ಕೆಂಗೇರಿ : ನಶಿಸಿ ಹೋಗುತ್ತಿರುವ ಸಂಗೀತ, ಸಾಹಿತ್ಯದ ಬೆಳವಣಿಗೆಗೆ ನುರಿತ ಕಲಾವಿದರು ತಮ್ಮ ಪ್ರತಿಭೆಯನ್ನು ಇತರರಿಗೂ ಕಲಿಸುವ ಮೂಲಕ ಕಲೆಯನ್ನು ಉಳಿಸಿ ಬೆಳಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಹೇಳಿದರು.
ಕೆಂಗೇರಿ ಉಪನಗರದ ಎಸ್.ಜೆ.ಆರ್.ಕೆಂಗೇರಿ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ " ಶ್ರೀ ಸರಸ್ವತಿ ಸಂಗೀತ ಸಾಹಿತ್ಯ ಸದನ ಸಮಿತಿ " ವತಿಯಿಂದ " ಆಷಾಡ ಮಾಸದ ಗಮಕ ಕಾರ್ಯಕ್ರಮ " ದಲ್ಲಿ ಭಾಗವಹಿಸಿ ಮಾತನಾಡಿದರು. ಶಾಸ್ತ್ರೀಯ ಸಂಗೀತ, ಗಮಕ ಕಲೆಯು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಕಲೆಯಾಗಿದ್ದು, ಕನ್ನಡದ ಪಠ್ಯ ಪುಸ್ತಕದಲ್ಲಿ ಅಳವಡಿಸುವ ಮೂಲಕ ನಾಡಿನ ಪ್ರಸಿದ್ಧ ಕವಿಗಳ ಪರಿಚಯವನ್ನು ಪಸರಿಸುವ ಕೆಲಸವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ,ಕಲಾಸಕ್ತರ ಬೆಂಬಲ ಬೇಕಾಗಿದೆ ಎಂದು ಹೇಳಿದರು.
ಸದನ ಸಮಿತಿಯ ಅಧ್ಯಕ್ಚೆ ಜಯಲಕ್ಷ್ಮಿ ಗೋಪಿನಾಥ್ ಮಾತನಾಡಿ," ಆಷಾಡ ಮಾಸದ ಗಮಕ ಕಾರ್ಯಕ್ರಮ " ದಲ್ಲಿ " ರಾಘವಾಂಕನ ಹರಿಶ್ಚಂದ್ರ ಕಾವ್ಯ ಸಂಗ್ರಹ " ದ ಹಲವು ಕೃತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, 25.06.2023 ರ ರಿಂದ 02.07.2023 ರ ವರೆಗೆ ಸಂಜೆ 4.30 ರಿಂದ 6.30 ರ ವರೆಗೆ ಪ್ರಸ್ತುತ ಪಡಿಸಲಾಗುವುದು.ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಸಲಾಗುತ್ತಿದೆ.ಇದರ ಸಧುಪಯೋಗವನ್ನು ಸ್ಥಳೀಯ ಕಲಾವಿದರು ಬಳಸಿಕೊಂಡು ಗಮಕ ಕಲೆಯನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ಇಂದಿನ ಕಾರ್ಯಕ್ರಮದಲ್ಲಿ "ವಸಿಷ್ಠ ವಿಶ್ವಾಮಿತ್ರ ಸಂವಾದ"ದಲ್ಲಿ ಧರಿತ್ರಿ ಆನಂದರಾವ್ ಅವರ ವಾಚನ ನಿರಂಜನ್ ಅವರ ವ್ಯಾಖ್ಯಾನ ನಡೆಯಿತು.
ಎಸ್.ಜೆ.ಆರ್.ಕೆಂಗೇರಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಚಕಿ ವನಮಾಲ, ಮಹೇಂದ್ರ ಸದನ ಸಮಿತಿಯ ಸದಸ್ಯರು ಸೇರಿದಂತೆ ಕಲಾಸಕ್ತರು ಇದ್ದರು.