ಮಲ್ಲೇಶ್ವರದಲ್ಲಿ ಅರ್ಥಪೂರ್ಣ ಪತ್ರಿಕಾ ದಿನಾಚರಣೆ

varthajala
0

ಬೆಂಗಳೂರು : ಪ್ರಜಾಪ್ರಭುತ್ವದಲ್ಲಿ  ನಾಲ್ಕನೇ ಅಂಗವಾಗಿ ಗುರುತಿಸಲ್ಪಡುವ  ಪತ್ರಿಕಾ ರಂಗವನ್ನು ಹಾಗೂ ಈ ವೃತ್ತಿಯಲ್ಲಿ ಸಮಾಜಮುಖಿ ಸೇವೆಗಾಗಿ ಜವಾಬ್ದಾರಿಯುತ ಪ್ರಜೆಯಾಗಿ, ಮಾನವೀಯತೆಯ ಪ್ರತಿಪಾದಕರಾಗಿ, ಅನ್ಯಾಯ ಅಕ್ರಮಗಳ ವಿರುದ್ಧದ ಧ್ವನಿಯಾಗಿ, ಇಡೀ ವಿಶ್ವದ ಆಗು ಹೋಗುಗಳ ವಿಚಾರ ವೈವಿಧ್ಯಗಳ ಬಗೆಗಿನ, ಕಲೆ ಸಂಸ್ಕೃತಿ,  ರಾಜಕೀಯ ವಿದ್ಯಮಾನಗಳ, ಕ್ರೀಡಾ ಲೋಕದ, ಸಿನಿಮಾ ರಂಗದ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸಮಾಜಕ್ಕೆ  ಎಚ್ಚರ ಅರಿವು ಮೂಡಿಸುತ್ತಿರುವ ಪತ್ರಿಕಾ ರಂಗವನ್ನು ವಿಶೇಷವಾಗಿ ಗುರುತಿಸುವ ಗೌರವಿಸುವ ಸಲುವಾಗಿ ಪ್ರತಿ ವರ್ಷ ಜುಲೈ ಒಂದರಂದು ಪತ್ರಿಕಾ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.  

 ಮಲ್ಲೇಶ್ವರದ ಸೇವಾ ಸದನದಲ್ಲಿ ವಾರ್ತಾಜಾಲ ಮೀಡಿಯ  ಸಂಸ್ಥೆಯ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.







ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ  ನಿಕಟಪೂರ್ವ ಉನ್ನತ ಶಿಕ್ಷಣ ಸಚಿವರು ಹಾಗೂ ಮಲ್ಲೇಶ್ವರದ ಶಾಸಕರಾದ ಡಾ. ಸಿ.ಎನ್‌.ಅಶ್ವಥನಾರಾಯಣರವರು ಸಭೆಯನ್ನು ಉದ್ದೇಶಿಸಿ  ಮಾತನಾಡುತ್ತಾ, ಸಮಾಜದ ಅಭಿವೃದ್ಧಿಗೆ ಪತ್ರಿಕಾರಂಗದ ಕೊಡುಗೆ ಅಪಾರವಾಗಿದೆ ಎಂಬುದನ್ನು ಸಾರಿ ಹೇಳಿದ ಮಾತಿಗೆ ಸಭಿಕರಿಂದ ಸ್ವಾಗತ ಹಾಗೂ ಹರ್ಷೋದ್ಗಾರಗಳು ವ್ಯಕ್ತವಾಯಿತು. 

 ಈ ವಿಶೇಷ ದಿನದಂದೇ ಪತ್ರಕರ್ತರೊಂದಿಗೆ, ಸಮಾಜದಲ್ಲಿ ಜನರು ಉತ್ತಮ ಆರೋಗ್ಯವನ್ನು ಹೊಂದಲು ಹಾಗೂ ರೋಗ ರುಜಿನಗಳಿಂದ ರಕ್ಷಿಸಲು, ತತಕ್ಷಣದಲ್ಲಿ ಎದುರಾಗುವ ಕ್ಲಿಷ್ಟ  ಆರೋಗ್ಯ ಸಮಸ್ಯೆಗಳನ್ನು, ಅವಘಡಗಳಿಂದ ಎದುರಾಗುವ ಸಾವು ಬದುಕಿನ ಹೋರಾಟದಲ್ಲಿ ದಿನದ 24 ಗಂಟೆಗಳು ಸಿದ್ದರಿರುವ,   ಹಾಗೂ ಜನರ ಕಣ್ಣೀರನ್ನು ಒರೆಸಲು ಕಟೀಬದ್ಧರಾಗಿ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ವೈದ್ಯರ ದಿನಾಚರಣೆಯು ಜೊತೆಗೂಡಿದ್ದು ಈ ದಿನವನ್ನು ಬಹಳ ವಿಶೇಷವನ್ನಾಗಿಸಿದೆ.

 ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಮಾಹಿತಿ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಪತ್ರಿಕೆಗಳು ಬಹಳ ಮುಖ್ಯ ಪಾತ್ರವನ್ನು  ನಿರ್ವಹಿಸುತ್ತಿದೆ . ಪತ್ರಿಕಾರಂಗವು ಪವಿತ್ರವಾಗಿದೆ ಹಾಗೆಯೇ ಅಂತಹ ಸಂಸ್ಥೆಯ ಪವಿತ್ರವಾದ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ.










