*ಪ್ರತಿಭೆಗಳ ಮಹಾ ಸಂಗಮ..*
*"ಗಾನ ನಾಟ್ಯ ಎರಡೂ ರಮ್ಯ"*
(ಸಾಹಿತಿ,ಗೊರೂರು ಅನಂತರಾಜು ಅವರ ಕೃತಿ ವಿಮರ್ಶೆ)
ಶಿಲ್ಪ ಕಲೆಯ ತವರೂರು,ಗೊಮ್ಮಟನ ನೆಲೆವೀಡು,ಕಲೆ,ಸಾಹಿತ್ಯ,ಸಂಗೀತ ಶಿಲ್ಪಕಲೆ ಮತ್ತು ರಂಗಭೂಮಿಗೆ ಹೆಸರಾದ ಹಾಸನ ಜಿಲ್ಲೆಯು ಕರ್ನಾಟಕ ಇತಿಹಾಸದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ಹೆಸರು ಪಡೆದಿದೆ. ಇಂತಹ ಹಾಸನ ಜಿಲ್ಲೆಯಲ್ಲಿ ಅನೇಕ ವಿದ್ವಾಂಸರು,ಕವಿಗಳು,ಸಾಹಿತಿಗಳು,ಕಲಾವಿದರು ಜನ್ಮತಳೆದಿದ್ದಾರೆ. ಅಂತಹ ಕವಿಗಳಲ್ಲಿ ಗೊರೂರು ಅನಂತರಾಜು ಅವರು ಹಿರಿಯ ಕವಿಗಳ ಸಾಲಿನಲ್ಲಿ ಕಾಣಸಿಗುವ ಅಪರೂಪದ ಬರಹಗಾರರು. ಇವರನ್ನು ಬಹುಮುಖ ಪ್ರತಿಭಾಸಂಪನ್ನರೆಂದರೆ ತಪ್ಪಾಗಲಾರದು.ಬಾಲ್ಯದಿಂದಲೇ ಸಾಹಿತ್ಯ ಹವ್ಯಾಸವನ್ನು ಮೈಗೂಡಿಸಿಕೊಂಡಿರುವ ಅನಂತರಾಜು ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸೃಜನಶೀಲ ಬರಹಗಾರರು.ಕವಿಯಾಗಿ,ಸಾಹಿತಿಯಾಗಿ,ರಂಗಭೂಮಿ ಕಲಾವಿದರಾಗಿ,ಹಾಸ್ಯ ಕಲಾವಿದರಾಗಿ ಜಿಲ್ಲೆಯಾದ್ಯಂತ ಹೆಸರಾಗಿದ್ದಾರೆ.ಜನಮನ ಸೂರೆಗೊಂಡಿದ್ದಾರೆ.ಸಾಂಸ್ಕೃತಿಕ ವ್ಯಕ್ತಿತ್ವದಿಂದಲೇ ಎಲ್ಲರ ಮನ ರಂಜಿಸಿದ್ದಾರೆ. ಬಹುಮುಖ ಪ್ರತಿಭಾ ಸಂಪನ್ನರೆನಿಸಿದ ಗೊರೂರು ಅನಂತರಾಜು ಅವರು ಕಥೆ,ಕವನ,ಕವಿತೆ,ಲೇಖನ,
ನಾಟಕಗಳು,ಹಾಸ್ಯ ಲೇಖನಗಳು, ವಿವಿಧ ಪ್ರಕಾರದ ಸಾಹಿತ್ಯವಿಮರ್ಶೆ, ರಂಗಪ್ರಯೋಗ ಒಳಗೊಂಡಂತೆ ಸುಮಾರು 50 ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಜಿಲ್ಲೆಯಾದ್ಯಂತ ನೂರಾರು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರುವ ಅನಂತರಾಜು ಅವರು ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ "ಗೊರೂರು ಅನಂತರಾಜು" ಎಂದೇ ಎಲ್ಲರ ಮನೆ ಮಾತಾಗಿದ್ದಾರೆ.
