"ಪಾಶ್ಚಾತ್ಯ ಸಂಸ್ಕೃತಿಯತ್ತ ಹೊರಳಿರುವ ಯುವ ಪೀಳಿಗೆಗೆ ಪೌರಾಣಿಕ ಕಥಾನಕಗಳ ಬಗ್ಗೆ ಬೋಧಿಸಲು ಭಜನೆಗಿಂತ ಅತ್ಯುತ್ತಮ ಮಾರ್ಗ ಇನ್ನೊಂದಿಲ್ಲ. ತಾಳ ಹಿಡಿಯುವುದು ಸಣ್ಣ ಕೆಲಸವಲ್ಲ ಎಂಬುದನ್ನು ಸಣ್ಣ ಮಕ್ಕಳಿಗೆ ಅರಿವು ಮಾಡಿಕೊಡಬೇಕಾದ ಹೊಣೆಗಾರಿಕೆ ದೊಡ್ಡವರ ಮೇಲಿದೆ" ಎನ್ನುತ್ತಾರೆ ಪ್ರದೀಪಕುಮಾರ ಹೆಬ್ರಿ. ಅವರು ಲೇಖಕ ಗುರುರಾಜ ಪೋಶೆಟ್ಟಿಹಳ್ಳಿ ಅವರ " ಶ್ರೀಕೃಷ್ಣಾರ್ಪಣ" ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
ಪ್ರಸ್ತುತ ಕೃತಿ ಪರಮಾತ್ಮನ ಸಾನ್ನಿಧ್ಯ ಭಾಗ್ಯವನ್ನು ನಮಗೆ ಒದಗಿಸುವ ಸುಕೃತಿ. ಬೆಂಗಳೂರು ಹೊರವಲಯದ ಕಾಕೋಳಿನಲ್ಲಿ ನೆಲೆನಿಂತ ಶ್ರೀವೇಣುಗೋಪಾಲಕೃಷ್ಣನ 90ನೇ ಬ್ರಹ್ಮರಥೋತ್ಸವದ ಅಂಗವಾಗಿ ನಡೆದ ಬೃಹತಿ ಸಹಸ್ರ ಮಹಾಯಾಗ ಪುಣ್ಯ ಪರ್ವದ ಜ್ಞಾನ ಪ್ರಸಾದವೇ ಈ ಕೃತಿ.
ಪರಂಪರೆಯ ಪ್ರವಕ್ತಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರಿಂದ ಅಂದದಲ್ಲಿ ಸಂಕಲನಗೊಂಡಿದೆ. "ನಾರಾಯಣ -ಅವತಾರ ಚಿಂತನ"," ವಾಸುದೇವ -ಸ್ತೋತ್ರ ಮಂಥನ"," ಸಂಕರ್ಷಣ -ಅನುಷ್ಠಾನ ದರ್ಪಣ"," ಪ್ರದ್ಯುಮ್ನ -ಗುರು ನಮನ"," ಅನಿರುದ್ಧ -ಕ್ಷೇತ್ರ ದರ್ಶನ" ಎಂಬ ಐದು ಅಧ್ಯಾಯಗಳಲ್ಲಿನ 41 ಲೇಖನಗಳಲ್ಲಿ ಜ್ಞಾನಮೂರ್ತಿ ಹಯಗ್ರೀವ, ಭವರೋಗ ವೈದ್ಯ- ಧನ್ವಂತರಿ, ಶ್ರೀರಾಮ, ಶ್ರೀಕೃಷ್ಣ,ತಿರುಪತಿ ತಿಮ್ಮಪ್ಪ,ಶ್ರೀಮಹಾಲಕ್ಷ್ಮಿ,ಶ್ರೀತುಲಸಿ,ಶಂಖ, ಸಾಲಿಗ್ರಾಮ,ಗೌರೀಶ, ಗರುಡ,ಗಣಪತಿ,ನವಗ್ರಹ ವಿಷ್ಣುಸಹಸ್ರನಾಮ, ಭಗವದ್ಗೀತೆ, ಗಜೇಂದ್ರಮೋಕ್ಷ, ಆದಿಶಂಕರಾಚಾರ್ಯ, ರಾಮಾನುಜಾಚಾರ್ಯ, ಆಚಾರ್ಯಶ್ರೀ ಮಧ್ವ, ಶ್ರೀಪಾದರಾಜ, ಶ್ರೀವ್ಯಾಸರಾಜ, ಪುರಂದರ- ಕನಕದಾಸರು, ಶ್ರೀಕಾಕೋಳು ಕ್ಷೇತ್ರ.... ಹೀಗೆ ಭಗವಂತ, ಭಗವದ್ಭಕ್ತರು ಹಾಗೂ ಭಗವದ್ ಕ್ಷೇತ್ರಗಳನ್ನು ಪರಿಚಯಿಸಿದೆ. ಈ ಕೃತಿಯ ಓದುವಿಕೆಯಿಂದ ಪರಮಾತ್ಮ ಸಾನ್ನಿಧ್ಯ ಸುಖ ನಿಶ್ಚಿತವಾಗಿ ಸಿಗುತ್ತದೆ.
