(ರಾಜದರ್ಬಾರಕ್ಕೆ ಯಥಾ ಪ್ರಕಾರ ಚಕ್ರವರ್ತಿಗಳ ಆಗಮನ. ಜೊತೆಗೆ ಬೋಪರಾಕುಗಳ ಗಾಯನ)
ರಾಜಾಧಿರಾಜ ರಾಜಮಾರ್ತಾಂಡ ರಾಜದಂಡಾಧೀಶ್ವರ, ಭಕ್ತಾಸುರರ ಹೃದಯ ಸಿಂಹಾಸನಾಧಿಶ್ವರ, ಸಿರಿವಂತರ ರಕ್ಷಕ, ವಿರೋಧಿಸಿದವರ ಪ್ರಾಣ ಭಕ್ಷಕ, ಬೋಪರಾಕ್ ಬೋಪರಾಕ್..
ಚಕ್ರವರ್ತಿ : ಏನು ಅಮಾತ್ಯರೇ.. ನಮ್ಮ ಸಾಮ್ರಾಜ್ಯದಲ್ಲಿ ಎಲ್ಲವೂ ಕುಶಲವೇ?
ಅಮಾತ್ಯ ಶಾ : ನಿಮ್ಮ ಕೃಪಾಕಟಾಕ್ಷದಿಂದ ಎಲ್ಲವೂ ಸಮೃದ್ಧವಾಗಿದೆ ಪ್ರಭು.. ಆದರೆ.. ಶ್ರೀಮಂತರು ತುಂಬಾ ಬೇಸರದಲ್ಲಿದ್ದಾರೆ.
ಚಕ್ರವರ್ತಿ : ಯಾಕೆ, ನಮ್ಮ ಸಿಂಹಾಸನವನ್ನು ಸಲಹುವ ಸಿರಿವಂತರಿಗೆ ಬೇಸರ ತಂದವರಾರು. ಕೂಡಲೇ ಅಂತವರನ್ನು ಬಂಧಿಸಿ.
ಅಮಾತ್ಯ : ಅದು ಹಾಗಲ್ಲ ಮಹಾಪ್ರಭು. ಶ್ರೀಮಂತರು ನಮ್ಮ ಸಾಮ್ರಾಜ್ಯಕ್ಕೆ ಅತೀ ಹೆಚ್ಚು ಸುಂಕ ಕಟ್ಟುತ್ತಾರೆ. ಆದರೆ ಇಂತವರ ತೆರಿಗೆ ಬಳಸಿಕೊಳ್ಳುವ ಕೆಲವು ಸಾಮಂತ ರಾಜರು ಬಡವರಿಗೆ ಉಚಿತ ಕೊಡುಗೆಗಳನ್ನು ಹಂಚುತ್ತಿದ್ದಾರೆ. ಅದಕ್ಕೆ ಈ ಸುಂಕ ಕಟ್ಟುವ ಉಳ್ಳವರು ಬೇಸರಗೊಂಡಿದ್ದಾರೆ.
ಚಕ್ರವರ್ತಿ : ಓ ಹಾಗೋ. ಈ ರೀತಿಯ ಉಚಿತ ಕೊಡುಗೆಗಳಿಂದ ದೇಶ ದಿವಾಳಿಯಾಗುತ್ತದೆ, ಅವುಗಳನ್ನು ತಕ್ಷಣ ನಿಲ್ಲಿಸಬೇಕೆಂದು ರಾಜಾಜ್ಞೆ ಹೊರಡಿಸಿ.
ಅಮಾತ್ಯ : ಹಾಗೇ ಮಾಡಬಹುದಾಗಿತ್ತು. ಆದರೆ ಇದರಿಂದ ಬಡಜನರು ಸಾಮ್ರಾಟರ ವಿರುದ್ದವೇ ದಂಗೆ ಏಳುವ ಸಾಧ್ಯತೆಗಳಿವೆ. ಇದರಿಂದ ಅರಾಜಕತೆ ಹೆಚ್ಚಾಗುತ್ತದೆ.
ವಿದೂಷಕ : ದಂಗೆ ಎದ್ದರೆ ಬಗ್ಗು ಬಡಿದರಾಯ್ತು, ಶ್ರೀಮಂತರ ಹಿತಾಸಕ್ತಿ ಕಾಪಾಡುವುದು ಮಾರಾಜರಿಗೆ ಮುಖ್ಯ ಅಲ್ಲವೇ ಅಮಾತ್ಯರೆ ?
