ಪ್ರವಾಸಿ ತಾಣಗಳಲ್ಲಿ ಒಂದು ಕೋಟಿ ಸಸಿ ನೆಡುವ ಗುರಿ - ಸಚಿವ ಹೆಚ್.ಕೆ.ಪಾಟೀಲ

varthajala
0

ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಯುಕ್ತ ರಾಜ್ಯದ ಪ್ರವಾಸಿ ತಾಣಗಳಲ್ಲಿ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ತಿಳಿಸಿದರು.

ಇಂದು ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ 2023 ಅನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ರಾಜ್ಯವು  ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯ, ಜಲಪಾತ, ಕಡಲತೀರ, ಉತ್ತಮ ಮೂಲಭೂತ ಸೌಕರ್ಯಗಳನ್ನೊಳಗೊಂಡ ಪ್ರವಾಸಿ ತಾಣಗಳನ್ನು ಹೊಂದಿದ್ದು, ವನ್ಯಜೀವಿಗಳ ಧಾಮವಾಗಿದೆ ಎಂದರು.

ಹಂಪಿ ಮತ್ತು ಪಟ್ಟದಕಲ್ಲು, ಸ್ಮಾರಕ ಸಮೂಹ ಮತ್ತು ನೈಸರ್ಗಿಕ ತಾಣವಾದ ಪಶ್ಚಿಮಘಟ್ಟಗಳನ್ನು ರಾಜ್ಯದ ಮೂರು ವಿಶ್ವ ಪರಂಪರೆ ತಾಣಗಳೆಂದು ಘೋಷಿಸಲಾಗಿದ್ದು, ಇತ್ತೀಚಿಗಷ್ಟೇ ಬೇಲೂರಿನ         ಶ್ರೀಚನ್ನಕೇಶವ, ಹಳೇಬೀಡಿನ ಶ್ರೀಹೊಯ್ಸಳೇಶ್ವರ ಮತ್ತು ಸೋಮನಾಥಪುರದ ಶ್ರೀಕೇಶವ ದೇವಾಲಯದ ಸಮೂಹಗಳನ್ನು ಒಳಗೊಂಡ ಹೊಯ್ಸಳ ಪವಿತ್ರ ವಾಸ್ತುಶಿಲ್ಪ ಸಮೂಹ ತಾಣವು ಯುನೆಸ್ಕೋ ಸಂಸ್ಥೆಯ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗೊಂಡಿರುತ್ತದೆ. ಯುನೆಸ್ಕೋ ಸಂಸ್ಥೆಯ ವಿಶ್ವಪರಂಪರೆ ಪಟ್ಟಿಯಲ್ಲಿ 42 ಪ್ರವಾಸಿತಾಣಗಳಿದ್ದು, ಅದರಲ್ಲಿ ನಮ್ಮ ರಾಜ್ಯದ 4 ಪ್ರವಾಸಿ ತಾಣಗಳಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ರಾಜ್ಯವು ಸಾಂಸ್ಕøತಿಕ ಪರಂಪರೆಯ ನೆಲೆಯಾಗಿದ್ದು, ಬನವಾಸಿ ಕದಂಬರು, ಬಾದಾಮಿ ಚಾಲುಕ್ಯರು, ಕಲ್ಯಾಣ ಚಾಲುಕ್ಯರು, ದ್ವಾರಸಮುದ್ರದ ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ಅರಸರು, ಬಹಮನಿ ಸುಲ್ತಾನರು ಹಾಗೂ ಮೈಸೂರು ಅರಸರು ಆಳ್ವಿಕೆ ನಡೆಸಿ ಸ್ಮಾರಕಗಳು, ಅರಮನೆಗಳು, ಶಾಸನಗಳು ಶಿಲಾಶಿಲ್ಪಗಳನ್ನೊಳಗೊಂಡಂತೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.





ಪ್ರವಾಸೋದ್ಯಮವು ಅಧ್ಯಯನದ ಒಂದು ಭಾಗವಾಗಿದೆ. ಕೋಶ ಓದು ದೇಶ ಸುತ್ತು ಎನ್ನುವ ಗಾದೆ ಮಾತಿಗೆ ಶಕ್ತಿ ಯೋಜನೆಯು ಸಹಾಯವಾಗಿದ್ದು, ಸಮಾಜದ ಕಟ್ಟಕಡೆಯ ಬಡಮಹಿಳೆಯೂ ಸಹ ಪ್ರವಾಸ ಮಾಡಲು ಅನುಕೂಲವಾಗಿದೆ. ಶಕ್ತಿ ಯೋಜನೆಯ ಮೂಲಕ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದರು.


ರಾಜ್ಯವು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯಾಗಿದ್ದು, ತಂತ್ರಜ್ಞಾನವು ವಿಶ್ವಪರಂಪರೆ ಪ್ರವಾಸಿತಾಣಗಳನ್ನು ಹತ್ತಿರ ತರಿಸುತ್ತಿದೆ. ಸ್ಮಾರ್ಟ್ ಫೋನ್ ಮೂಲಕ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪಡೆದು ವೀಕ್ಷಿಸಬಹುದು.  ಪ್ರವಾಸಿ ತಾಣಗಳ ಸಂರಕ್ಷಣೆ, ನವೀಕರಣ, ಅಭಿವೃದ್ಧಿ ಮಾಡಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸೋಣ ಎಂದರು.


ಇದೇ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯು ಆಯೋಜನೆ ಮಾಡಿದ ಛಾಯಾಚಿತ್ರ, ವಿಡಿಯೋ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿವಾಜಿನಗರದ ಶಾಸಕರಾದ ರಿಜ್ವಾನ್ ಅರ್ಷದ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಜಿ. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ.ವಿ. ರಾಮ್ ಪ್ರಸಾತ್ ಮನೋಹರ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಮಾಜಿ ಶಾಸಕರು ಉಪಸ್ಥಿತರಿದ್ದರು

Post a Comment

0Comments

Post a Comment (0)