ಇವರ "ಗಾನ ನಾಟ್ಯ ಎರಡೂ ರಮ್ಯ"
ಕೃತಿಯನ್ನು ವಿಮರ್ಶೆಗೆಂದು ಕೈಗೆತ್ತಿಕೊಂಡಾಗ,ಇದೊಂದು ಉತ್ತಮ ಕೃತಿಯಾಗಿದ್ದು, ವಿವಿಧ ರಂಗಗಳಲ್ಲಿ ಹೆಸರು ಮಾಡಿರುವ ಹಾಗೂ ಎಲೆಮರೆ ಕಾಯಿಯಂತಿರುವ ಪ್ರತಿಭಾವಂತರ ಸಾಧನೆಯನ್ನೊಳಗೊಂಡ ಪರಿಚಯಾತ್ಮಕವಾದ ವಿಶಿಷ್ಟ ಕೃತಿ. ಜಿಲ್ಲೆ,ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು,ಕವಿ-ಸಾಹಿತಿಗಳು, ಸಂಗೀತ ನೃತ್ಯ ಕಲಾವಿದರು,ಜಾನಪದ ಕಲಾವಿದರು,ಭರತನಾಟ್ಯ,ಸುಗಮ ಸಂಗೀತ ಹಾಡುಗಾರರು,ರಂಗಭೂಮಿ ಕಲಾವಿದರು ಹೀಗೆ ವಿವಿಧ ರಂಗಗಳಲ್ಲಿ ಸೇವೆಸಲ್ಲಿಸುತ್ತಿರುವ ಸೃಜನಶೀಲ ಕಲಾವಿದರನ್ನು ಗುರುತಿಸಿ,ಸಂದರ್ಶಿಸಿ, ವಿಮರ್ಶಿಸಿ,ಅಧ್ಯಯನ ನಡೆಸಿ,ಬರೆದಿರುವ ಎಲ್ಲರೂ ಓದಲೇಬೇಕಾದ ಅಮೂಲ್ಯ ಕೃತಿ.
"ಗಾನ ನಾಟ್ಯ ಎರಡೂ ರಮ್ಯ" ಕೃತಿಗೆ ಭರತನಾಟ್ಯ ವಿದುಷಿ,ಅಂಬಳೆ ರಾಜೇಶ್ವರಿ ಅವರು ಬರೆದಿರುವ ಮುನ್ನುಡಿ ಕೃತಿಯ ಮೌಲ್ಯವನ್ನು , ಸೌಂದರ್ಯವನ್ನು ಹೆಚ್ಚಿಸಿದೆ.
ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಹಾಗೂ ಜನಮಿತ್ರ ದಿನಪತ್ರಿಕೆ ಸಂಪಾದಕರಾದ ಹೆಚ್.ಬಿ.ಮದನಗೌಡರು,
ಗೊರೂರು ಅನಂತರಾಜು ಕುರಿತು ಬರೆದಿರುವ ಮೆಚ್ಚುಗೆ ನುಡಿಗಳು ಕೃತಿಗೆ ಕಲಶವಿಟ್ಟಂತಿದೆ.
ಹಾಸನ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿದ್ದ ರಾಜಲಕ್ಷ್ಮಿ ಶ್ರೀಧರ್ ಅವರ ಬೆನ್ನುಡಿ ಮುಕುಟಕ್ಕೆ ಮಾಣಿಕ್ಯವಿಟ್ಟಂತಿದೆ.
ಹಾಸನ ಜಿಲ್ಲೆಯ ಬಹುತೇಕ ಕಲಾವಿದರು,ವಿವಿಧ ಕ್ಷೇತ್ರಗಳ ಸಾಧಕರ ಬಗ್ಗೆ ತಿಳಿಯಲು ಈ ಕೃತಿ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ ಜೊತೆಗೆ ಉದಯೋನ್ಮುಖ ಕಲಾವಿದರ ಪರಿಚಯ ಸೊಗಸಾಗಿ ಮೂಡಿಬಂದಿದೆ.