ಚಕ್ರವರ್ತಿ : ಸ್ವಲ್ಪ ಸುಮ್ಮನಿರು ವಿದೂಷಕ. ಅಮಾತ್ಯರೆ ಈ ಬಡವರಿದ್ದರೆ ತಾನೇ ಈ ದಂಗೆ ಆ ಅರಾಜಕತೆಗಳೆಲ್ಲಾ. ಇವರನ್ನೇ ಸಾಮೂಹಿಕವಾಗಿ ಸಂಹಾರ ಮಾಡಿದರೆ ಹೇಗೆ?
ವಿದೂಷಕ : ಹೇಗೆ ಅಂದ್ರೆ. ಬಡವರು ಇಲ್ಲದೇ ಹೋದರೆ ಈ ಶ್ರೀಮಂತರ ಚಾಕರಿ ಮಾಡೋರು ಯಾರು?
ಚಕ್ರವರ್ತಿ : ಬೇರೆ ದೇಶದಿಂದ ಗುಲಾಮರನ್ನು ಕರೆತಂದು ಚಾಕರಿ ಮಾಡಿಸಿದರಾಯ್ತು. ನಮ್ಮ ಸಿಂಹಾಸನ ನಿಂತಿರುವುದು ಬಿಕಾರಿಗಳಾದ ಬಡಜನರಿಂದಲ್ಲ. ಅವರೆಲ್ಲಾ ನಮ್ಮ ಭವ್ಯ ಸಾಮ್ರಾಜ್ಯಕ್ಕೆ ದೊಡ್ಡ ಕಳಂಕ. ಅವರನ್ನೆಲ್ಲಾ ಗಡಿಪಾರು ಮಾಡಬೇಕು.
ಅಮಾತ್ಯ : ಮಾಡಬಹುದು, ಆದರೆ ಗಡಿಪಾರಾದವರೆಲ್ಲಾ ಹೊರಗಿನ ಶತ್ರುಗಳ ಜೊತೆ ಸೇರಿ ದಂಗೆ ಎಬ್ಬಿಸಬಹುದು ಪ್ರಭು.
ಚಕ್ರವರ್ತಿ : ಮತ್ತೇನು ಮಾಡಬೇಕು ಹೇಳಿ ಅಮಾತ್ಯರೆ. ಉಳ್ಳವರ ಹಿತ ಕಾಯುವುದು ಸಾಮ್ರಾಟನಾದ ನನ್ನ ಕರ್ತವ್ಯ. ಈ ಬಡಜನರಿಂದ ನನ್ಬ ಸಾಮ್ರಾಜ್ಯಕ್ಕೆ ಬಿಡುಗಡೆ ಯಾವಾಗ.
ವಿದೂಷಕ : ಬಡವರನ್ನೆಲ್ಲಾ ಶ್ರೀಮಂತರನ್ನಾಗಿಸಿದರೆ ಆಯ್ತು, ಆಗ ಯಾರೂ ಬಡವರೇ ಇರುವುದಿಲ್ಲ, ಅಲ್ಲವೇ.?
ಚಕ್ರವರ್ತಿ : ಸುಮ್ಮನಿರು ಅವಿವೇಕಿ. ನೀವು ಹೇಳಿ ಅಮಾತ್ಯರೆ ಈ ಬಡವರ ಸಂಹಾರಕ್ಕೆ ಏನಾದರೂ ಉಪಾಯ ಇದೆಯಾ?
ಅಮಾತ್ಯ : ಇದೆ, ಬಡವರಿಂದ ಬಿಡುಗಡೆಗೆ ದಾರಿ ಖಂಡಿತ ಇದೆ ರಾಜನ್. ಈ ದೇಶದ ಎಲ್ಲಾ ಬಡವರಿಗೂ ಉಚಿತವಾಗಿ ಏಕಕಾಲದಲ್ಲಿ ನಮ್ಮ ಗೋದಾಮಿನಲ್ಲಿರುವ ಧಾನ್ಯಗಳನ್ನು ಉಚಿತವಾಗಿ ಹಂಚಿ ಬಿಡೋಣ.
ವಿದೂಷಕ : ಇದಪ್ಪಾ ನಿಜವಾದ ಕಾಳಜಿ ಅಂದ್ರೆ. ನಿಮ್ಮ ಉಪಾಯ ಚೆನ್ನಾಗಿದೆ ನೀವು ಮುಂದುವರೆಸಿ ಅಮಾತ್ಯರೆ..
