ಬೆಂಗಳೂರು: ಸಂಗೀತ, ಸಾಹಿತ್ಯ ಮತ್ತು ನಾಟ್ಯದಲ್ಲಿ ದೈವತ್ವವಿದೆ ಅದನ್ನು ಇಂದಿನ ಮಕ್ಕಳಿಗೆ ಸಂಸ್ಕಾರದ ರೂಪದಲ್ಲಿ ನೀಡಬೇಕು ಎಂದು ಖ್ಯಾತ ಶಿಕ್ಷಣ ತಜ್ಞೆ ಹಾಗೂ ಜಿಆರ್ ಸಮೂಹ ಸಂಸ್ಥೆಗಳ ಸಂಸ್ಥಾಪಕಿ ಡಾ. ಗೀತಾರಾಮಾನುಜಂ ಪೋಷಕರಿಗೆ ಕಿವಿಮಾತು ಹೇಳಿದರು.
ನಗರದ ಮಲ್ಲತ್‌ಹಳ್ಳಿಯ ಕಲಾಗ್ರಾಮದಲ್ಲಿ ನಾಟ್ಯ ಕಲಾಸಿರಿ ಸಾಂಸ್ಕೃತಿಕ ವೇದಿಕೆ ನಾಟ್ಯ ಸನ್ನಿಧಿ ಭರತನಾಟ್ಯ ಶಾಲೆ ಸಂಸ್ಕೃತಿ ಸಚಿವಾಲಯ ಭಾರತ ಸರಕಾರದಿಂದ ಆಯೋಜಿಸಿದ್ದ ನಾಟ್ಯ ಸನ್ನಿಧಿ ಕಲಾ ಉತ್ಸವ-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರ, ಶಿಸ್ತು, ಶ್ರದ್ಧೆಯನ್ನು ಮೈಗೂಡಿಸಬೇಕು. ಬ್ರಾಹ್ಮಿ ಮೂಹರ್ತದಲ್ಲಿ ಎಬ್ಬಿಸಿ ಶಿಕ್ಷಣದ ಅರಿವು ಮೂಡಿಸಬೇಕು. ಮಕ್ಕಳ ಪ್ರದರ್ಶಿಸುವ ಯಾವುದೇ ಕಲೆಯನ್ನು ಹೀಯಾಳಿಸದೆ ಸ್ಪರ್ಧೆಗೆ ಕಲೆಯಲ್ಲಿ ಆನಂದ ಅನುಭವಿಸುವಂತೆ ಪ್ರೋತ್ಸಾಹಿಸಬೇಕು. ನಾಟಕವಿರಲಿ, ನೃತ್ಯವಿರಲಿ ಗುರುಗಳು ಮಗುವಿಗೆ ಯಾವ ಪಾತ್ರ ಕೊಟ್ಟಿದ್ದಾರೆ ಎಂದು ನೋಡಬಾರದು. ಆ ಪಾತ್ರವನ್ನು ಆ ಮಗು ಎಷ್ಟು ಪರಿಣಾಮಕಾರಿ ನಿಭಾಯಿಸಿದೆ ಎಂದು ಗಮನಿಸಿ, ಮಕ್ಕಳನ್ನು ಮಗುವಾಗಿ ನೋಡಿ ಪ್ರೋತ್ಸಾಹಿಸಿ ಎಂದು ಪೋಷಕರಿಗೆ ತಿಳಿಸಿದರು.
