ಶಾಲಾ ಮಕ್ಕಳಿಗೆ ಬ್ಯಾಗ್ ನ ಹೊರೆ ಕಡಿಮೆ ಮಾಡುವಲ್ಲಿ ಕ್ರಮದ ಬಗ್ಗೆ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮೆಚ್ಚುಗೆ

varthajala
0

ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಬ್ಯಾಗ್‌ ಹೊರೆ ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ತೀರಾ ಅವಶ್ಯಕವಾಗಿರುವ ಕ್ರಮವಾಗಿದೆ. ವಿಶೇಷವಾಗಿ ಕೆಲ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಜ್ಞಾನಾರ್ಜನೆಯ ನೆಪದಲ್ಲಿ ನೀಡಲಾಗುವ ಈ ಕಿರುಕುಳದ ಕಾರಣ ಇಡೀ ಪೀಳಿಗೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಿದೆ.

ಇದರ ಜೊತೆ ತಿಂಗಳಿಗೆ ಕನಿಷ್ಟ ಒಂದು ಶನಿವಾರವಾದರೂ ಮಕ್ಕಳಿಗೆ ಬ್ಯಾಗ್ ರಹಿತ ದಿನವನ್ನಾಗಿಸಬೇಕೆಂಬುದು ಬಹಳ ದಿನದ, ಬಹಳ ಶಿಕ್ಷಣ ತಜ್ಞರ ಚಿಂತನೆ, 2019 ರಲ್ಲಿ ಈ ಕುರಿತಂತೆ ನಾನು ವಿಶೇಷ ಕಾಳಜಿವಹಿಸಿ ಶನಿವಾರದಂದು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ಕ್ರಮವಹಿಸಿದ್ದೆ. ಈ ದಿನವನ್ನು "ಸಂಭ್ರಮದ ಶನಿವಾರ‍ ಎಂದು ಕರೆಯಬೇಕೆಂಬುದೂ ತೀರ್ಮಾನಿಸಲಾಗಿತ್ತು. ಸಂಭ್ರಮದ ಶನಿವಾರದ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ನಾವು ರೂಪಿಸಿದಾಗ ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ನಿಜಕ್ಕೂ ಸಂಭ್ರಮ ಮನೆ ಮಾಡಿತ್ತು. ಮಸ್ತಕದ ಬ್ಯಾಗನ್ನು ಮನೆಯಲ್ಲಿಯೇ ಬಿಟ್ಟು ತಿಂಗಳಿಗೆ ಒಂದು ಶನಿವಾರ ಆಗಮಿಸುತ್ತಿದ್ದ ಆ ಚಿಣ್ಣರ ಸಂಭ್ರಮವನ್ನು ನೋಡಿ ನಾವೆಲ್ಲರೂ ಕಣ್ಣುಂಬಿಸಿಕೊಂಡಿದ್ದೆವು. 

ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರು ತಮ್ಮೆಲ್ಲ ಸೃಜನಶೀಲತೆಯನ್ನು ಪ್ರಯೋಗಕ್ಕೆ ಒಡ್ಡಿಕೊಂಡು ಮಕ್ಕಳ ಮನಗೆಲ್ಲಲು ಮುಂದಾಗಿದ್ದರು. ಹಾಡು-ಆಟ-ಕಥೆ-ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ನಮ್ಮ ಆ ಸಂಭ್ರಮದ ಶನಿವಾರದ ಮುಖ್ಯ ಉದ್ದೇಶವಾಗಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿನೂತನ ಉಪಕ್ರಮಗಳನ್ನು ಎಲ್ಲರೂ ಅಳವಡಿಸಿಕೊಳ್ಳಲು ವೇದಿಕೆಯೊಂದನ್ನು ರೂಪಿಸಿ, ಒಂದು ವೈವಿಧ್ಯಮಯ ವಾತಾವರಣವನ್ನು ಕಲ್ಪಿಸಲು ಶ್ರದ್ಧೆ ವಹಿಸಿದ್ದವು. ಆದರೆ, ಆ ನಂತರ ನಮ್ಮ ಮೇಲೆ ಎರಗಿದ ಕೋವಿಡ್ ಕಾಲಘಟ್ಟದ ಸವಾಲುಗಳು ನಮ್ಮ ಈ ಪರ್ಯಾಯ ಕ್ರಮಗಳಿಗೆ ವಿರಾಮ ಹಾಡಿದವು ಎನ್ನುವುದು ಬೇರೆಯೇ ವಿಷಯ.

ವಿದ್ಯಾರ್ಥಿಗಳಿಗೆ ಪಠ್ಯಮಸ್ತಕ ಮಾತ್ರವೇ ಕಲಿಕೆಯ ಮೂಲವಾಗಬಾರದು. ಸುತ್ತಲಿನ ಪರಿಸರ, ಪೂರಕವಾದ ಚಟುವಟಿಕೆಗಳು ಮಕ್ಕಳಿಗೆ ಇನ್ನಷ್ಟು ಆಪ್ತವಾಗಿ ಕಲಿಸುವ ಆಕರ್ಷಣೆ ಹೊಂದಿವೆ. ಆದ್ದರಿಂದ, ಸಂಭ್ರಮದ ಶನಿವಾರದಂತಹ ಮಹತ್ವದ ಕಾರ್ಯಕ್ರಮಗಳ ಬಗ್ಗೆ ತಾವು ಗಮನಹರಿಸಿ ವೇಗ ಕಲ್ಪಿಸಿದಲ್ಲಿ. ಮಕ್ಕಳಿಗೆ ಕಲಿಕೆಯೂ ಸಹನೀಯವಾಗುತ್ತದೆ. ದೇಶದ ಭವಿಷ್ಯಕ್ಕೂ ಒಳಿತಾಗುತ್ತದೆ ಎಂದು ಮಾಜಿ ಶಿಕ್ಷಣ ಸಚಿವ, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮನವಿ ಪತ್ರ ನೀಡಿದ್ದಾರೆ.

Post a Comment

0Comments

Post a Comment (0)