ಚಕ್ರವರ್ತಿ : ಇದರಿಂದ ಬಡವರ ನಿವಾರಣೆ ಹೇಗೆ ಸಾಧ್ಯ?
ಅಮಾತ್ಯ : ಇದೆ, ನಿವಾರಣೆ ಸಾಧ್ಯ ಇದ್ದೇ ಇದೆ ಪ್ರಭು. ನಾವು ಹಂಚುವ ಧಾನ್ಯಗಳಲ್ಲಿ ಮೊದಲೇ ವಿಷ ಬೆರಸಿಬಿಡೋಣ. ಆ ಧಾನ್ಯಗಳ ತಿಂದ ಬಡವರೆಲ್ಲಾ ತಕ್ಷಣ ನರಳಿ ಭೂಮಿಗುರುಳಿ ಸಾಯುತ್ತಾರೆ.
ವಿದೂಷಕ : ಶಹಬ್ಬಾಸ್, ಎಂತಾ ಅಪಾಯಕಾರಿ ಉಪಾಯವಿದು. ಧಾನ್ಯ ತಿಂದವರೆಲ್ಲಾ ಇಲಿಗಳಂತೆ ಒದ್ದಾಡಿ ಕ್ರಿಮಿಕೀಟಗಳಂತೆ ನರಳಾಡಿ ಸಾಯುತ್ತಾರೆ. ಅವರ ಹೆಣಗಳ ಮೇಲೆ ನಿಮ್ಮ ಸಿರಿವಂತರ ಸಾಮ್ರಾಜ್ಯ ಮೆರೆಯುತ್ತದೆ ಅಲ್ಲವಾ?
ಚಕ್ರವರ್ತಿ : ಅದ್ಬುತ, ಅತೀ ಅದ್ಬುತ ಉಪಾಯವಿದು. ಈ ಕೂಡಲೇ ದೇಶಾದ್ಯಂತ ಡಂಗೂರ ಸಾರಿಸಿ, ತೆರಿಗೆ ಕಟ್ಟದೇ ಇರುವ ಬಡವರಿಗೆ ಮಾತ್ರ ಖಡ್ಡಾಯವಾಗಿ ಉಚಿತ ಧಾನ್ಯಗಳ ವಿತರಣೆ ಎಂದು ಸಾರಿಸಿ.
ಅಮಾತ್ಯ : ಯಾರಲ್ಲಿ. ಈ ಕೂಡಲೇ ನಮ್ಮ ಸಾಮ್ರಾಜ್ಯದಾದ್ಯಂತ ಸಾಮ್ರಾಟರ ಸಂದೇಶ ಬಿತ್ತರಗೊಳ್ಳಲಿ. ಯಾರಿಲ್ಲಿ, ಬರುವ ಹುಣ್ಣಿಮೆಯ ದಿನ ಏಕಕಾಲಕ್ಕೆ ಧಾನ್ಯ ವಿತರಣೆ ಆರಂಭಗೊಂಡು ಬಡವರ ಜೊತೆಗೆ ಬಡತನವೂ ಸರ್ವನಾಶವಾಗಲಿ.
( ಹುಣ್ಣಿಮೆಯ ಮಾರನೆಯ ದಿನದಂದು ಮಹಾರಾಜರ ದರ್ಭಾರಿನಲಿ )
ಚರ್ಕವರ್ತಿ : ಅದೇನು ಅರ್ತನಾದ ಅಮಾತ್ಯರೇ, ಬಡಜನರ ಸಂಹಾರ ಸಾಂಗವಾಗಿ ಸಾಗಿದೆಯಲ್ಲವೇ.
ಅಮಾತ್ಯ : ಎಲ್ಲಾ ಅನುಹುತವಾಯಿತು ಪ್ರಭು. ಅಕ್ರಮವಾಗಿ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ ಉಳ್ಳವರು ತಮ್ಮ ಪ್ರಭಾವ ಬಳಸಿ ಉಚಿತ ಧಾನ್ಯಗಳ ಪಡೆಯಲು ಸರದಿ ಸಾಲಲ್ಲಿ ಮೊದಲು ನಿಂತಿದ್ದರು. ಇನ್ನು ಕೆಲವು ಕಾಳಸಂತೆಕೋರರು ಬಡವರಿಗೆ ಕೊಟ್ಟ ಧಾನ್ಯಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಅನುಕೂಲಸ್ತರಿಗೆ ಮಾರಿ ಲಾಭ ಮಾಡಿಕೊಂಡರು.