ಗುರುಗಳು ಮಕ್ಕಳನ್ನು ಕೈಹಿಡಿದು ನಡೆಸುವುದಿಲ್ಲ. ಅದೇ ದಾರಿ ಹೋಗು ಎಂದು ಅವರಿಗೆ ಗುರಿ ತೋರಿಸುತ್ತಾರೆ ಅಂತಹ ಕಾರ್ಯವನ್ನು ನಾಟ್ಯ ಸನ್ನಿಧಿ ಗುರುಗಳಾದ ಮೋನಿಷಾ ನವೀನ್ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಎನ್.ಎಸ್. ಸುಧೀಂದ್ರರಾವ್ಮಾತನಾಡಿ ಗುರುಗಳು ಹೇಳಿದ ಕಲಿಸಿದ ಮಾರ್ಗದರ್ಶನ ಪಡೆದರೆ ಒಳ್ಳೆಯ ಸಂಸ್ಕಾರವಂತಹ ಪ್ರಜೆಗಳಾಗುತ್ತಾರೆ. ಕಲಿಕೆಯ ಗುರಿ ಸಾಧಿಸಲು ಗಮನವಿಟ್ಟು ಪ್ರತಿಯೊಬ್ಬರು ಕೇಳಬೇಕು ಮತ್ತು ಅದನ್ನು ಕಲಿಯಬೇಕು ಎಂದರು. ನೃತ್ಯ ಕಲಿಕೆಯ ಜೊತೆಗೆ ವ್ಯಾಯಾಮವು ದೊರೆತು ಅರೋಗ್ಯವಂತ ರಾಗಿರಲು ಸಹಕಾರಿಯಾಗಿದೆ ಎಂದರು.
ದೂರದರ್ಶನದ ಗ್ರೇಡ್ ಕಲಾವಿದರಾದ ತಿರುಪತಿಯ ಡಾ. ಪಿ. ಶರತ್ ಚಂದ್ರ ಮಾತನಾಡಿ, ದೇಶ ವಿದೇಶಗಳಲ್ಲಿ ನಾಟ್ಯ ಸನ್ನಿಧಿ ಮಕ್ಕಳು ಪ್ರದರ್ಶನ ಕೊಡುವ ಮಟ್ಟಕ್ಕೆ ಬೆಳೆದಿದ್ದಾರೆ. ಈಗಾಗಲೇ ಅಂತಾರಾಜ್ಯ ಮಟ್ಟದಲ್ಲಿ ತಮ್ಮ ಭರತನಾಟ್ಯ ಕಲಾ ಪ್ರದರ್ಶನದಿಂದ ಪ್ರತಿಭೆ ತೋರಿಸಿದ್ದಾರೆ. ನೃತ್ಯ ಎಂಬ ನಾಟ್ಯ ಸರಸ್ವತಿ ಮಕ್ಕಳಿಗೆ ಮಾನಸಿಕ, ದೈಹಿಕ, ಶಾರೀರಿಕವಾಗಿಯೂ ಸದೃಢಗೊಳಿಸುವ ಶಕ್ತಿಯಾಗಿದೆ ಎಂದರು.
ಅಲ್ಪ್ರೈಡ್ ನೋಬೆಲ್ ಪಬ್ಲಿಕ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ನಾಗರಾಜು ವಿ. ಮಾತನಾಡಿ, ಹತ್ತು ಹಲವಾರು ಸಂಸ್ಥೆ ಹಾಗೂ ಮಕ್ಕಳನ್ನು ಬೆಳೆಸುವಂತ ಶಕ್ತಿಯನ್ನು ಭಗವಂತ ದಯಪಾಲಿಸಲಿ. ಯಾರನ್ನು ಕಡೆಗಣಿಸದೆ ಗುರು ಮಕ್ಕಳ ಗುರಿಗೆ ಸದಾ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾರೆ. ಗುರುಗಳಿಗೆ ಪೋಷಕರು ಸದಾ ಸಹಕರಿಸಬೇಕು ಎಂದರು. ಗಾಯಕ ವೀರೇಶ ಎಂಪಿಎಂ, ಗಾಯಕಿ ಶಾಲಿನಿ ಎಸ್ ರಾವ್ , ಸಂಸ್ಥೆಯ ಮುಖ್ಯಸ್ಥೆ ಮೋನಿಷಾ ನವೀನ್, ನಿವೃತ್ತ ಶಿಕ್ಷಕಿ ಹೇಮಾವತಿ,ಹಿರಿಯ ವಿದ್ಯಾರ್ಥಿನಿ ಪ್ರಿಯಾಂಕ, ಲೇಖಕ ಲೇಪಾಕ್ಷಿ ಮೊದಲಾದವರು ಇದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಣ್ಯರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ನಾಟ್ಯ ಸನ್ನಿಧಿ ಹಾಗೂ ಬೆಂಗಳೂರಿನ ಇತರೆ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಪ್ರದರ್ಶನಗಳು ನಡೆದವು.