ಪ್ರತಿದಿನ ಚಪಾತಿ ತಿನ್ನುವುದು ಆರೋಗ್ಯಕರವೇ?

varthajala
0

 


ನಮ್ಮ ಕುಟುಂಬದ ಅಭಿಪ್ರಾಯದಲ್ಲಿ ಇಲ್ಲ. ಪ್ರತಿದಿನ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ನಮ್ಮ ಮನೆಯ ಕಥೆಯನ್ನೇ ಇಲ್ಲಿ ಹೇಳುತ್ತೇನೆ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ತುಂಬಾ ಮನೆಗಳಲ್ಲಿ ರಾತ್ರಿ ಅನ್ನ ಬದಲು ಚಪಾತಿಯನ್ನು ತಿನ್ನಲು ಶುರು ಮಾಡಿದ್ದರು. ಅನ್ನ ಒಳ್ಳೇದಲ್ಲ, ಡಯಾಬಿಟಿಸ್ ಬರಬಹುದು, ಚಪಾತಿ ಒಳ್ಳೇದು ಅಂತ ಎಲ್ಲಕಡೆ ಗುಲ್ಲೆದ್ದಿತ್ತು. ನಾವು ಕೂಡ ಅದನ್ನೇ ನಂಬಿಕೊಂಡು, ರಾತ್ರಿ ಊಟಕ್ಕೆ ನಮ್ಮ ತಂದೆ ಚಪಾತಿ ಅಭ್ಯಾಸ ಶುರುಮಾಡಿದರು.

ಕೆಲವು ದಿನಗಳು ಏನೂ ಸಮಸ್ಯೆ ಇರಲಿಲ್ಲ. ಆದರೆ ಕೆಲವು ವಾರಗಳ ನಂತರ ಹೊಟ್ಟೆ ನೋವು, ಅಜೀರ್ಣ ಶುರು ಆಯಿತು.

ಡಾಕ್ಟರ್ ಬಳಿ ಹೋದಾಗ, ಊಟದ ಕ್ರಮವನ್ನು ಕೇಳಿದರು.ಅವರ ಬಳಿ ಹೀಗೆ ಮೊದಲು ಅನ್ನ ತಿನ್ನುತ್ತಿದ್ದೆ, ಈಗ ಚಪಾತಿ ತಿನ್ನುತ್ತಿದ್ದೇನೆಂದು ಅಪ್ಪ ಹೇಳಿದರು.

ಅದಕ್ಕೆ ಡಾಕ್ಟರ್ ಹೇಳಿದ್ದು ಹೀಗೆ "ನಿಮಗೆ ಎಷ್ಟೋ ವರ್ಷಗಳಿಂದ ರೂಢಿ ಇದ್ದ ಅಭ್ಯಾಸವನ್ನು ಯಾಕೆ ಬದಲು ಮಾಡಿದಿರಿ? ನಿಮ್ಮ ದೇಹ ಇಲ್ಲಿನ ಆಹಾರಕ್ಕೆ ಹೊಂದಿಕೊಂಡಿರುತ್ತದೆ, ದಕ್ಷಿಣ ಕರ್ನಾಟಕದಲ್ಲೇ ಎಲ್ಲೂ ಗೋಧಿಯನ್ನ ಬೆಳೆಯುವುದಿಲ್ಲ, ಅದು ನಮ್ಮ ಮೈಗೆ ಒಗ್ಗುವುದಿಲ್ಲ. ಅಪರೂಪಕ್ಕೆ ತಿನ್ನಬಹುದು, ಆದರೆ ಪ್ರತಿದಿನ ತಿನ್ನಕೂಡದು. ನಿಮ್ಮ ಪೂರ್ವಿಕರು ಚಪಾತಿ ತಿನ್ನುತ್ತಿದ್ದರೆ? ಇಲ್ಲವಲ್ಲ!! ಮತ್ತೆ ನೀವು ಯಾಕೆ ಅದನ್ನ ಶುರು ಮಾಡಬೇಕು. ಇಲ್ಲೇ ಬೆಳೆಯುವ ಭತ್ತ, ರಾಗಿ, ಇಂತವನ್ನು ತಿನ್ನಬೇಕು. ಗೋಧಿ ಉತ್ತರ ಭಾರತದ ಬೆಳೆ, ಅದು ಇಲ್ಲಿಯ ಮಣ್ಣಿನ ಬೆಳೆಯಲ್ಲ".