ವಿದೂಷಕ : ಏನೋ ಮಾಡಲು ಹೋಗಿ ಏನು ಮಾಡಿದೆ ನೀನು.
ಚಕ್ರವರ್ತಿ : ಶ್, ತೆಪ್ಪಗಿರು ವಿದೂಷಕ. ಮುಂದೇನಾಯ್ತು ಹೇಳಿ ಅಮಾತ್ಯರೆ.
ಅಮಾತ್ಯ : ಮುಂದೇನಾಗಬಾರದಿತ್ತೋ ಅದೇ ಆಯ್ತು ಪ್ರಭು. ಅಕ್ರಮವಾಗಿ ಉಚಿತ ಧಾನ್ಯವನ್ನು ಪಡೆದವರು ಹಾಗೂ ಕಡಿಮೆ ಬೆಲೆಗೆ ಕಾಳಸಂತೆಯಲ್ಲಿ ಕೊಂಡು ತಿಂದವರು ಕ್ಷಣಮಾತ್ರದಲ್ಲಿ ನರಳಾಡಿ ನರಕವಾಸಿಗಳಾದರು ದೊರೆ, ಕೇಳಲಾಗದು ಸಾಯುವವರ ಗೋಳಾಟದ ಮೊರೆ.
ಚಕ್ರವರ್ತಿ : ಛೇ, ಎಂತಹ ಅನಾಹುತ ಆಯಿತು. ನಾವಿದನ್ನು ನಿರೀಕ್ಷಿಸಿಯೇ ಇರಲಿಲ್ಲ. ಈ ಅನುಕೂಲಸ್ತರು ಇಷ್ಟೊಂದು ದುರಾಸೆಯ ಜನರೇ, ಗೊತ್ತೇ ಆಗಲಿಲ್ಲ. ಇವರೇ ಅಲ್ಲವೇ ನಾವು ಕಟ್ಟಿದ ಸುಂಕದ ಧನದಿಂದ ತೆರಿಗೆ ಕಟ್ಟದ ಜನರಿಂದ ಉಚಿತ ಧಾನ್ಯ ವಿತರಣೆ ಮಾಡಬಾರದು ಎಂದು ದೇಶಾದ್ಯಂತ ಹುಯಿಲೆಬ್ಬಿಸಿದವರು.
ವಿದೂಷಕ : ಪುಕ್ಕಟೆ ಸಿಕ್ಕರೆ ನನಗೂ ಇರಲಿ, ಸತ್ತ ನಮ್ಮಪ್ಪನಿಗೂ ಸಿಗಲಿ ಎನ್ನುವ ದುರಾಸೆಯ ಜನ ಎಲ್ಲಾ ಕಾಲಕ್ಕೂ ಇದ್ದೇ ಇರುತ್ತಾರೆ ಅಲ್ಲವೆ ಅಮಾತ್ಯರೆ.
ಅಮಾತ್ಯ : ಹೌದು ಮಹಾಪ್ರಭು, ದುರಾಸೆ ಎನ್ನುವುದು ಇಲ್ಲದವರಿಗಿಂತಾ ಉಳ್ಳವರಿಗೆ ಹೆಚ್ಚು ಎನ್ನುವುದು ನಮಗೆ ಈಗ ಮನದಟ್ಟಾಯಿತು. ಅಂತವರು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬುದೂ ನಮಗರಿವಾಯಿತು.
ಚಕ್ರವರ್ತಿ : ಆಗಿದ್ದು ಆಗಿ ಹೋಯಿತು. ದುರಾಸೆಯ ಜನರಿಗೆ ಸರಿಯಾದ ಶಿಕ್ಷೆಯಾಯಿತು. ಮೊದಲು ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿಕೊಟ್ಟವರನ್ನು ಎಲ್ಲಿದ್ದರೂ ಬಂಧಿಸಿ ಕಾರಾಗ್ರಹಕ್ಕೆ ಕಳಿಸಿ. ಕಾಳಸಂತೆಕೋರರನ್ನು ಹುಡುಕಿ ಹಿಡಿದು ಮರಣದಂಡನೆ ಶಿಕ್ಷೆ ಜಾರಿಗೊಳಿಸಿ. ಉಚಿತವಾಗಿ ವಿತರಿಸಿದ ವಿಷಮಿಶ್ರಿತ ಧಾನ್ಯಗಳನ್ನು ಯಾರೂ ಸೇವಿಸಬಾರದು ಎಂದು ರಾಜಾಜ್ಞೆ ಹೊರಡಿಸಿ. ಸತ್ತವರ ಆತ್ಮಕ್ಕೆ ಸಂತಾಪ ಕೋರುವ ಸಭೆ ಏರ್ಪಡಿಸಿ, ಬದುಕುಳಿದವರಿಗೆ ರಾಜಕೋಶದಿಂದ ಪರಿಹಾರ ಕೊಟ್ಟು ಬರಬಹುದಾದ ಪ್ರತಿರೋಧವನ್ನು ಶಮನಗೊಳಿಸಿ.
