ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರ ಘೋಷಣೆ

varthajala
0
ಬೆಂಗಳೂರು, ಮೇ 25 (ಕರ್ನಾಟಕ ವಾರ್ತೆ): ಮುಖ್ಯಚುನಾವಣಾಧಿಕಾರಿಗಳ ಕಚೇರಿ ಕರ್ನಾಟಕ ವತಿಯಿಂದ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023 ರ ಮತದಾನದ ವಿಷಯ ಕುರಿತು ಮಾಧ್ಯಮಗಳಲ್ಲಿ ಕಾರ್ಯನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರನ್ನು ಇಂದು ಘೋಷಿಸಲಾಗಿದೆ.

ಮೇ 10 ರಂದು ನಡೆದ ಮತದಾನದ ದಿನದ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗೆ ಛಾಯಾಚಿತ್ರಗಳನ್ನು ಕಳುಹಿಸಲು ಮೇ 20 ಕೊನೆಯ ದಿನವಾಗಿತ್ತು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 63 ಪತ್ರಿಕಾ ಛಾಯಾಗ್ರಾಹಕರು / ಹವ್ಯಾಸಿ ಛಾಯಾಗ್ರಹಕರು ಭಾಗವಹಿಸಿದ್ದರು. ಸೂಕ್ತ ಶೀರ್ಷಿಕೆಯೊಂದಿಗೆ 5 ಛಾಯಾಚಿತ್ರಗಳನ್ನು ಕಳುಹಿಸಲು ತಿಳಿಸಲಾಗಿತ್ತು. ಸ್ಪರ್ಧೆಯಲ್ಲಿ ಸಲ್ಲಿಕೆಯಾಗಿದ್ದ ಛಾಯಾಚಿತ್ರಗಳನ್ನು ಸೂಕ್ತಮಾರ್ಗ ಸೂಚಿಗಳನ್ವಯ ಕೂಲಂಕುಷವಾಗಿ ಪರಿಶೀಲಿಸಿ ಆಯ್ಕೆಮಾಡಲು ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.

ಇಂದು ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಉತ್ತಮ ಛಾಯಾಚಿತ್ರಗಳನ್ನು ಬಹುಮಾನಗಳಿಗೆ ಶಿಫಾರಸ್ಸು ಮಾಡಿ ವಿಜೇತರನ್ನು ಘೋಷಿಸಲಾಯಿತು.

ತಾಜುದ್ದೀನ್ ಆಜಾದ್, ಹಿರಿಯ ಛಾಯಾಗ್ರಾಹಕರು, ಪ್ರಜಾವಾಣಿ, ಕಲ್ಬುರ್ಗಿ ಪ್ರಥಮ ಬಹುಮಾನ 25,000/-, ಇಂದ್ರಕುಮಾರ್ ದಸ್ತೇನವರ್ ಛಾಯಾಗ್ರಾಹಕರು, ಹಳ್ಳಿ ಸಂದೇಶ ಸುದ್ದಿಪತ್ರಿಕೆ, ಬಾಗಲಕೋಟೆ ದ್ವಿತೀಯ ಬಹುಮಾನ 15,000/-, ಫಕ್ರುದ್ದೀನ್. ಹೆಚ್ ಛಾಯಾಗ್ರಾಹಕರು ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್ ಬೆಂಗಳೂರು ತೃತೀಯ ಬಹುಮಾನ 10,000/-, ಸುರೇಶ್.ಪಿ. ಹಿರಿಯ ಛಾಯಾಗ್ರಾಹಕರು, ಕನ್ನಡಪ್ರಭ, ಬೆಂಗಳೂರು ಹಾಗೂ ಎನ್.ನರಸಿಂಹಮೂರ್ತಿ, ಛಾಯಾಗ್ರಾಹಕರು, ದಿ ಎಕನಾಮಿಕ್ ಟೈಮ್ಸ್, ಬೆಂಗಳೂರು ಸಮಾಧಾನಕರ ಬಹುಮಾನ 3,000/-, ಕೆ.ವೆಂಕಟೇಶ್, ಹವ್ಯಾಸಿ ಛಾಯಾಗ್ರಾಹಕರು, ಮಲ್ಲೇಶ್ವರಂ, ಬೆಂಗಳೂರು ವಿಶೇಷ ಬಹುಮಾನ 5,000/- ರೂಪಾಯಿಗಳ ಬಹುಮಾನ ಘೋಷಿಸಲಾಗಿದೆ.
ಲೋಕಸಭಾ ಚುನಾವಣೆ -2019 ರಲ್ಲಿ ಸಹ ಇದೇ ರೀತಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾದ ಛಾಯಾಚಿತ್ರಗಳು ಪ್ರಶಂಸೆಗೆ ಪಾತ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ - 2023 ನಿಮಿತ್ತ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಶೀಘ್ರದಲ್ಲಿಯೇ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿಗಳಿಗೆ ಆಯ್ಕೆಯಾದ ಛಾಯಾಗ್ರಾಹಕರಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)