ನಾರಾಯಣ್ ಸೇವಾ ಸಂಸ್ಥಾನ್ ನಿಂದ ಕೃತಕ ಅಂಗಾಂಗ ಜೋಡಣಾ ಶಿಬಿರ : ಒಬ್ಬೊಬ್ಬರದ್ದೂ ಒಂದೊಂದು ಕರುಣಾಜನಕ ಕಥೆ
ನಾರಾಯಣ್ ಸೇವಾ ಸಂಸ್ಥಾನ್ ನಿಂದ ಬೆಂಗಳೂರಿನ ಮರಾಠ ಹಾಸ್ಟಲ್ ಆವರಣದಲ್ಲಿ ಆಯೋಜಿಸಿದ್ದ ದೇಶದ ಅತಿದೊಡ್ಡ ಕೃತಕ ಅಂಗಾಂಗ ಜೋಡಣಾ ಶಿಬಿರದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ದಿವ್ಯಾಂಗ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕ ದಿವ್ಯಾಂಗರ ಕೈಕುಲುಕಿ ಕುಶಲ ವಿಚಾರಿಸಿದರು. ನಾರಾಯಣ್ ಸೇವಾ ಸಂಸ್ಥಾನ್ ಅಧ್ಯಕ್ಷ ಪ್ರಶಾಂತ್ ಅಗರ್ ವಾಲ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಭಿಶೇಷ್ ಮುಜುಂದಾರ್, ಜನರಲ್ ಮೋಟಾರ್ಸ್ ನ ನಿರ್ದೇಶಕ ಅನಿತ್ ಭಾಯ್ ಪಟೇಲ್ ಹಾಗೂ ಡಾ. ದೈವಜ್ಞ ನರಸಿಂಹ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು, ಮಾ, 19; ದಿವ್ಯಾಂಗರು, ವಿಶೇಷಚೇತನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿ ದೇಶಾದ್ಯಂತ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ನಾರಾಯಣ್ ಸೇವಾ ಸಂಸ್ಥಾನ್ ಆಯೋಜಿಸಿದ್ದ ದೇಶದಲ್ಲಿಯೇ ಅತಿ ದೊಡ್ಡ ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರಕ್ಕೆ ಬಂದಿದ್ದ ಫಲಾನುಭವಿಗಳಲ್ಲಿ ಒಬ್ಬೊಬ್ಬರದ್ದು ಒಂದೊಂದು ಕರುಣಾಜನಕ ಕಥೆ.
ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯ ಬಿವಿಎಸ್ಎಸ್ ಮರಾಠ ಹಾಸ್ಟಲ್ ಬಳಿ ಏರ್ಪಡಿಸಿದ್ದ ಕೃತಕ ಅಂಗಾಂಗ ಜೋಡಣಾ ಶಿಬಿರದಲ್ಲಿ ಹಲವಾರು ಸಮಸ್ಯೆಗಳು ಅನಾವರಣಗೊಂಡವು. ಆಕಸ್ಮಿಕವಾಗಿ ಸಂಭವಿಸಿದ ಅಪಘಾತ ಮತ್ತಿತರ ಅವಘಡಗಳಿಂದ ಆಘಾತಗೊಂಡು, ದೈನಂದಿನ ಬದುಕು ಸಾಗಿಸಲು ಪ್ರಾಯಾಸ ಪಡುತ್ತಿದ್ದ ಹಲವರ ಮುಖದಲ್ಲಿ ಸಂಜೆ ವೇಳೆಗೆ ಸಂತಸದ ಹೊನಲು ಹರಿಯುವಂತಾಗಿತ್ತು. ಕೃತಕ ಅಂಗಾಂಗ ಅಳವಡಿಸಿಕೊಂಡು ಮೊದಲಿಗೆ ತೆವಳುತ್ತಿದ್ದ ದಿವ್ಯಾಂಗರು ಸಂಜೆ ವೇಳೆಗೆ ಸಾರಾಗವಾಗಿ ನಡೆದಾಡುವಂತಾಯಿತು. ಕೃತಕ ಅಂಗಾಂಗ ಧರಿಸಿದವರ ಜೊತೆ ಸ್ವತಃ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆರೆದು ಕುಶಲ ವಿಚಾರಿಸಿದರು.