ಜಿಲ್ಲೆಯ ಹೆಸರಾಂತ ಜಾನಪದ ಕಲಾವಿದರಾದ ದೊಡ್ಡಳ್ಳಿ ರಮೇಶ್,ದುದ್ದ ಯೋಗೇಂದ್ರ ಇವರು ಜಾನಪದದ ಹಲವು ಪ್ರಕಾರಗಳಲ್ಲಿ ತಮ್ಮ ವಿಶಿಷ್ಟ ಕಲೆಯನ್ನು ಜನಮನಕ್ಕೆ ತಲುಪಿಸಿದ್ದಾರೆ ಇವರ ಪರಿಚಯಾತ್ಮಕ ವಿಚಾರಧಾರೆಗಳನ್ನು ದಾಖಲಿಸಿರುವುದು ಹೆಮ್ಮೆಯ ವಿಚಾರ.ಉಗ್ಗು ಇದ್ದರೂ ಹಾಡಿ ಹಿಗ್ಗುವ ಹಾಸನ ಬಾಬು ಅವರ ಅದ್ಭುತ ಕಂಠಸಿರಿಯಲ್ಲಿ ಹಾಡುಗಳನ್ನು ಕೇಳುವುದೇ ಪರಮಾನಂದ...!"ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ" ಎಂಬ ಹಾಡು ಅತ್ಯಂತ ಜನಪ್ರಿಯ ಗೀತೆಯಾಗಿ ಹೊರಹೊಮ್ಮಿದೆ.ಹಾಸನ ಜಿಲ್ಲೆಯ,ಸಾಹಿತ್ಯ,ಸಾಂಸ್ಕೃತಿಕ,ಐತಿಹಾಸಿಕ ಸೊಬಗನ್ನು ತೆರೆದಿಡುವ ವಿಶಿಷ್ಟ ಗೀತೆಯಾಗಿದೆ.
ಭಾಮಿನಿ,ವಾರ್ಧಕ,ಚಂಪೂ,
ಛಂದಸ್ಸು,ರಗಳೆ ಮುಂತಾದ ಪ್ರಕಾರಗಳ ಕಾವ್ಯಗಳನ್ನು ಸುಲಲಿತವಾಗಿ ಹಾಗೂ ಸುಶ್ರಾವ್ಯವಾಗಿ ಗಮಕ ಗಾಯನ ಮಾಡುವ ಗಣೇಶ ಉಡುಪ ಅವರ ಪರಿಚಯವೂ ಸಹ ಕೃತಿಯ ಅಂದವನ್ನು ಹೆಚ್ಚಿಸಿದೆ.
ಹಾಸನದ ಹೊಯ್ಸಳೋತ್ಸವ ಹಾಗೂ ಧ್ವನಿ ಬೆಳಕಿನ ಸಂಯೋಜನೆಯಲ್ಲಿ ಕರ್ನಾಟಕ ಗತವೈಭವ ದೃಶ್ಯರೂಪಕ ಕಾರ್ಯಕ್ರಮಗಳ ಕುರಿತು ಬರೆದಿರುವ ಲೇಖನಗಳು ಅರ್ಥವತ್ತಾಗಿ ಮೂಡಿಬಂದಿವೆ.
ಜನ-ಮನ ರಂಜಿಸಿದ ಹಾಡುಹಬ್ಬ
ಯುವ ಗಾಯಕರ ಗೀತ ಗಾಯನ ಕಾರ್ಯಕ್ರಮ,ನಾಡಹಬ್ಬಕ್ಕೆ ರಂಗುತಂದ ವಿದ್ಯಾರ್ಥಿಗಳ ನೃತ್ಯರೂಪಕಗಳು, ಬಾಹುಬಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಹಾಸನ ಮತ್ತು ಶ್ರವಣಬೆಳಗೊಳದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತ ವಿಚಾರಧಾರೆಗಳು ಅರ್ಥಪೂರ್ಣವಾಗಿ ಮೂಡಿಬಂದಿವೆ.
ಹಾಸನದಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಮೇಳದಲ್ಲಿ ಜಾನಪದ ಕಲಾತಂಡಗಳು,ವೀರಗಾಸೆ ನೃತ್ಯ,ಡೊಳ್ಳಿನ ಕುಣಿತ,ಬೀಸೋ ಕಂಸಾಳೆ,ಚೌಡಿಕೆ ಹಾಡು,ಜಗ್ಗಲಿಗೆ ಮೇಳ ಮುಂತಾದ ಕಲೆಗಳು ಪ್ರದರ್ಶನಗೊಂಡ ಬಗೆಯನ್ನು,ಜನಸಾಮಾನ್ಯರು ಆಸ್ವಾದಿಸಿದ ಬಗೆಯನ್ನು ಗೊರೂರು ಅನಂತರಾಜು ಅವರು ಸಾರವತ್ತಾಗಿ ನಿರೂಪಿಸಿದ್ದಾರೆ.ಸುಗಮ ಸಂಗೀತಕ್ಕೆ ಹಾಸನ ಜಿಲ್ಲೆಯ ಕೊಡುಗೆ ಹಾಗೂ ಬೆಳೆದು ಬಂದ ಬಗೆಯನ್ನು ಸವಿಸ್ತಾರವಾಗಿ ಬರೆಯುತ್ತಾ,ಹನ್ಯಾಳು ಗ್ರಾಮದ ಕಾಳಾಬೋವಿ, ಪಿ.ಬಿ.ಶ್ರೀನಿವಾಸ್ ಅವರ ಧ್ವನಿ ಹೋಲುವ ಬಿ.ಡಿ.ಶಂಕರೇಗೌಡರು,ಜಿ.ಟಿ.ದೇವರಾಜು,ಹಾಸನದ ಭಾನುಮೋಶ್ರೀ, ಜಿಲ್ಲೆಯ ಮತ್ತೋರ್ವ ಪ್ರಸಿದ್ಧ ಹಾಡುಗಾರರಾದ ಗ್ಯಾರಂಟಿ ರಾಮಣ್ಣ,ಜನಪ್ರಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡಿದ ಇಂಚರನಾಗೇಶ್ ಹೀಗೆ ನೂರಾರು ಗಾಯಕರು ತಮ್ಮ ವಿಶಿಷ್ಟ ಪ್ರತಿಭೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಆಚರಿಸುವ ತಿಂಗಳ ಮಾವನ ಹಬ್ಬದ ಕುರಿತು ಈ ಕೃತಿಯಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.ಇದೊಂದು ಜಾನಪದ ಆಚರಣೆಯ ಹಬ್ಬವಾಗಿದ್ದು 'ಬಾರಯ್ಯ ಬೆಳದಿಂಗಳೆ,ನಮ್ಮೂರ ಹಾಲಿನಂಥ ಬೆಳದಿಂಗಳೇ...'ಎಂದು ಚಂದಮಾಮನನ್ನು ಕರೆಯುವ ಆಚರಣೆಯಾಗಿದೆ. ಬಯಲಿನಲ್ಲಿ ತಿಂಗಳ ಮಾವನ ರಂಗೋಲಿ ಬರೆದು ಸೋಬಾನೆ ಪದ ಹಾಡುವ ವಿಶಿಷ್ಟ ಆಚರಣೆಯಾಗಿದೆ.
ತಮ್ಮ ವಿಶಿಷ್ಟವಾದ ಜನಪದ ಗಾಯನದ ಕಂಠಸಿರಿಯನ್ನು ಹೊಂದಿರುವ ಕೆ.ಕೆ.ದೇವಾನಂದ ವರಪ್ರಸಾದ್,ಹಳ್ಳಿಗಾಡಿನ ಜನಪದವನ್ನು ಇಂಪಾಗಿ ಹಾಡುವ ಲಲಿತ ಜ್ಯೋತಿ ಸಹೋದರಿಯರು,
ಬಾಲ್ಯದಲ್ಲಿಯೇ ಕಾಲಿಗೆ ಗೆಜ್ಜೆಕಟ್ಟಿ ಭರತನಾಟ್ಯದಲ್ಲಿ ಹೆಸರು ಮಾಡಿದ ಪ್ರತೀಕ್ಷಾ, ಕೆ.ಆರ್.ರಜನಿ,ಸಂಗೀತ ನೃತ್ಯ ಹಾಗೂ ಕಾವ್ಯಪ್ರತಿಭೆ ಹೆಚ್.ಕೆ.ಪ್ರವಲ್ಲಿಕಾ ಇನ್ನೂ ಮುಂತಾದವರ ಸಾಧನೆಯ ಚಿತ್ರಣವನ್ನು ಸಾಹಿತಿ ಗೊರೂರು ಅನಂತರಾಜು ಅವರು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ.