ವಿದೂಷಕ : ಎಲ್ಲಾ ಸರಿ ಸಾಮ್ರಾಟರೆ, ಆದರೆ ಬಡವರ ಗತಿ ಏನು? ಅವರಿಗೆ ಪರಿಹಾರ ಇಲ್ಲವೆ?
ಚಕ್ರವರ್ತಿ : ಇದೆ, ಯಾಕಿಲ್ಲ. ಉಳ್ಳವರು ಸರ್ವನಾಶವಾದರೇನಂತೆ, ಇಲ್ಲದವರಿಗೆ ಆರ್ಥಿಕ ಸಹಾಯ ಮಾಡಿ ಅವರನ್ನೆಲ್ಲಾ ಶ್ರೀಮಂತರನ್ನಾಗಿಸುವ ಯೋಜನೆಗಳನ್ನು ರೂಪಿಸೋಣ. ಆದ ಅನಾಹುತದಿಂದ ಪಾಠ ಕಲಿಯೋಣ.
ವಿದೂಷಕ : ಹೌದು ರಾಜರೇ, ನಿವಾರಿಸಿಕೊಳ್ಳಬೇಕಾದದ್ದು ಬಡತನವನ್ನೇ ಹೊರತು ಬಡವರನ್ನಲ್ಲ. ನಾಶ ಮಾಡಬೇಕಾದದ್ದು ಅಸಮಾನತೆಯನ್ನೇ ಪರಂತು ಅಮಾಯಕ ದುಡಿಯುವ ಜನರನ್ನಲ್ಲ. ಸರ್ವನಾಶವಾಗಬೇಕಾದದ್ದು ದುರಾಸೆಯೇ ಹೊರತು ಅಸಹಾಯಕತೆಯಲ್ಲ.
ಚಕ್ರವರ್ತಿ : ಹೌದು ವಿದೂಷಕ. ಮೊದಲ ಬಾರಿ ನಿನ್ನ ಮಾತನ್ನು ಒಪ್ಪುವೆ. ಅಮಾತ್ಯರೆ ಅಸಮಾನತೆಗೆ ನಿಜವಾದ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲು ಆಯೋಗವೊಂದನ್ನು ಈ ಕೂಡಲೇ ರಚಿಸಿ. ನನ್ನ ಸಾಮ್ರಾಜ್ಯದಲ್ಲಿ ತಾರತಮ್ಯವಿಲ್ಲದೇ ಎಲ್ಲರೂ ಸಮಾನರಾಗಿ ನೆಮ್ಮದಿಯಾಗಿ ಬದುಕುವಂತಾಗಲು ಏನು ಮಾಡಬೇಕೆಂಬುದನ್ನು ಸೂಚಿಸಲು ಆಯೋಗಕ್ಕೆ ತಿಳಿಸಿ.
ಅಮಾತ್ಯ : ಆಯಿತು ಪ್ರಭು. ನಿಮ್ಮ ಮಾತೇ ಶಾಸನ ನಮಗೆ.
ವಿದೂಷಕ : ಇದಕ್ಕೆಲ್ಲಾ ಆಯೋಗ ನಿಯೋಗ, ಸಮಾಲೋಚನೆ, ಚರ್ಚೆ ಅಂತೆಲ್ಲಾ ಯಾಕೆ ವ್ಯರ್ಥ ಕಾಲಹರಣ ಮಾಡುವುದು ಮಾರಾಜರೇ. ಎಲ್ಲಾ ಅಸಮಾನತೆಗೆ ಕಾರಣ ದುರಾಸೆ. ಅದನ್ನೇ ನಿವಾರಿಸಿದರೆ ಸಾಕು ತಾರತಮ್ಯ ನಿವಾರಣೆಯಾದಂತೆ.