ಚಪಾತಿ ಬಿಟ್ಟು ಅನ್ನ ಮತ್ತೆ ಶುರು ಮಾಡಿದ ಮೇಲೆ ಸಮಸ್ಯೆ ಸರಿಹೋಯಿತು.

ಡಾಕ್ಟರ್ ಹೇಳಿದ ಮಾತು ನಿಜ. ನಮ್ಮ ಇಬ್ಬರೂ ಅಜ್ಜಿಯರಿಗೆ ಕೇಳಿದೆ, ಯಾರು ಕೂಡ ಚಪಾತಿ ಅಡುಗೆ ಮೊದಲು ಮಾಡಿಯೇ ಇಲ್ಲ. ನನ್ನ ಅಪ್ಪ ಅಮ್ಮ ಕೂಡ ಚಿಕ್ಕಂದಿನಲ್ಲಿ ಚಪಾತಿಯನ್ನು ತಿಂದಿಲ್ಲ. ಆಗ ಗೋಧಿಯಿಂದ ಮಾಡುತ್ತಿದ್ದು ಪೂರಿ ಅಷ್ಟೇ, ಎಷ್ಟೋ ತಿಂಗಳಿಗೊಮ್ಮೆ ಪ್ಯೂರಿ ಆಲೂಗಡ್ಡೆ ಪಲ್ಯ ಮಾಡುತ್ತಿದ್ದರಂತೆ. ಗೋಧಿ ಲಭ್ಯತೆ ಕೂಡ ಕಡಿಮೆ ಇತ್ತಂತೆ.

ಇದು ಕೇವಲ ನಮ್ಮ ಮನೆಯ ಕಥೆಯಲ್ಲ, ನಮ್ಮ ನಂಟರಲ್ಲಿ, ನೆರೆಮನೆಯವರಲ್ಲಿ ಕೂಡ ಆಗಿದ್ದನ್ನ ಕೇಳಿದ್ದೇವೆ.

ಇದರ ತಾತ್ಪರ್ಯ ಇಷ್ಟೇ. ಗೋಧಿ ಒಳ್ಳೇದೋ ಕೆಟ್ಟದ್ದೋ ಪ್ರಶ್ನೆ ಅಲ್ಲ, ಎಲ್ಲಿ ಬೆಳೆಯುತ್ತಾರೋ ಅಲ್ಲಿ ತಿಂದರೆ ಒಳ್ಳೇದು, ಅದನ್ನ ಬಿಟ್ಟು ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ, ಕೇರಳ, ಆಂಧ್ರ, ತಮಿಳುನಾಡು ಇಂಥ ದಕ್ಷಿಣ ರಾಜ್ಯಗಳಲ್ಲಿ ಗೋಧಿ ಪ್ರತಿದಿನ ಸೇವನೆಗೆ ಒಳ್ಳೆಯದಲ್ಲ. ಆದರೆ ಅನ್ನ, ರಾಗಿ ಪ್ರತದಿನ ಸೇವಿಸಬಹುದು.

ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದಲ್ಲಿ ಗೋಧಿ ಒಳ್ಳೆಯದು, ಪಂಜಾಬ್ ರಾಜ್ಯದಲ್ಲಿ ಮೂರು ಹೊತ್ತೂ ತಿನ್ನಬಹುದು.

Post a Comment

0Comments

Post a Comment (0)