ಪ್ರಸ್ತುತ ಈ ಕೃತಿಯಲ್ಲಿ ಉದಯೋನ್ಮುಖ ಕಲಾವಿದರು,ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿಭಾವಂತರನ್ನು ಗುರುತಿಸಿ,ಅವರ ವಿವಿಧ ಕ್ಷೇತ್ರಗಳ ಸಾಧನೆಯ ಮಾಹಿತಿಯನ್ನು ಸಂಗ್ರಹಿಸಿ ಬಹಳ ಅಚ್ಚುಕಟ್ಟಾಗಿ ಕೃತಿ ರಚನೆ ಮಾಡಿ ಓದುಗರಿಗೆ ಉಣಬಡಿಸಿರುವ ಅನಂತರಾಜು ಅವರ ಕಾಳಜಿಯನ್ನು ನಾವೆಲ್ಲರೂ ಪ್ರಶಂಸಿಸಬೇಕು.
"ಮಣ್ಣು ಕೂಡುವ ದೇಹ ತಣ್ಣಗಾಗುವ ತನಕ
ಹಿಡಿದ ಕಾಯಕದಲಿ ನಿರತನಾಗು|
ಜನರ ಕಲ್ಯಾಣಕ್ಕೆ ಜಗದ ಉದ್ದಾರಕ್ಕೆ ನಿನ್ನ ಕೊಡುಗೆಯನಿತ್ತು ಹೊರಟುಹೋಗು||"
ಮಹಾದೇವ ಬಣಕಾರರ ಈ ಮೌಲ್ಯಯುತ ಸಾಲುಗಳು ನಮ್ಮನ್ನು ಸದಾ ಜಾಗೃತಗೊಳಿಸುತ್ತವೆ.ಹುಟ್ಟು-ಸಾವಿನ ನಡುವೆ ಮನುಷ್ಯ ಹೇಗೆ ಬದುಕಿದ್ದ ಎನ್ನುವುದು ಬಹಳ ಮುಖ್ಯ. ಅದರಂತೆ ಗೊರೂರು ಅನಂತರಾಜು ಅವರು ತಮ್ಮ ವಿಶಿಷ್ಟ ಕಾರ್ಯ ಸಾಧನೆಗಳಿಂದ ನಮ್ಮ ನಡುವೆ ಸದಾ ಪ್ರಜ್ವಲಿಸುತ್ತಿದ್ದಾರೆ. ಇವರ ಕ್ರಿಯಾಶೀಲ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಬಲ್ಲದು.ಅನಂತರಾಜು ಅವರ 'ಗಾನ ನಾಟ್ಯ ಎರಡೂ ರಮ್ಯ'ಕೃತಿಯು ಸಂಗ್ರಹಯೋಗ್ಯವಾದ ಉತ್ತಮ ಗ್ರಂಥವಾಗಿದ್ದು, ಕೃತಿಕರ್ತರಾದ ಅನಂತರಾಜು ಅವರಿಗೆ ಸಮಸ್ತ ಒದುಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಇವರಿಂದ ಇನ್ನೂ ಹಲವು ಮೌಲಿಕ ಗ್ರಂಥಗಳು ಹೊರಬರಲಿ ನಮ್ಮಂತಹ ಕಿರಿಯ ಬರಹಗಾರರಿಗೆ ಸದಾ ಮಾರ್ಗದರ್ಶನ ನೀಡಲಿ ಎಂದು ಶುಭಕೋರುತ್ತೇನೆ.
●●●●●●●●●●●●●●●●●●●●
ಎಂ.ಜಿ.ಪರಮೇಶ್ ಮಡಬಲು
ಸಾಹಿತಿಗಳು
7892856305