ಯುಗಾದಿಯಂದು ಪಂಚಾಂಗ ಶ್ರವಣ ಮಾಡುತ್ತಾರೆ.... ಇದರ ಹಿನ್ನೆಲೆ....

varthajala
0

ಇದು ಯುಗಾದಿ ಹಬ್ಬದ ವೈಶಿಷ್ಟ್ಯ ಅಂಶ ಹಾಗೂ ಸಂಪ್ರದಾಯ. ಅಂದು ಮದ್ಯಾಹ್ನ ಅಥವಾ ಸಂಜೆ ದೇವಸ್ಥಾನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಂಗ ಪಠಣ ಸಾಮೂಹಿಕ ಶ್ರವಣ ನಡೆಯುತ್ತದೆ. ಇದು ಮಹಾಭಾರತದ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ತಿಳಿದು ಬಂದಿದೆ. ಭವಿಷ್ಯ ಪುರಾಣದಲ್ಲಿ ಧರ್ಮರಾಯನನ್ನು ಕುರಿತು ಹೀಗೆ ಹೇಳಲಾಗಿದೆ.

'ಮಹಾಬಾಹೋ, ಚೈತ್ರ ಶುದ್ಧ ಪಾಡ್ಯಮಿ ಪುಣ್ಯಕರವಾದದು. ಆ ದಿನ ಬೇವಿನ ಚಿಗುರನ್ನು ತಿಂದು, ತಿಥಿ, ನಕ್ಷ ತ್ರ, ಶಕವರ್ಷ, ವರ್ಷಾಧಿಪತಿಗಳು, ರಸಧಾನ್ಯಾಧಿಪತಿಗಳು, ಮೇಘಾಧಿಪತಿ ಮೊದಲಾದವರ ಬಗ್ಗೆ ಕೇಳಿ ತಿಳಿದುಕೊಳ್ಳ -ಬೇಕು. ಹೀಗೆ ಕೇಳುವುದರಿಂದ ಮಾನವರಿಗೆ ಅಶುಭಗಳು ನಿವಾರಣೆಯಾಗಿ ಶುಭವಾಗುವುದು ಲಕ್ಷ್ಮೀಪ್ರದವಾಗುವುದು' ಎಂದು ಹೇಳಿದೆ.

ಮತ್ತೊಂದು ಶ್ಲೋಕದಲ್ಲಿ ಹೇಳಿರುವಂತೆ ಈ ಶುಭದಿನದಂದು ಪಂಚಾಂಗವನ್ನು ಕೇಳುವವರಿಗೆ ಅಧಿಕಫಲ. ಶಾಶ್ವತ ಸುಖ, ಅಪಾರ ಐಶ್ವರ್ಯ, ಅತುಳ ಯಶಸ್ಸು, ಪಾಪನಾಶನ - ಈ ಸತ್ಪಲಗಳು ಲಭಿಸುತ್ತವೆ. ಪಂಚಾಂಗ ಪಠಣದಿಂದ ಪ್ರತಿಯೊಂದು ಮಾಸದ ಫಲ, ರಾಶಿಫಲ, ದ್ವಾದಶಾದಿತ್ಯರು ಮಳೆ-ಬೆಳೆ ಮೊದಲಾದ ವಿಚಾರಗಳನ್ನು ಮುಂಚಿತವಾಗಿಯೇ ತಿಳಿಯುವುದರಿಂದ ಆ ವರ್ಷದಲ್ಲಿ ನಡೆಸಬೇಕಾದ ವ್ಯವಹಾರ ವಹಿವಾಟುಗಳನ್ನು ನಡೆಸುವ ಮುಂದಾಲೋಚನೆಗೆ ಮಾರ್ಗದರ್ಶನ ಸ್ಫೂರ್ತಿ ದೊರೆತಂತಾಗುತ್ತದೆ.

ಚಂದ್ರದರ್ಶನ

ಪಾಡ್ಯದ ನಂತರ ಬಿದಿಗೆಯ ದಿನ. ಸ್ನಾನ ಪೂಜಾದಿಗಳನ್ನು ಮಾಡಿ ಸಂಜೆ ಚಂದ್ರ ದರ್ಶನ ಮಾಡಿ ನಮಸ್ಕರಿಸುವ ಸಂಪ್ರದಾಯ. ಚಂದ್ರನನ್ನು ನೋಡಿದ ಕೂಡಲೇ 'ಕ್ಷೀರ ಸಮುದ್ರದಲ್ಲಿ ಹುಟ್ಟಿದವನೇ ಶ್ರೀ ಲಕ್ಷ್ಮೀದೇವಿಯ ಸಹೋದರನೇ, ಶಿವನ ಜಟೆಯಲ್ಲಿರುವವನೇ, ಬಾಲಚಂದ್ರ ನಿನಗೆ ನಮಸ್ಕಾರ' ಎಂದು ಭಕ್ತಿಯಿಂದ ಪ್ರಾರ್ಥಿಸಿ ಹೊಸ ಬಟ್ಟೆಯ ಒಂದು ನೂಲನ್ನು ಅವನಿಗೆ ಅರ್ಪಿಸುವ ಸಂಪ್ರದಾಯ. ಚಂದ್ರದರ್ಶನ ಮಾಡಿ ಹಿರಿಯರಿಗೆ ನಮಸ್ಕರಿಸುವುದು, ಮಿತ್ರರಿಗೆ ಶುಭವನ್ನು ಹಾರೈಸುವುದು ರೂಢಿಯಲ್ಲಿದೆ. ಯುಗಾದಿಯಂದು ಪಾಡ್ಯ ಬರುವಾಗ ಹೊಸ ಸಂವತ್ಸರದ ಉದಯ ಮಾತ್ರವಲ್ಲದೆ ತಿಥಿ, ವಾರ, ನಕ್ಷ ತ್ರಾದಿಗಳು ಉದಯಿಸುತ್ತವೆ. ಆದ್ದರಿಂದ ಪಾಡ್ಯಮಿಯಂದು ಹಬ್ಬದ ಆಚರಣೆ ಮತ್ತು ಬಿದಿಗೆಯಂದು ಚಂದ್ರನ ದರ್ಶನ ವಿಧಿಸಿದ್ದಾರೆ. ಇದು ಎಲ್ಲರ ಆಯುರಾರೋಗ್ಯ ಅಭಿವೃದ್ಧಿಗೆ ಕಾರಣವಾಗಿದೆ.

