗಿಯೂ ಗುರುತಿಸಿಕೊಂಡಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನ ಮತ್ತೆ ಬರುವುದಿಲ್ಲ. ನಿಮ್ಮ ವ್ಯಕ್ತಿತ್ವ ರೂಪಿಸಿದ ತಂದೆ ತಾಯಿ ಅವರ ಶ್ರಮವನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಸಾಧಕರಾಗಿ ಹೊರಬನ್ನಿ ಎಂದು ಕರೆ ನೀಡಿದರು.
ಕಾಲೇಜಿನ ನಿರ್ದೇಶಕಿ ಡಾ.ಶೈಲಾ ಬಂಟನೂರ ಅವರು ಮಾತನಾಡಿ, ಹಲವು ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿರುವ ಕನ್ನಡಿಗರು ಸಹನಾಶೀಲರು ಮತ್ತು ಸಾಧಕರಾಗಿದ್ದಾರೆ ಎಂದರು.
ವೇದಿಕೆಯಲ್ಲಿ ಡೀನ್ ಸುನಿಲ್ ಕುಮಾರ್, ಪ್ರೊ.ಶಶಾಂಕ್ ಚಕ್ರದೇವ್, ಆಡಳಿತಾಧಿಕಾರಿ ಶ್ಯಾಮಸುಂದರ, ಸಂಯೋಜಕ ರಾಕೇಶ್, ವಿದ್ಯಾರ್ಥಿ ಸಂಘಟಕರಾದ ಸಮೃದ್, ಚಿರಂತ್, ಯಶವಂತ್ ಹಾ ಜರಿದ್ದರು.
ಕಾಲೇಜಿನ ಒಳಾಂಗಣ ಮತ್ತು ಹೊರಾಂಗಣ ಶೃಂಗರಿಸಿ ಕನ್ನಡ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಲಾಗಿತ್ತು.