ಬೆಂಗಳೂರು : ಕಂಠೀರವ ನರಸಿಂಹರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯನ್ನು ಸ್ಥಾಪಿಸಿದ್ದವರು. ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಸಂಘವನ್ನು ಸ್ಥಾಪಿಸಿದ್ದವರು, ಕನ್ನಡ ಸಾಹಿತ್ಯ ಪರಿಷತ್ತಿಗೆ ಸತತ ೧೬ ವರ್ಷಗಳ ಕಾಲ ಅಧ್ಯಕ್ಷರಾಗಿ ನಿರಂತರ ಕನ್ನಡ ಸೇವೆ ಮಾಡಿದ ಮಹಾನ್ ಚೇತನವಾಗಿದ್ದರು. ಕನ್ನಡದ ಧೀಮಂತ ಸಾಹಿತಿ ಡಿವಿಜಿ ಅವರನ್ನು ಪರಿಷತ್ತಿಗೆ ಕರೆದುಕೊಂಡು ಬಂದು ಉಪಾಧ್ಯಕ್ಷರನ್ನಾಗಿ ಮಾಡಿ ಪರಿಷತ್ತು ಬೆಳೆಯವುದಕ್ಕೆ ಮೂಲ ಕಾರಣರಾದವರು ಎಂದು ನಾಡೋಜ ಡಾ. ಮಹೇಶ ಜೋಶಿ ಬಣ್ಣಿಸಿದರು.
ಕಂಠೀರವ ನರಸಿಂಹರಾಜ ಒಡೆಯರ್ ಅವರ ೧೩೫ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಗಂಣದಲ್ಲಿ ಹಮ್ಮಿಕೊಂಡ ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಂಠೀರವ ನರಸಿಂಹರಾಜ ಒಡೆಯರಿಗೆ ಸಂಸ್ಥಾನದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿತ್ತು. ಇವರು ಸಂಸ್ಥಾನದ ಸ್ಕೌಟ್ ಚಳವಳಿಯ ಮುಖ್ಯರಾಗಿದ್ದುದಲ್ಲದೆ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಿದ್ದರು. ಗರ್ಭೀಣಿ ಮತ್ತು ಶಿಶು ಸಂರಕ್ಷಣ ಕಾರ್ಯದಲ್ಲಿ ವಿಶೇಷ ಆಸ್ಥೆ ವಹಿಸಿದ್ದು, ಅದಕ್ಕಾಗಿ ಅನೇಕ ಚಿಕಿತ್ಸಾಲಯಗಳ ಸ್ಥಾಪನೆಗೆ ಕಾರಣರಾದರು. ವಿಶೇಷ ಚೇತನರ ಶಿಕ್ಷಣಕ್ಕೆ ಅವರು ವಿಶೇಷ ಪ್ರೋತ್ಸಾಹ ನೀಡಿದ್ದರು. ದೀನದಲಿತರಲ್ಲಿ ಇವರು ತೋರಿಸುತ್ತಿದ್ದ ಕಾಳಜಿ ಇಂದಿನ ಕಾಲಮಾನದಲ್ಲಿ ನಮ್ಮೆಲ್ಲರಿಗೂ ಮಾರ್ಗದಶನ. ಮೈಸೂರು ಸಂಸ್ಥಾನದಲ್ಲಿ ಹಲವು ಕಡೆಗಳಲ್ಲಿ ಸ್ಥಾಪಿತವಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಇವರ ಹೆಸರನ್ನಿಡಲಾಗಿದ್ದು. ಸಂಗೀತ ಮತ್ತು ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ-ಅಧ್ಯಕ್ಷರೂ ಆಗಿದ್ದರು. ಬೆಂಗೂರಿನಲ್ಲಿರುವ ಮಿಥಿಕ್ ಸೊಸೈಟಿಯ ಮುಖ್ಯ ಉಪಪೋಷಕರೂ ಮೈಸೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಾಗಿದ್ದರು. ಕಂಠೀರವ ನರಸಿಂಹರಾಜ ನಾಮಾಂಕಿತ ಕಟ್ಟಡಗಳೂ ರಸ್ತೆಗಳೂ ಬಡಾವಣೆಗಳೂ ಗ್ರಾಮಗಳೂ ಹಳೆಯ ಮೈಸೂರು ಭಾಗದಲ್ಲಿ ಸಾಕಷ್ಟು ಕಡೆಗಳಲ್ಲಿ ಇದೆ. ಬೆಂಗಳೂರಿನಲ್ಲಿ ನರಸಿಂಹ ರಾಜ ಕಾಲೋನಿ ಮತ್ತು ಕಂಠೀರವ ಸ್ಟೇಡಿಯಂ ಮತ್ತು ಸ್ಟುಡಿಯೋಗಳು ಇವರ ಹೆಸರಿನಲ್ಲಿ ಸ್ಥಾಪನೆಯಾಗಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ನೆನಪಿಸಿಕೊಂಡರು.
ಕಂಠೀರವ ನರಸಿಂಹ ರಾಜ ಒಡೆಯರ್ ಅವರ ಕೊಡುಗೆಗಳ ಕುರತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನೇಕ ಪ್ರಮುಖ ಬರಹಗಾರರು ಅದರಲ್ಲಿಯೂ ಡಿ.ವಿ.ಜಿಯವರು ಬರಲು ಕಂಠೀರವ ನರಸಿಂಹ ರಾಜ ಒಡೆಯರ್ ಅವರು ಕಾರಣಕರ್ತರು. ಕರ್ನಾಟಕದ ಬೇರೆ ಬೇರೆ ಭಾಗದಲ್ಲಿದ್ದ ಕನ್ನಡ ಸಂಘಗಳ ನಾಲ್ಕು ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಏರ್ಪಡಿಸಿ ಸಾಹಿತಿಗಳು ಒಂದಾಗಲು ಅವರು ಕಾರಣಕರ್ತರಾಗಿದ್ದರು. ಟಿ.ಪಿ.ಕೈಲಾಸಂ ಅವರು ಮೃಚ್ಛಕಟಿಕ ಮೂಕಿ ಚಿತ್ರ ನಿರ್ಮಿಸಲು, ಕೆ.ಅಶ್ವತ್ಥಮ್ಮನವರು ಗಾಯಕಿಯಾಗಿ ಬೆಳೆಯಲು, ಪಿಟೀಲ್ ಚೌಡಯ್ಯ, ಬಿಡಾರಂ ಕೃಷ್ಣಪ್ಪ, ವೀಣೆ ಶೇಷಣ್ಣ ಮೊದಲಾದವರು ಸಂಗೀತ ಕ್ಷೇತ್ರದಲ್ಲಿ ಬೆಳಗಲು ಅವರು ಕಾರಣ ಕರ್ತರಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು ಗೌರವ ಕೋಶಾಧ್ಯಕ್ಷರಾದ ಡಾ. ಬಿ. ಎಮ್. ಪಟೇಲ್ ಪಾಂಡು, ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಹಾಜರಿದ್ದರು.