ಪತ್ರಿಕೆಗಳು ನೀಡುವ ಸುದ್ದಿಗಳು ಸಮಾಜದಲ್ಲಿ ಆಧಾರಸ್ಥಂಬವಾಗಿವೆ.  ಸಮಾಜದಲ್ಲಿರುವ ಸಮಸ್ಯೆಗಳ ಬಗ್ಗೆ, ಅವುಗಳ ಪರಿಹಾರದ ವಿಚಾರವಾಗಿ ಸರ್ಕಾರದ ಗಮನಕ್ಕೆ ತರುವುದಷ್ಟೇ ಅಲ್ಲದೆ, ಆಡಳಿತಾರೂಢ ಸರಕಾರಕ್ಕೆ

ಮನವರಿಕೆ ಮಾಡಿಕೊಡಲು, ಹಾಗೂ ಪರಿಹಾರ ಕಾರ್ಯಗಳು ಅನುಷ್ಠಾನಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕಿ ಪ್ರಭಾವ ಬೀರಲು ಪತ್ರಿಕೆಗಳು ನಿರ್ವಹಿಸುತ್ತಿರುವ ಪಾತ್ರ ಮಹತ್ತರ ವಾದುದ್ದಾಗಿದೆ. ಪ್ರಜಾಪ್ರಭುತ್ವ ಸಧೃಢವಾಗಿ ಬೆಳೆಯಲು ಉಳಿಯಲು  ಪತ್ರಿಕೆಗಳು ಸಹಕಾರಿಯಾಗಿದೆ. ನಿಷ್ಠಾವಂತ ಪತ್ರಕರ್ತನು ಸಮಾಜದ ಬದಲಾವಣೆಗೆ ಕಿಚ್ಚು ಹಚ್ಚುವ ಶಕ್ತಿ ಹೊಂದಿರುತ್ತಾನೆ.

ಕನ್ನಡದ ಮೊಟ್ಟ ಮೊದಲ ಪತ್ರಿಕೆ  “ಮಂಗಳೂರು ಸಮಾಚಾರ". ಭಾರತದ ಸಂಸ್ಕೃತಿ, ಸಂಪ್ರದಾಯ ಕಾಪಾಡುವಲ್ಲಿ ಪತ್ರಿಕೆಗಳು ಕೊಡುಗೆ ಅಪಾರ. ಅದು ಇನ್ನೂ ಮುಂದುವರೆಯಬೇಕಿದೆ. ಧ್ವನಿ ಇಲ್ಲದ ಜನರ ಉದ್ಗೋಷವಾಗಿ  ಪತ್ರಿಕೆಗಳು ಪ್ರತೀದ್ವನಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತರಾದ ವೆಂಕಟ್ ನಾರಾಯಣ್, ಸಚಿವ ಶ್ರೀಧರ್, ವಾರ್ತಾಜಾಲ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಕೆ.ಪ್ರಸನ್ನ, ಕಲಾವಿದರಾದ ಮೈಸೂರು ರಮಾನಂದ್‌,  ಮುಂತಾದವರು ಉಪಸ್ಥಿತರಿದ್ದರು. ಪತ್ರಿಕಾ ದಿನಾಚರಣೆಯ ಅಂಗವಾಗಿ  ಪತ್ರಿಕೆಗಳ ಪುಟ ವಿನ್ಯಾಸಕಾರ ರಾಜ ಬುಗರಿಬೆಟ್ಟು, ವಿ.ರವೀಂದ್ರನಾಥ್, ವಿಶ್ವ ಪತ್ರಿಕೆಗಳ ಸಂಗ್ರಹಕಾರ ಕೆ.ಎನ್‌. ಕಲ್ಯಾಣ್ ಕುಮಾರ್, ಚಿಂತಾಮಣಿ ಪತ್ರಿಕಾ ಲೋಕದ ಆಂಚೆ ನಿಗಮದ ಪ್ರಮುಖ ರೂವಾರಿ ಕೆ.ದಕ್ಷಿಣಾಮೂರ್ತಿ, ಕೋಲಾರದ ನಂದಕುಮಾರ್ ಜಿ., ಹಿರಿಯ ಪತ್ರಿಕಾ ವಿತರಕರಾದ ಆಶೋಕ್ ಎಂ., ಕೃಷ್ಣಪ್ಪ ಎಂ., ಬೆಂಗಳೂರು ಹಿರಿಯ ಪತ್ರಿಕಾ ವಿತರಕ ಮಂಜುನಾಥ್ ಎಂ. ಅವರುಗಳನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ದಿನಪತ್ರಿಕೆಗಳು ಮತ್ತು ಸಣ್ಣ ಪತ್ರಿಕೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. 

ಕಲಾವಿದ ಮೈಸೂರು ರಮಾನಂದ್ ತಂಡದಿಂದ ಪ್ರದರ್ಶಿಸಲಾದ  "ಹ್ಯಾಗ್ ಸತ್ತ" ನಾಟಕವು ಪ್ರೇಕ್ಷಕರಿಂದ ಬಹಳ ಮನ್ನಣೆಯನ್ನು ಪಡೆಯಿತು.

ವರದಿ : ಕೆ. ಸುಕುಮಾರ್ ರಾಜು

Post a Comment

0Comments

Post a Comment (0)