ತಿರುವನಂತಪುರಂ(ಕೇರಳ) : ದೇಶದಲ್ಲೇ ಪ್ರಥಮವಾಗಿ ಕೇರಳ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಎಲ್ಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ಮತ್ತು ಹೆರಿಗೆ ರಜೆಯನ್ನು ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಹೇಳಿದ್ದಾರೆ.
ಸಿಎಂ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ಸರ್ಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ಸರ್ಕಾರದ ಇಂತಹ ಮಹಿಳಾ ಪರವಾದ ನಿರ್ಧಾರ ತೆಗೆದುಕೊಂಡಿರುವುದು ಇಡೀ ದೇಶದಲ್ಲಿ ಇದೇ ಮೊದಲು. ಇದು ಸಮಾಜದಲ್ಲಿ ಲಿಂಗ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಎಡ ಸರ್ಕಾರದ ಬದ್ಧತೆಯ ಸೂಚನೆಯಾಗಿದೆ ಎಂದು ಅವರು ಹೇಳಿದರು.
‘ಮತ್ತೊಮ್ಮೆ, ಕೇರಳವು ರಾಷ್ಟ್ರಕ್ಕೆ ಮಾದರಿಯಾಗಿದೆ. ನಮ್ಮ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿರುವ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಮುಟ್ಟಿನ ಮತ್ತು ಹೆರಿಗೆ ರಜೆಗಳನ್ನು ನೀಡಲಾಗುವುದು. ಲಿಂಗ-ನ್ಯಾಯ ಸಮಾಜವನ್ನು ಸಾಕಾರಗೊಳಿಸುವ ಎಲ್‌ಡಿಎಫ್ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
*ಋತುಸ್ರಾವವು ಸಾಮಾನ್ಯ ಜೈವಿಕ* ಪ್ರಕ್ರಿಯೆಯಾಗಿದ್ದರೂ, ಮಹಿಳೆಯರಲ್ಲಿ ಮಾನಸಿಕ ಒತ್ತಡ ಮತ್ತು ದೈಹಿಕ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಹಾಜರಾತಿ ಅಗತ್ಯದಲ್ಲಿ ವಿದ್ಯಾರ್ಥಿನಿಯರಿಗೆ ಶೇಕಡಾ ಎರಡರಷ್ಟು ಸಡಿಲಿಕೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಇಲಾಖೆಗೆ ಒಳಪಡುವ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ರಾಜ್ಯ ಸರ್ಕಾರವು ಇಂತಹ ಮಹಿಳಾ ಪರ ನಿರ್ಧಾರವನ್ನು ದೇಶದಲ್ಲೇ ಮೊದಲ ಬಾರಿಗೆ ತೆಗೆದುಕೊಂಡಿದೆ. 18 ವರ್ಷ ಪೂರೈಸಿದ ವಿದ್ಯಾರ್ಥಿನಿಯರಿಗೆ ಗರಿಷ್ಠ 60 ದಿನಗಳ ಹೆರಿಗೆ ರಜೆ ನೀಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಅವರು ಹೇಳಿದರು.