ಬೆಂಗಳೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಆಡಳಿತ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಕಾಂತರಾಜ ಜಾತಿ ಗಣತಿ ವರದಿಯ ವಿರುದ್ಧ ಬ್ರಾಹ್ಮಣ ಸಮಾಜ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಾಂತರಾಜ ಆಯೋಗದ ವರದಿ ತಮ್ಮ ಸರ್ಕಾರ ಸ್ವೀಕರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಹಿನ್ನೆಲೆಯಲ್ಲಿ ವಿಶ್ವ ವಿಪ್ರತೃಯಿ ಪರಿಷತ್ ವತಿಯಿಂದ ರಾಜ್ಯಾದ್ಯಂತ ಇರುವ ಬ್ರಾಹ್ಮಣ ಸಂಘಟನೆಗಳ ಸಭೆ ಆಯೋಜಿಸಲಾಗಿತ್ತು.
ರಾಜ್ಯ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ
ಸಚ್ಚಿದಾನಂದ ಮೂರ್ತಿ, ವಿಪ್ರತೃಯಿ ಪರಿಷತ್ ಅಧ್ಯಕ್ಷ ರಘುನಾಥ್ ಹಾಗೂ ಬಬ್ಬೂರು ಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ ವಿ ಪ್ರಸನ್ನ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ಸಭೆಯ ನಿರ್ಣಯಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ನ್ಯಾಯಮೂರ್ತಿ ಎನ್ ಕುಮಾರ್, ಜಾತಿ ಗಣತಿಯಲ್ಲಿ ಬ್ರಾಹ್ಮಣರನ್ನು 43 ಉಪ ಪಂಗಡಗಳಾಗಿ ವಿಂಗಡಿಸಿ, ಮೀಸಲಾತಿ ಸೇರಿದಂತೆ ಸರ್ಕಾರದ ಸೌಲಭ್ಯಗಳು ವಿಪ್ರ ಸಮಾಜಕ್ಕೆ ಹಿಡಿದಿರುವಂತೆ ಮಾಡುವ ಹುನ್ನಾರ ನಡೆದಿದೆ. ಬ್ರಾಹ್ಮಣರನ್ನು ಒಂದೇ ಶೀರ್ಷಿಕೆ ಅಡಿಯಲ್ಲಿ ನಮೂದಿಸಿ, ಒಟ್ಟು ಸಂಖ್ಯೆ ಪ್ರಕಟಿಸಬೇಕು. ಇಲ್ಲವಾದರೆ ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ತಿರಸ್ಕರಿಸುವಂತೆ ಆಗ್ರಹಿಸಿ ಹೋರಾಟ ನಡೆಸುವುದಾಗಿ ಹೇಳಿದರು....
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಪರಿಷ್ಕರಣೆ ಮಾಡಬೇಕು.
ಉಪ ಪಂಗಡಗಳಾಗಿ ವಿಂಗಡಿಸಿರುವ ಬ್ರಾಹ್ಮಣ ಸಂಖ್ಯೆ ತೀರಾ ಕಡಿಮೆ ಎಂದು ತೋರಿಸುವ ದುರುದ್ದೇಶ ಈ ವರದಿಯ ಹಿಂದೆ ಇದೆ.
ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು...
ವಿಶ್ವ ವಿಪ್ರತೃಯಿ ಪರಿಷತ್ ಅಧ್ಯಕ್ಷ ರಘುನಾಥ್ ಹಾಗೂ ಬಬ್ಬೂರು ಕಮ್ಮೆ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಸನ್ನ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.