ಈ ಕೃತಿಯಲ್ಲಿನ ಕೆಲವು ದಿವ್ಯಮೋಹಕ ನುಡಿಗಳಿವು:-
ಸ್ಮರಣೆಯೊಂದೇ ಸಾಲದೇ ಶ್ರೀಹರಿಯ ನಾಮವೊಂದೇ ಸಾಲದೇ ಎಂದರು ಹರಿದಾಸರು. ಶ್ರೀಹರಿಯೇ ವೈಕುಂಠಪತಿಯಾಗಿ ವೆಂಕಟಾದ್ರಿಯಲ್ಲಿ ಸ್ವಯಂಭೂ ಆಗಿ ನೆಲೆಸಿದ್ದಾನೆ. ನಿಸರ್ಗದಲ್ಲೇ ದೇವರ ರೂಪವನ್ನು ಕಂಡ ಪ್ರಾಚೀನರು ನಿಸರ್ಗದತ್ತ ಕಲ್ಲನ್ನೇ ದೇವರೆಂದು ಪೂಜಿಸಿದರು. ಅದುವೇ ಸಾಲಿಗ್ರಾಮ ಶಿಲೆ. ಶ್ರೀಕೃಷ್ಣ ಅಂದರೆ ಭಾರತೀಯ ಸಂಸ್ಕೃತಿಯ ಪೂರ್ಣರೂಪ. ಭಾರತೀಯ ಸಂಸ್ಕೃತಿಯ ಎಲ್ಲ ಆಯಾಮಗಳನ್ನೂ ಶ್ರೀಕೃಷ್ಣನ ತತ್ತ್ವ ಪ್ರಭಾವಿಸಿದೆ. ಗಾಯತ್ರೀ ಮಂತ್ರದಲ್ಲಿ ಇಪ್ಪತ್ತನಾಲ್ಕು ಅಕ್ಷರಗಳು. ಒಂದೊಂದು ವರ್ಣಕ್ಕೂ ಕೇಶವಾದಿ ಇಪ್ಪತ್ತನಾಲ್ಕು ರೂಪಗಳೇ ದೇವತೆಗಳಾಗಿವೆ. ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಳಾಯಚ ಎಂದೇ ಸ್ತುತಿಸಲ್ಪಡುವ ಗರುಡ ಭಗವಾನ್ ವಿಷ್ಣುವಿನ ವಾಹನ. ಗರುಡಗಂಭ ಇಲ್ಲದ ದೇವಸ್ಥಾನಗಳಿಲ್ಲ. ಗರುಡೋತ್ಸವವಿಲ್ಲದ ವಿಶೇಷ ಉತ್ಸವಗಳಿಲ್ಲ.
ಪಾಶ್ಚಾತ್ಯ ಸಂಸ್ಕೃತಿಯತ್ತ ಹೊರಳಿರುವ ಯುವ ಪೀಳಿಗೆಗೆ ಪೌರಾಣಿಕ ಕಥಾನಕಗಳ ಬಗ್ಗೆ ಬೋಧಿಸಲು ಭಜನೆಗಿಂತ ಅತ್ಯುತ್ತಮ ಮಾರ್ಗ ಇನ್ನೊಂದಿಲ್ಲ. ತಾಳ ಹಿಡಿಯುವುದು ಸಣ್ಣ ಕೆಲಸವಲ್ಲ ಎಂಬುದನ್ನು ಸಣ್ಣ ಮಕ್ಕಳಿಗೆ ಅರಿವು ಮಾಡಿಕೊಡಬೇಕಾದ ಹೊಣೆಗಾರಿಕೆ ದೊಡ್ಡವರ ಮೇಲಿದೆ.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೊ/ ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೆ" ಎಂಬ ಕೀರ್ತನೆಯಲ್ಲಿ ಅನುಮಾನದ ಪ್ರಶ್ನೆಗಳನ್ನು ಎತ್ತುವ ಮೂಲಕ ಬಯಲು-ಆಲಯ, ನಯನ-ಬುದ್ಧಿ, ಸವಿ-ಸಕ್ಕರೆ, ಜಿಹ್ವೆ-ಮನಸ್ಸು,ಕುಸುಮ- ಗಂಧ ಇವುಗಳ ಬಂಧುತ್ವವನ್ನಹ ಕನಕದಾಸರು ತೋರಿದ್ದಾರೆ. ಹೀಗೆ ಗುರುರಾಜ ಪೋಶೆಟ್ಟಿಹಳ್ಳಿ ಅವರು ತಮ್ಮೀ " ಶ್ರೀಕೃಷ್ಣಾರ್ಪಣ" ಕೃತಿಯಿಂದ ನಮಗೆ ಪರಮಾತ್ಮ ಸಾನ್ನಿಧ್ಯ ಸುಖಕ್ಕೆ ದಾರಿತೋರಿದ್ದಾರೆ.