ಪಠ್ಯ ಪುಸ್ತಕಗಳ ಪರಿಷ್ಕರಣ ಮೊದಲಿನಿಂದಲೂ ನಡೆಯುತ್ತಿತ್ತು. ಆದರೆ, ಸಾರ್ವತ್ರಿಕವಾಗಿ ಇಷ್ಟೊಂದು ವಾದ-ವಿವಾದ ಗಳಾಗುತ್ತಿರಲಿಲ್ಲ. ಅವೆಲ್ಲ ತಜ್ಞರ ವಲಯಕ್ಕೆ ಸೀಮಿತವಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳು ಬದಲಾದಂತೆ ಪಠ್ಯಗಳನ್ನು ಪರಿಷ್ಕರಿಸುವ ಪ್ರವೃತ್ತಿ ಕಂಡುಬರುತ್ತಿದ್ದು, ಇದು ಮಕ್ಕಳಲ್ಲಿ ಆತಂಕವನ್ನು ಉಂಟುಮಾಡುವ ಮತ್ತು ಶಿಕ್ಷಕರನ್ನು ಗೊಂದಲಕ್ಕೀಡು ಮಾಡುವಂತಾಗಿರುವುದು ವಿಷಾದನೀಯ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿ ಮಾಡಿದ ಬದಲಾವಣೆ ಸಾರ್ವಜನಿಕವಾಗಿ ಚರ್ಚೆಗೆ ಬಂತು. ನಂತರ ಬಂದ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥರ ನೇತೃತ್ವದಲ್ಲಿ ಪಠ್ಯ ಪರಿಶೀಲನಾ ಸಮಿತಿ ರಚಿಸಿತು. ಇದರ ಬಗ್ಗೆ ಪರ-ವಿರೋಧ ಚರ್ಚೆಯಾಯಿತು. ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೊಮ್ಮಾಯಿ ನೇತೃತ್ವದ ಸರ್ಕಾರ ಪರಿಷ್ಕರಣೆ ಮಾಡಿ ಜಾರಿಗೆ ತಂದಿದ್ದ ಪಠ್ಯಪುಸ್ತಕಗಳನ್ನು ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಮೂಲಕ (2023-2024 ಸಾಲಿನ ಪಠ್ಯಪುಸ್ತಕ) ಆದೇಶ ಹೊರಡಿಸಿದೆ.
ಸರ್ಕಾರ ಬದಲಾದಂತೆಲ್ಲ ಪಠ್ಯಕ್ರಮಗಳು ಬದಲಾಗುತ್ತಾ ಹೋದರೆ ಮಕ್ಕಳು ಮತ್ತು ಶಿಕ್ಷಕರ ಪರಿಸ್ಥಿತಿ ಏನು? ನಿಶ್ಚಿತವಾಗಿಯೂ ಪಠ್ಯಗಳ ಪರಿಷ್ಕರಣ ಗೊಂದಲ ಸೃಷ್ಟಿಸಿದೆ. ಗೊಂದಲಕ್ಕೆ ಕಾರಣ ಎಡ-ಬಲ ಪಂಥದವರ ದೃಷ್ಟಿಕೋನದಲ್ಲಿ ಪರಿಷ್ಕರಣ ನಡೆದಿರುವುದೇ ಆಗಿದೆ.
ಪಠ್ಯಪುಸ್ತಕ ಪರಿಷ್ಕರಣೆ ಸುತ್ತಲಿನ ವಿವಾದಗಳು, ರಾಜಕೀಯ ಕೆಸರೆರಚಾಟಗಳು ಅನಪೇಕ್ಷಣೀಯವಾದದ್ದು. ಪರಿಷ್ಕರಣಗಳು ವಸ್ತುನಿಷ್ಠ ನೆಲೆಯಲ್ಲಿ ಆಗಿಲ್ಲ. ಪಠ್ಯ ಪುಸ್ತಕಗಳನ್ನು ಅಧಿಕಾರದಲ್ಲಿರುವವರು ತಮ್ಮತಮ್ಮ ಮೂಗಿನ ನೇರಕ್ಕೆ ಬದಲಿಸುವ/ ಪರಿಷ್ಕರಣಗೊಳಿಸುವ ಕೆಲಸ ಮಾಡಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ವಿಚಾರಧಾರೆಗಳ ಪ್ರಚಾರಕ್ಕಾಗಿ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೆ ಮುಂದಾದರೆ ಅದು ಎಲ್ಲಿಗೆ ಹೋಗುತ್ತದೆ? ಈ ಹಿಂದೆ ವಿದ್ವಾಂಸರು, ಶಿಕ್ಷಣ ಕ್ಷೇತ್ರದ ಅನುಭವಿಗಳು ಮತ್ತು ಸಂಶೋಧಕರು ಮಕ್ಕಳು ಏನನ್ನು ಓದಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಈಗ ರಾಜಕಾರಣಿಗಳು ನಿರ್ಧರಿಸುತ್ತಿರುವುದು ಅಪಾಯಕಾರಿ ಬೇಳವಣಿಗೆ. ಒಟ್ಟಿನಲ್ಲಿ ಒಂದು ಗುಂಪು ಮಾಡಿದ್ದನ್ನು ಇನ್ನೊಂದು ಗುಂಪು ವಿರೋಧಿಸುತ್ತಿದೆ. ಪಠ್ಯ ಪುಸ್ತಕಗಳ ಬಗ್ಗೆ ಇದ್ದ ಪಾವಿತ್ರ್ಯ ನಾಶವಾಗಿದೆ. ಇದಕ್ಕೆ ಪರಿಹಾರವೆಂದರೆ, ಪಠ್ಯ ಪುಸ್ತಕ ರಚನೆಗೆ ರಾಜಕೀಯ ಹಿತಾಸಕ್ತಿಯಿಲ್ಲದ ವಿಷಯ ತಜ್ಞರ ಸ್ಥಾಯಿ ಸಮಿತಿಯನ್ನು ರಚಿಸುವುದೇ ಆಗಿದೆ. ಆದರೆ, ನಿಷ್ಪಕ್ಷ ತಜ್ಞರನ್ನು ಹುಡುಕುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಒಟ್ಟಿನಲ್ಲಿ ಈಗ ಮಕ್ಕಳ ಪಠ್ಯಗಳು ರಾಜಕಾರಣದ ಬಣ್ಣ ಪಡೆದುಕೊಂಡಿದೆ. ಇದರಲ್ಲಿ ಆ ಪಕ್ಷ, ಈ ಪಕ್ಷ ಎನ್ನುವ ಬೇಧವೇನಿಲ್ಲ. ರಾಜಕೀಯ ಪಕ್ಷಗಳು ಶಿಕ್ಷಣ ಅಥವಾ ಪಠ್ರಕ್ರಮದ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕೆಂಬ ಗಂಡಾಂತರಕಾರಿ ಚಪಲದಿಂದ ದೂರವಿರಬೇಕು. ಇಲ್ಲದಿದ್ದರೆ, ಕರ್ನಾಟಕಕ್ಕೆ ‘ಅರಾಜಕತೆಯ ಆಡುಂಬೊಲ' ಎನ್ನುವ ಕಳಂಕ ಮೆತ್ತಿಕೊಳ್ಳುವುದರಲ್ಲಿ ಯಾವ ಅನುಮಾನವೂ ಇಲ್ಲ.