ಪಾಡ್ಯದ ಗುಡಿ

ಕರ್ನಾಟಕದ ಕೆಲವು ಪ್ರದೇಶಗಳೂ ಸೇರಿದಂತೆ ಗುಜರಾತ್‌, ಮಹಾರಾಷ್ಟ್ರ -ಗಳಲ್ಲಿ ಪಾಡ್ಯದ ವಿಶಿಷ್ಟ ಸಂಪ್ರದಾಯ ಪ್ರಚಲಿತವಿದೆ. ಪಾಡ್ಯದ ಗುಡಿ ಎಂದರೆ ಧ್ವಜ ಕಟ್ಟುವುದು. ಈ ಬಗ್ಗೆ ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಇದಕ್ಕೆ ಇಂದ್ರ ಧ್ವಜ ಎಂದು ಕರೆಯಲಾಗುತ್ತದೆ.

ಪುರುವಂಶದ ವಸುರಾಜನು ಇಂದ್ರನನ್ನು ಒಲಿಸಿಕೊಂಡು ಯುದ್ಧದಲ್ಲಿ ಜಯಗಳಿಸಿ ಪುಷ್ಪಹಾರವನ್ನು ಪಡೆದನಂತೆ. ವಸುರಾಜ ಈ ಪುಷ್ಪಹಾರದೊಂದಿಗೆ ತನ್ನ ನಗರ ಪ್ರವೇಶಮಾಡಿದ್ದು ಚೈತ್ರ ಶುದ್ಧಪ್ರತಿ ಪಡೆಯೆಂದು. ಇಂದ್ರನ ಗೌರವಾರ್ಥ ವಸುರಾಜನ ನಗರಿಯಲ್ಲಿ ಅಂದು ನಡೆದ ಉತ್ಸವ ಇಂದು ಇಂದ್ರಧ್ವಜದ ಪೂಜೆಯಲ್ಲಿ ಉಳಿದುಕೊಂಡು ಬಂದಿದೆ.

ಪಂಚಾಂಗ ಶ್ರವಣದ ಕಾರಣ

ಯುಗಾದಿ ಎಂದರೆ ಯುಗದ ಆದಿ. ಬ್ರಹ್ಮ(Lord Brahma)ನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ. ಒಂದು ಯುಗಾದಿಯಿಂದ ಮತ್ತೊಂದು ಯುಗಾದಿಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದನ್ನು ವಿಜ್ಞಾನ ಕೂಡಾ ಅನುಮೋದಿಸುತ್ತದೆ. ಹಾಗಾಗಿಯೇ ಯುಗಾದಿಗೆ ನಾವು ಹೊಸ ವರ್ಷ ಎಂದು ಆಚರಿಸುವುದು. ನಮ್ಮ ಒಂದು ವರ್ಷವೆಂದರೆ ಬ್ರಹ್ಮನಿಗೆ ಒಂದು ದಿನ. 

ಪಂಚಾಂಗ ಶ್ರವಣ ಮಾಡುವುದರಿಂದ ಇಡೀ ವರ್ಷದ ಮುನ್ಸೂಚನೆ(prediction) ಸಿಕ್ಕಂತಾಗುತ್ತದೆ. ಏಕೆಂದರೆ ಮೊದಲೇ ಹೇಳಿದಂತೆ ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರ್ಣದ ಬಗ್ಗೆ ಹೇಳಲಾಗಿರುತ್ತದೆ. ಯಾವ ತಿಥಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಯಾವ ವಾರ, ನಕ್ಷತ್ರದಲ್ಲಿ ಏನು ಮಾಡಿದರೆ ಯಶಸ್ಸು ಲಭಿಸುತ್ತದೆ, ಯಾರಿಗೆ ಯಾವ ಯೋಗವಿದೆ ಎಲ್ಲವೂ ವಿವರವಾಗಿರುತ್ತದೆ. ಇವೆಲ್ಲವನ್ನೂ ಸುತ್ತಲಿನ ಗ್ರಹಗಳು ಹಾಗೂ ನಕ್ಷತ್ರಗಳ ಆಧಾರದಲ್ಲಿಯೇ ಲೆಕ್ಕ ಹಾಕಲಾಗಿರುತ್ತದೆ. ಅದರ ಆಧಾರದ ಮೇಲೆ ನಾವು ನಮ್ಮ ಮುಂದಿನ ದಿನಗಳು ಸುಲಲಿತವಾಗಿ ಸಾಗುವಂತೆ ಯೋಜನೆ ರೂಪಿಸಿಕೊಳ್ಳಬಹುದು

▬▬▬ஜ۩۞۩ஜ▬▬▬*▬▬▬ஜ۩۞۩ஜ▬▬

    ಧಮೋ೯ ರಕ್ಷತಿ ರಕ್ಷಿತ:*  ಕೃಷ್ಣಾರ್ಪಣಮಸ್ತು

         ಸರ್ವಜನಾಃ ಸುಖಿನೋಭವತು 

▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Post a Comment

0Comments

Post a Comment (0)