ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ನಾವೆಲ್ಲಾ ಶ್ರಮಿಸಬೇಕು

varthajala
0

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ : ಸುಸ್ಥಿರ ಅಭಿವೃದ್ಧಿ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣ ಮಾಡಬೇಕು ಎಂದು ಗ್ರಾಮ ಪಂಚಾಯತಿ ಕಾರ್ಯದರ್ಶಿ ರಾಮಚಂದ್ರಪ್ಪ ಹೇಳಿದರು.

ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮಪಂಚಾಯಿತಿಯ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಸಂಸ್ಥೆ ವತಿಯಿಂದ ಶುಕ್ರವಾರ ಆಯೋಜಿಸಿದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳ ತರಬೇತಿ ಹಾಗೂ ಸುಸ್ಥಿರ ಅಭಿವೃದ್ಧಿ ಕುರಿತು ಸಾಮರ್ಥ್ಯ‌ವರ್ಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳ ಸಂಬಂಧಿಸಿದಂತೆ ವಿಶ್ವ ಸಂಸ್ಥೆ 1999 ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯನ್ನು ಜಾರಿಗೆ ತರಲಾಯಿತು. ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗು ಗಂಡಿರಲಿ, ಹೆಣ್ಣಿರಲಿ ಅವುಗಳ ಬದುಕಿಸುವ ಸಲುವಾಗಿ ಈ ಮಕ್ಕಳ ಹಕ್ಕುಗಳನ್ನು ಜಾರಿಗೆ ತರಲಾಯಿತು ಎಂದರು.

ದೇಶದಲ್ಲಿ ಶೇ.80ರಷ್ಟು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ನೆರೆಹೊರೆಯವರಿಂದಲೇ ಹೆಚ್ಚಾಗಿ ನಡೆದಿವೆ. ಭಿಕ್ಷಾಟನೆ, ನಿರ್ಗತಿಕ ಮಕ್ಕಳು ಜಿಲ್ಲೆಯಲ್ಲಿ ಎಲ್ಲೆ ಕಂಡು ಬಂದರೂ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಿ ಅಥವಾ 1098 ಕರೆ ಮಾಡಿ ಮಾಹಿತಿ ನೀಡಿದರೆ ಸಾಕು ಅವರ ರಕ್ಷಣೆಯನ್ನು ಮಾಡಲಾಗುತ್ತದೆ. ಮಕ್ಕಳ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಬೇಕಾಗಿದೆ ಎಂದರು.

ಚೈಲ್ಡ್‌ ರೈಟ್ಸ್‌ ಸಂಸ್ಥೆಯ ಸದಸ್ಯ ಸಿ ಆರ್ ಟಿ ಮಂಜುನಾಥ್ ಮಾತನಾಡಿ ಅನೈತಿಕ ಸಾಗಾಣಿಕೆಗೆ ಒಳಗಾಗಬಹುದಾದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ನೀಡುವುದು, ಅವರ ಕುಟುಂಬಗಳಿಗೆ ಆರ್ಥಿಕ, ನೈತಿಕ ಸಾಮಾಜಿಕ ವೈದ್ಯಕೀಯ ಹಾಗೂ ಶೈಕ್ಷಣಿಕ ಸಹಾಯವನ್ನು ಒದಗಿಸುವುದು, ಶಾಲಾ ಮಕ್ಕಳಿಗೆ ಸಾಗಾಣಿಕೆ ವಿರುದ್ಧ ಶಾಲೆಗಳಲ್ಲಿ ಅರಿವು ಮೂಡಿಸುವುದು, ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಗಳನ್ನು ಆಯೋಜಿಸಿ ಪಾಲನೆ ಮಾಡಲಾಗುವುದು. ಹೆಣ್ಣು ಮಕ್ಕಳ ಮೇಲಿನ ಕೌಟಿಂಬಿಕ ದೌರ್ಜನ್ಯ ನಿಲ್ಲಿಸುವುದು, ಬಾಲ್ಯ ವಿವಾಹ ನಿಷೇಧ ಮಾಡುವುದು, ಮಕ್ಕಳ ಹಕ್ಕುಗಳ ಕುರಿತು ವ್ಯಾಪಕ ಪ್ರಚಾರ, ಮಕ್ಕಳು ಮತ್ತು ಹೆಣ್ಣು ಮಕ್ಕಳ ಸಾಗಾಣಿಕೆ ವಿರುದ್ಧ ಮಾಹಿತಿ ನೀಡುವುದು, ಮಾಹಿತಿ ಶಿಕ್ಷಣ ನೀಡಿ ಕಿಶೋರಿಯರ ಸಬಲೀಕರಣ ಮಾಡುವುದು, ಬಾಲ ಕಾರ್ಮಿಕ ಪದ್ಧತಿಯನ್ನು ನಿಷೇಧ ಮಾಡುವುದು ಆ ಮೂಲಕ ಪಂಚಾಯಿತಿಗಳು ಮಕ್ಕಳ ಸ್ನೇಹಿ ಮತ್ತು ಮಹಿಳಾ ಸ್ನೇಹಗಳಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಗ್ರಾಮಪಂಚಾಯಿತಿ ಸದಸ್ಯೆ ಅಶ್ವಥ್ಥಮ್ಮ,ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ  ವರ್ಗದವರು, ವಿ ಆರ್ ಡಬ್ಲ್ಯೂ , ಪಂಚಾಯಿತಿ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.

Post a Comment

0Comments

Post a Comment (0)