ರಾಜ್ಯಪಾಲರ ಮುಂದೆ ಕರತಾಡನಗಳ ನಡುವೆ 593 ಮಂದಿ ಪಥ ಸಂಚಲನ ನಡೆಸಿದರು. ಮಹಿಳೆಯರು, ಮಕ್ಕಳು, ಯುವ ಸಮೂಹ, ಹಿರಿಯ ನಾಗರಿಕರು ಒಳಗೊಂಡಂತೆ ನೋಂದಣಿಯಾಗಿದ್ದ 593 ಮಂದಿಯಲ್ಲಿ ಹೊಸ ಉತ್ಸಾಹ ಮತ್ತು ಹುಮ್ಮಸ್ಸು ಕಂಡು ಬಂತು. ಮೊದಲ ಬಾರಿಗೆ ಕೃತಕ ಅಂಗಾಂಗ ಅಳವಡಿಸಿಕೊಂಡ ದಿವ್ಯಾಂಗರು ಸ್ವಲ್ಪ ಸಮಯದಲ್ಲೇ ನಿರಾಯಾಸವಾಗಿ ವಿಶ್ವಾಸದಿಂದ ಹೆಜ್ಜೆ ಹಾಕಿದರು. ಫುಟ್ಬಾಲ್ ಕ್ರೀಡಾಂಗಣದಲ್ಲಿ ಕಾಲ್ಚೆಂಡಾಟ ಆಡುವಷ್ಟು ಹುಮ್ಮಸ್ಸು ಕಂಡು ಬಂತು. ಅನ್ನದಾನ, ನೇತ್ರದಾನ, ರಕ್ತದಾನದ ಮಾದರಿಯಲ್ಲೇ ಅಂಗಾಂಗ ದಾನ ಕೂಡ ಅತ್ಯಂತ ಮಹತ್ವದ್ದು ಎಂಬುದನ್ನು ಈ ಶಿಬಿರ ನಿರೂಪಿಸಿತು. ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪದ ಚಂದ್ರಯ್ಯ ಎರಡು ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಸಣ್ಣ ಮನೆ ನಿರ್ಮಿಸುತ್ತಿದ್ದರು. ಗೋಡೆಯನ್ನು ಕ್ಯೂರಿಂಗ್ ಮಾಡಲು ಏಣಿ ಏರಿದ್ದಾಗ ಮೇಲಿಂದ ಆಯ ತಪ್ಪಿ ಬಿದ್ದರು. ನಾಟಿ ಔಷಧಿ ಪಡೆದಿದ್ದ ಚಂದ್ರಯ್ಯ ಅವರಿಗೆ 15 ದಿನಗಳ ನಂತರ ಗ್ಯಾಂಗ್ರಿನ್ ಆಗಿ ಸೊಂಟದ ವರೆಗೆ ಕಾಲು ತೆಗೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಅಪಘಾತಗಳಂತಹ ಸಮಸ್ಯೆಗಳಿಗೆ ನಾಟಿ ಔಷಧಿ ಸೂಕ್ತವಲ್ಲ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಕಿವಿ ಮಾತು ಹೇಳುತ್ತಾರೆ. ಗೌರಬಿದನೂರಿನ ಶಿವಶಂಕರ್ ಎಂಬುವರು ಮೂರು ವರ್ಷದ ಹಿಂದೆ ಕೆಲಸ ಮುಗಿಸಿ ಬರುತ್ತಿದ್ದಾಗ ವೇಗವಾಗಿ ಸಾಗುತ್ತಿದ್ದ ಲಾರಿ ಇವರ ಬೈಕ್ ಗೆ ಡಿಕ್ಕಿ ಹೊಡೆದಾಗ ಕಾಲು ಕಳೆದುಕೊಂಡರು. ವಾಟ್ಸ್ ಅಪ್ ಮೂಲಕ ನಾರಾಯಣ್ ಸೇವಾ ಸಂಸ್ಥೆ ಬಗ್ಗೆ ಬಂದ ಮಾಹಿತಿ ಆಧರಿಸಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡು ಶಿಬಿರದಲ್ಲಿ ಕೃತಕ ಕಾಲು ಅಳವಡಿಸಿಕೊಂಡು ಇದೀಗ ಸಂತಸದ ನಗೆ ಬೀರಿದ್ದಾರೆ. ತಮಿಳುನಾಡಿನ ಹೊಸೂರಿನ ನಾಗರಾಜ್ 2014 ರಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದಾಗ ನಾಯಿ ಅಡ್ಡಬಂದು ಸ್ಕಿಡ್ ಆಗಿ ಬಿದ್ದು ಕಾಲು ಕಳೆದುಕೊಂಡರು. ಇದೀಗ ಹೊಸ ಬದುಕಿಗೆ ಪಾದಾರ್ಪಣೆ ಮಾಡಿದ್ದಾರೆ.
ಆಂಧ‍್ರಪ್ರದೇಶದ ವಿಕೋಟದ ಸುಶ‍್ಮಿತ ಎರಡೂವರೆ ವರ್ಷದವರಿದ್ದಾಗ ರಸ್ತೆ ದಾಟುತ್ತಿದ್ದ ಸಮಯದಲ್ಲಿ ಲಾರಿ ಹರಿದು ಒಂದು ಕಾಲು ಕಳೆದುಕೊಂಡಿದ್ದರು. ಆಕೆ ಬಿಟೆಕ್ ಅಧ‍್ಯಯನ ಮಾಡಿದ್ದು, ತಿರುಪತಿಯಲ್ಲಿ ಅಸೆಂಚರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾರಾಯಣ್ ಸೇವಾ ಸಂಸ್ಥೆ ಬಗ್ಗೆ ಮಾಧಮಗಳು ಮತ್ತು ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಪಡೆದು ಇದೀಗ ಕೃತಕ ಕಾಲು ಅಳವಡಿಸಿಕೊಂಡು ಸರಾಗವಾಗಿ ನಡೆದಾಡುತ್ತಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋವುಂಡವರು. ಅವರ ಬದುಕಿನಲ್ಲಿ ಶಿಬಿರ ಹೊಸ ಪರಿವರ್ತನೆ ತರುವಲ್ಲಿ ಸಫಲವಾಗಿದೆ. ಕೋಟ್ಸ್ ಇಂತಹ ಶಿಬಿರಗಳನ್ನು ದೇಶಾದ್ಯಂತ ನಡೆಸುತ್ತಿದ್ದೇವೆ. ಬೆಂಗಳೂರಿನಲ್ಲಿ ಅತಿದೊಡ್ಡ ಶಿಬಿರ ಏರ್ಪಡಿಸಿರುವುದು ಸಂತಸ ತಂದಿದೆ. ಇದರ ಜೊತೆಗೆ ದಿವ್ಯಾಂಗರಿಗೆ ಉದ್ಯೊಗ, ಸಾಮೂಹಿಕ ವಿವಾಹ ಸೇರಿದಂತೆ ಎಲ್ಲಾ ರೀತಿಯ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ‍್ಳಲಾಗುತ್ತಿದೆ. ಪ್ರಶಾಂತ್ ಅಗರ್ ವಾಲ್, ಅಧ‍್ಯಕ್ಷರು, ನಾರಾಯಣ್ ಸೇವಾ ಸಂಸ್ಥಾನ್