ವಿಶ್ವಗುರು ಸ್ವಾಮಿ ವಿವೇಕಾನಂದರ ಹುಟ್ಟು ಹಬ್ಬದ ಗೌರವಾರ್ಥ ಜನವರಿ 12ರ ದಿನವನ್ನು ‘ರಾಷ್ಟ್ರೀಯ ಯುವ ದಿನ’ ಎಂದು ಆಚರಿಸಲಾಗುತ್ತದೆ.
ಪಟ್ಟಣದ ವಿಶ್ವಚೇತನ ಕಾಲೇಜು ಆವರಣದಲ್ಲಿ ವಿವೇಕಾನಂದ ಐಟಿಐ ಕಾಲೇಜು, ವಿವೇಕಾನಂದ ಡ್ರೈವಿಂಗ್ ಶಾಲೆ ಮತ್ತು ಬಸವಲಿಂಗಪ್ಪ ಪ್ರೌಢಶಾಲೆ ಸಹಯೋಗದಲ್ಲಿ ಸ್ವಾಮಿ ವಿವೇಕನಂದರ ಜನ್ಮ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,
'ಸ್ವಾಮಿ ವಿವೇಕಾನಂದ ಜಯಂತಿ & ರಾಷ್ಟ್ರೀಯ ಯುವ ದಿನಾಚರಣೆ' ಕಾರ್ಯಕ್ರಮವನ್ನು ಜೆ ಎಸ್ ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್ ಶಶಿಕುಮಾರ್ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಶಶಿಕುಮಾರ್ ರವರು ಮಾತನಾಡಿ ಈ ದಿನ ಯುವಜನರಿಗೆ ವಿವೇಕಾನಂದರ ಬೋಧನೆಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಅವರ ವಿಚಾರಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರತಿವರ್ಷವೂ ಒಂದೊಂದು ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. 2023ರ ರಾಷ್ಟ್ರೀಯ ಯುವ ದಿನದ ಧ್ಯೇಯವು "ಇದೆಲ್ಲವೂ ಮನಸ್ಸಿನಲ್ಲಿದೆ" ಎಂದು ಇರಿಸಲಾಗಿದೆ.
1893 ಸೆಪ್ಟೆಂಬರ್ 11ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು “ಅಮೇರಿಕಾದ ಸೋದರ ಸೋದರಿಯರೆ” ಎಂದು ಆತ್ಮೀಯತೆಯಿಂದ ಎಲ್ಲರನ್ನು ಸಂಭೋದಿಸಿದರು. ಈ ವಾಕ್ಯವನ್ನು ಕೇಳಿದೊಡನೆಯೇ ಸಭೆ ತನ್ನ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರತಾಡನ ಮಾಡುವ ಮೂಲಕ ಸೂಚಿಸಿತು.
ವಸಾಹತುಶಾಹಿ ಭಾರತದಲ್ಲಿ ರಾಷ್ಟ್ರೀಯ ಏಕೀಕರಣಕ್ಕಾಗಿ ಒತ್ತಾಯಿಸಿದರು. ಇವರ ನೆನಪಿಗಾಗಿ 'ಯುವ ದಿವಸ್' ಅನ್ನು ದೇಶದ ಯುವಕರು ಉತ್ತಮ ವ್ಯಕ್ತಿಯಾಗಲು, ದೇಶದ ಅಭಿವೃದ್ಧಿಗಾಗಿ ಶ್ರಮಿಸಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಸ್ವಾಮಿ ವಿವೇಕಾನಂದರು ಜನವರಿ 12,1863 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಇತರ ಸನ್ಯಾಸಿಗಳಂತೆ ಇರಲಿಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಕರ ದನಿಯಾದರು. ಜಾಗತಿಕ ಮಟ್ಟದಲ್ಲಿ ಅವರ ಸಾಧನೆಗಳು ಭಾರತದ ಹೆಸರನ್ನು ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದವು. ಇದು ಆಧ್ಯಾತ್ಮಿಕತೆಯ ಭೂಮಿಯಾಗಿ ಭಾರತದ ಚಿತ್ರಣವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು. ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಅವರು ಅಪಾರ ಗಮನಹರಿಸಿದರು. ಬ್ರಿಟಿಷರ ವಿರುದ್ಧ ಯುವ ಪೀಳಿಗೆ ಸ್ವಾತಂತ್ರ್ಯ ಪಡೆಯಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾಮಿ ವಿವೇಕಾನಂದರು ತತ್ವಶಾಸ್ತ್ರ, ಧರ್ಮ, ಸಾಹಿತ್ಯ, ವೇದಗಳು, ಪುರಾಣಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ವಿವೇಕಾನಂದರ ಮರಣದ ನಂತರ, ಅಂದರೆ 1984ರಲ್ಲಿ ಭಾರತ ಸರ್ಕಾರವು ಅವರನ್ನು ಗೌರವಿಸಲು ಮತ್ತು ಅವರ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರ ಜನ್ಮದಿನವಾದ ಜನವರಿ 12 ಅನ್ನು 'ರಾಷ್ಟ್ರೀಯ ಯುವ ದಿನ' ವೆಂದು ಘೋಷಿಸಿತು. 1985 ರಿಂದ ಭಾರತದಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು ಮಾತನಾಡಿ, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಯುವಜನರಲ್ಲಿ ಬಿತ್ತುವ ಮಹತ್ತರವಾದ ಮಹತ್ವವನ್ನು ರಾಷ್ಟ್ರೀಯ ಯುವ ದಿನವು ಹೊಂದಿದೆ. ವಿವೇಕಾನಂದರ ಜೀವನ ಮತ್ತು ಬೋಧನೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವ ಉತ್ತಮ ಮೂಲವಾಗಿವೆ. ಜಗತ್ತನ್ನು ಗೆಲ್ಲುವ ಅತ್ಯುತ್ತಮ ಅಸ್ತ್ರ ಶಾಂತಿ ಮತ್ತು ಶಿಕ್ಷಣ ಎಂದು ಅವರು ನಂಬಿದ್ದರು ಎಂದರು.
ಪ್ರಾಸ್ತಾವಿಕ ಭಾಷಣವನ್ನು ವಿವೇಕಾನಂದ ಡ್ರೈವಿಂಗ್ ಶಾಲೆಯ ಎಸ್ ಬಿ ರಾಜೇಶ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಚೇತನ ಸಮೂಹ ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿರವರು ಮಾತನಾಡಿದರು.
ಕಾರ್ಯಕ್ರಮದ ಶುರುವಿನಲ್ಲಿ ನಾಡನ್ನಗಲಿದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮತ್ತು ಲೇಖಕಿ ನಾಡೋಜ ಸಾರಾ ಅಬೂಬಕ್ಕರ್ ಅವರಿಗೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಶರಣು ಸಮರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಭಾಸ್ಕರ, ಮು.ಶಿ. ಅಕ್ಬರ್, ಸಂತೋಷ, ತೇಜಸ್ವಿನಿ, ದೇವರಾಜು, ಅರುಣ, ಜ್ಯೋತಿ ಲಿಂಗಯ್ಯ, ಲೋಕೇಶ, ರವಿ, ಕವಿತಾ, ಕುಮಾರ, ಮಹದೇವಸ್ವಾಮಿ, ಕಾಲೇಜು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳಿದ್ದರು.