ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ, ಶಿಡ್ಲಘಟ್ಟ : ಗ್ರಾಮೀಣ ಭಾಗದ ಮಕ್ಕಳು ನಗರಪ್ರದೇಶದಲ್ಲಿ ಕಲಿತ ಮಕ್ಕಳಿಗೆ ಸರಿಸಮಾನವಾಗಿ ಎದುರಿಸಬೇಕಾದರೆ ಮಕ್ಕಳಲ್ಲಿ ಕಲಿಕೆತಯ ಜೊತೆಗೆ ಶಿಸ್ತನ್ನು ಬೆಳೆಸಿಕೊಂಡು ಆತ್ಮವಿಶ್ವಾಸವನ್ನು ಹೊಂದಿರಬೇಕು ಎಂದು ಅಬ್ಲೂಡು ಗ್ರಾಮಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಬೈರೇಗೌಡ ಹೇಳಿದರು.
ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,ಮಕ್ಕಳಲ್ಲಿ ಸಮಯಪ್ರಜ್ಞೆ, ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆ ಮತ್ತು ನಿಷ್ಟೆಯಿಂದ ಕಲಿಯಬೇಕು ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಗಲು ಸಾಧ್ಯವಿದೆ. ಮಕ್ಕಳಲ್ಲಿ ಅಧ್ಯಯನಾಸಕ್ತಿ ಕ್ಷೀಣೀಸುತ್ತಿದೆ. ಪಠ್ಯದ ಜೊತೆಗೆ ಉತ್ತಮ ಮೌಲ್ಯ ಬೆಳೆಸಬಲ್ಲ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿಸಿಕೊಂಡು ಮಕ್ಕಳು ಗುರು ಹಿರಿಯರಿಗೆ ಗೌರವ ತೋರುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ನಮ್ಮ ಶಾಲೆಯು ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ100 ಫಲಿತಾಂಶ ಪಡೆದಿದ್ದು, ಗ್ರಾಮೀಣಭಾಗದ ಮಕ್ಕಳ ಶಿಕ್ಷಣಕ್ಕೆ ಕೌಟಿಲ್ಯ, ಚಾಣಕ್ಯ, ಆರ್ಯಭಟ, ಭಾಸ್ಕರನಂತಹ ದಾರ್ಶನಿಕರಿಗೆ ನಮ್ಮ ಭಾರತೀಯ ಗುರುಕುಲ ಪದ್ದತಿಯ ಆಶ್ರಯವಿತ್ತು. ಗುರುಕುಲ ಪದ್ಧತಿಯಲ್ಲಿ ಬದುಕಿನ ಶಿಕ್ಷಣದೊಂದಿಗೆ ಪ್ರಚಂಡ ಪಾಂಡಿತ್ಯವನ್ನು ಗಳಿಸಬಲ್ಲ ಅವಕಾಶಗಳಿದ್ದವು. ಅತ್ಯುತ್ತಮ ಶಿಕ್ಷಣಕ್ಕಾಗಿ ಭಾರತವು ಹಿರಿಮೆಯನ್ನು ಉಳಿಸಿಕೊಂಡಿದೆ ಎಂದರು.
ಶಿಕ್ಷಕ ಎಂ.ಪಿ.ಜೀವಂದರ್‌ಕುಮಾರ್ ಮಾತನಾಡಿ ಮನೆಯ ಕೆಲಸ ಮಾಡಿಕೊಂಡು ಸಿಕ್ಕ ಸಮಯದಲ್ಲಿ ಓದಿ ಮನನ ಮಾಡಿಕೊಳ್ಳುವುದರ ಜೊತೆಗೆ ಅಂದಿನ ಪಾಠವನ್ನು ಅಂದೇ ಅರ್ಥೈಸಿಕೊಳ್ಳುವ ಬಗ್ಗೆ ಒಲವು ಮೂಡಬೇಕು. ಪೋಷಕರು ಮಕ್ಕಳ ಕಲಿಕಾಸಾಧನೆಗೆ ಬೆನ್ನುಲುಬಾಗಿ ನಿಲ್ಲಬೇಕು. ಅಗತ್ಯ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದರು.
ಕಳೆದ ಮಾರ್ಚಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪುರಸ್ಕರಿಸಲಾಯಿತು.
ಸಂದರ್ಭದಲ್ಲಿ ಶಿಕ್ಷಕ ಬಿ.ಎಂ.ರಾಧಾಕೃಷ್ಣ, ಶಿಕ್ಷಕಿ ಯಶೋಧ, ಸಿ.ಕೆ.ಮಂಜುಳಾ, ಪವಿತ್ರಬಡಿಗೇರ, ಶೈಲಜಾ, ಗಾಯಿತ್ರಿ, ಮೆಹಬೂಬ್‌ಪಾಶಾ, ವಿದ್ಯಾರ್ಥಿ ಪೋಷಕರು ಪಾಲ್ಗೊಂಡಿದ್ದರು.