ಔಷಧಿ ಸಸ್ಯಗಳನ್ನು ಹೆಚ್ಚಿನ ವಲಯಗಳಲ್ಲಿ ಬೆಳೆಸಬೇಕು - ಡಾ. ಲೀಲಾ

varthajala
0

ಬೆಂಗಳೂರು : ಔಷಧಿ ಸಸ್ಯಗಳನ್ನು ಹೆಚ್ಚಿನ ವಲಯಗಳಲ್ಲಿ ಬೆಳೆಸುವುದರಿಂದ ಅದರ ಸಂರಕ್ಷಣೆ ಮಾಡಬಹುದು. ರೈತರು ವ್ಯವಸಾಯದಲ್ಲಿ ಅಳವಡಿಸಿ, ನಂತರ  ಮಾರುಕಟ್ಟೆ ಹಾಗೂ ಬೆಲೆಯನ್ನು ನಿಗದಿಗೊಳಿಸಬೇಕು. ಇದರಿಂದ ರೈತರು ಉತ್ಸಾಹದಿಂದ  ಔಷಧಿ ಬೆಳೆಗಳನ್ನು ಬೆಳೆಯುತ್ತಾರೆ ಎಂದು ಆಯುಷ್ ಇಲಾಖೆಯ ಆಯುಕ್ತರಾದ ಡಾ. ಲೀಲಾ ಅವರು ತಿಳಿಸಿದರು.


ಇಂದು ವಿಕಾಸಸೌಧದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಸಹಯೋಗದೊಂದಿಗೆ ಔಷಧಿ ಸಸ್ಯವಲಯದ ಕ್ರಿಯಾ ಯೋಜನೆ (2023-33) ರಚಿಸಲು ರಾಜ್ಯಮಟ್ಟದ ಪಾಲುದಾರರ ಸಮಾಲೋಚನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ  ಅವರು ಅಥರ್ವಣ ವೇದದಲ್ಲಿ ಕಾಯಿಲೆ, ಗುಣಲಕ್ಷಣ, ಗುಣಪಡಿಸಬಹುದುದಾದ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಸಿಗುತ್ತದೆ.  ಕಾಲನಂತರ ಆಯುರ್ವೇದದ ಬಗ್ಗೆ ಪ್ರಾಶಸ್ತ್ಯ ನೀಡದ ಕಾರಣ ಕೆಲವು ಔಷಧಿ ಸಸ್ಯಗಳು ನಶಿಸಿ ಹೋಗಿವೆ ಎಂದು ತಿಳಿಸಿದರು.

2014-15 ರಲ್ಲಿ 17000 ಕೋಟಿ ವಹಿವಾಟು ಹಾಗೂ 2022ರಲ್ಲಿ 169 ಮಿಲಿಯನ್ ಡಾಲರ್ ಲಾಭ ಕೈಗಾರಿಕೆಗಳು ಪಡೆದಿವೆ.
ಔಷಧಿ ಸಸ್ಯಗಳ ಬೇಡಿಕೆ ಹಾಗೂ ಪೂರೈಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು. ಜನಸಾಮಾನ್ಯರಿಗೆ ಗಿಡಮೂಲಿಕೆಗಳ ಅರಿವು ಮೂಡಿಸಬೇಕು. ಗಿಡಮೂಲಿಕೆಗಳ ಗಾರ್ಡನ್ ಬೆಳೆಯಲು ಆಯುಷ್ ಇಲಾಖೆಯಲ್ಲಿ ಅನುದಾನ ನೀಡಲಾಗುತ್ತಿದೆ.  ಆಯುಷ್ ಇಲಾಖೆಯು ಕಿಚನ್ ಗಾರ್ಡನ್ ಬಗ್ಗೆ ಸಾಕಷ್ಟು ಮಾಹಿತಿ ಒದಗಿಸುತ್ತಿದೆ. ಕಿಚನ್ ಗಾರ್ಡನ್ ಉಪಯೋಗಿಸಿ  ಆರೋಗ್ಯ ಸಮಸ್ಯೆಗಳನ್ನು ಹೇಗೆ ಗುಣಪಡಿಸಬಹುದು ಎಂಬ ಜ್ಞಾನ ನೀಡಲಾಗುತ್ತಿದೆ. ಡಿಜಿಟಲೈಸೇಷನ್ ಮೂಲಕ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.  

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ರಾಜೀವ್ ರಂಜನ್  ಅವರು ಮಾತನಾಡಿ ಕಾರ್ಯಾಗಾರವು ಔಷಧೀಯ ಸಸ್ಯಗಳ ಪರಿಚಯ, ಸಂರಕ್ಷಣೆ, ಉಪಯೋಗ ಬಗ್ಗೆ ಮತ್ತು  ಕಾಡುಗಳಲ್ಲಿ ಇತರೆ ಸ್ಥಳಗಳಲ್ಲಿ ಹೇಗೆ ಬೆಳೆಯಬಹುದು ಎಂಬ ಉದ್ದೇಶವನ್ನು ಹೊಂದಿದೆ ಎಂದರು.

ಕೋವಿಡ್-19 ಸಮಯದಲ್ಲಿ ಜನರು ಮುಂಜಾಗ್ರತಾ ಕ್ರಮವಾಗಿ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಿ ಕಷಾಯವನ್ನು ಸೇವಿಸುತ್ತಿದ್ದರು. ಔಷಧಿ ಸಸ್ಯವಲಯದ ಕ್ರಿಯಾ ಯೋಜನೆ (2023-33) 10 ವರ್ಷದ ಯೋಜನೆಯಾಗಿದೆ. ಯೋಜನೆಯ ಬಗ್ಗೆ ಚರ್ಚೆ ಮಾಡಿ ಎರಡು ಮೂರು ವರ್ಷಕ್ಕೊಮ್ಮೆ ಸಾಧ್ಯವಾದರೆ ತಿದ್ದುಪಡಿ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿಯಾದ ಸುದರ್ಶನ್ ಜಿ.ಎ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಆಯುರ್ವೇದ ಔಷಧ ತಯಾರಕರ ಸಂಘದ ಅಧ್ಯಕ್ಷರಾದ ಡಾ. ನಿರಂಜನ್ ಮೂರ್ತಿ, ಶ್ರೀ ಶ್ರೀ ಟಟ್ವ ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ್ ವರ್ಚಸ್ವಿ ಇತರೆ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)