ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇಂದು ಬೀದರ್‍ಗೆ ಭೇಟಿ ನೀಡಿದ್ದರು.
ಮಧ್ಯಾಹ್ನ ಅವರು ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಅಲ್ಲಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಅಲ್ಲದೆ ಗೋಪೂಜೆ ನೆರವೇರಿಸಿದರು. ಕೇಂದ್ರ ಸಚಿವ ಭಗವಂತ್ ಖೂಬಾ, ಬೀದರ್ ನಗರ ಬಿಜೆಪಿ ಅಭ್ಯರ್ಥಿ ಈಶ್ವರ ಸಿಂಗ್ ಠಾಕೂರ್, ರಾಮಕೃಷ್ಣ ಆಶ್ರಮದ ಮುಖ್ಯ ಸ್ವಾಮೀಜಿ ಶ್ರೀ ಜ್ಯೋತಿರ್ಮಯಾನಂದ ಮಹಾರಾಜ್ ಮತ್ತಿತರರು ಭಾಗವಹಿಸಿದ್ದರು.
ಮಧ್ಯಾಹ್ನ ಹೋಟೆಲ್ ವೈಬ್‍ನಲ್ಲಿ ಮತದಾರರು ಮತ್ತು ಪ್ರಬುದ್ಧರ ಜೊತೆ ಸಭೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕವು ಪ್ರಗತಿಪಥದಲ್ಲಿ ಸಾಗಲು ಮತ್ತು ಈಗಾಗಲೇ ಬಿಜೆಪಿ ಸರಕಾರವು ಜಾರಿಗೊಳಿಸಿದ ಮೀಸಲಾತಿ ನೀತಿ ಮುಂದುವರಿಯಲು ಬಿಜೆಪಿಯನ್ನು ಗೆಲ್ಲಿಸಲು ಅವರು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳನ್ನು ರದ್ದು ಮಾಡಲಿದೆ. ಅಲ್ಲದೆ, ಕಾಂಗ್ರೆಸ್ ಸರಕಾರವು ಪಕ್ಷದ ಎಟಿಎಂ ಆಗಿ ಕೆಲಸ ಮಾಡಲಿದೆ ಎಂದು ಅವರು ಎಚ್ಚರಿಸಿದರು. ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಕರ್ನಾಟಕಕ್ಕೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಗಳು ಸಮರ್ಪಕವಾಗಿ ಮುಂದುವರೆಯಲು ಬಿಜೆಪಿಯನ್ನೇ ಅಧಿಕಾರಕ್ಕೆ ತರಬೇಕು ಎಂದು ವಿನಂತಿಸಿದರು.
ಬಳಿಕ ಬಿಜೆಪಿ ಪ್ರಮುಖರ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಕೇಂದ್ರದ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾಧ್ಯಕ್ಷ ಶಿವಾನಂದ್ ಮಂಟಾಲ್ಕರ್, ಸಚಿವ ಪ್ರಭು ಚೌಹಾಣ್, ಬೀದರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ ಹಾಗೂ ಇತರರು ಉಪಸ್ಥಿತರಿದ್ದರು.