ಚಕ್ರವರ್ತಿ : ಅದು ನಮಗೂ ಈಗ ಅರಿವಿಗೆ ಬಂತು ವಿದೂಷಕ. ಆದರೆ ದುರಾಸೆಯನ್ನು ನಿರ್ಮೂಲನ ಮಾಡುವುದು ಹೇಗೆ?
ವಿದೂಷಕ : ಅದು ಅಷ್ಟು ಸುಲಭವಲ್ಲವೆಂಬುದು ನಿಜ ಮಾರಾಜರೇ ಆದರೆ ಅಸಾಧ್ಯವೇನಲ್ಲ. ಬದುಕಿಗೆ ಬೇಕಾದ ಕನಿಷ್ಟ ಅಗತ್ಯಕ್ಕಿಂತಾ ಯಾರೂ ಹೆಚ್ಚುವರಿ ಸಂಗ್ರಹ ಮಾಡುವಂತಿಲ್ಲ, ಸಂಪತ್ತನ್ನು ಕೂಡಿಡುವಂತಿಲ್ಲ, ಅಗತ್ಯದ ಮಿತಿ ಮೀರಿ ಆಸ್ತಿ ಮಾಡುವಂತಿಲ್ಲ, ಹಾಗೇನಾದರೂ ಮಾಡಿದರೆ ಮರಣದಂಡನೆ ಎಂದು ರಾಜಾಜ್ಞೆ ಹೊರಡಿಸಿ. ಕಲ್ಯಾಣದಲ್ಲಿ ಬಸವಣ್ಣನವರು ಜಾರಿಗೆ ತರಲು ಪ್ರಯತ್ನಿಸಿದ್ದ ಕಾಯಕವೇ ಕೈಲಾಸ ಹಾಗೂ ದಾಸೋಹ ಪದ್ದತಿಗಳನ್ನು ಜಾರಿ ಮಾಡಿ. ಆಗ ನಿಮ್ಮ ಈ ಅಸಮಾನ ವ್ಯವಸ್ಥೆಯ ಸಾಮ್ರಾಜ್ಯ ಕಲ್ಯಾಣ ರಾಷ್ಟ್ರವಾಗುವುದು. ಸೂರ್ಯ ಚಂದ್ರರು ಇರುವವರೆಗೂ ನಿಮ್ಮ ಹೆಸರು ಅಜರಾಮರವಾಗುವುದು. ಈಗ ನೀವು ಮಾಡಿದ ಸಾಮೂಹಿಕ ಹತ್ಯಾಕಾಂಡದ ಪಾಪದ ಭಾರವೂ ಸ್ವಲ್ಪ ಕಡಿಮೆಯಾಗುವುದು.
ಚಕ್ರವರ್ತಿ : ಅರ್ಥಪೂರ್ಣ ಸಲಹೆ. ಇಂದಿನಿಂದಲೇ ಜಾರಿಮಾಡೋಣವಾಗಲಿ. ಕಾಯಕ ಹಾಗೂ ದಾಸೋಹ ನಮ್ಮ ಧ್ಯೇಯವಾಗಲಿ. ಸಮಾನತೆ ಸಾಧಿಸುವುದೇ ನಮ್ಮ ದಾರಿ ಗುರಿ ಉದ್ದೇಶವಾಗಲಿ. ಅಮಾತ್ಯರೆ ನಾನೀಗಲೇ ಹೋಗಿ ಜನರ ಸಾವು ನೋವುಗಳಿಗೆ ಸ್ಪಂದಿಸಬೇಕಿದೆ ಏರ್ಪಾಡು ಮಾಡಿ. ಈ ದರ್ಬಾರಿನಲ್ಲೇನು ಕೆಲಸ, ಜನರ ಬಳಿ ಹೋಗೋಣ ನಡೆಯಿರಿ.
ಹಾಡು..
ಬಸವಾದಿ ಶರಣರ ಆಶಯ
ಕಾಯಕವೇ ಕೈಲಾಸ
ದುರಾಸೆ ಅಳಿದು ದಾಸೋಹ ಉಳಿದು
ಸಮಾನತೆ ತಂದರೆ ಬಡತನವೇ ನಾಶ
- ಶಶಿಕಾಂತ ಯಡಹಳ್ಳಿ