ಬೆಳಗಾವಿ: ಹುಬ್ಬಳ್ಳಿ ಕಿಮ್ಸ್ ಮಾದರಿಯಲ್ಲಿ ಬೆಳಗಾವಿಯ ಬಿಮ್ಸ್ ಬೆಳೆಯಬೇಕೆಂಬ ಉದ್ದೇಶ ನನ್ನದು. ಆ ದೂರದೃಷ್ಟಿ ಇಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡಬೇಕು. ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ಆಸ್ಪತ್ರೆ ನಿರ್ದೇಶಕರ ಮೇಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಇಂದು ಸಂಜೆ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 100 ಹಾಸಿಗೆಗಳ ತಾಯಿ - ಮಕ್ಕಳ ಆಸ್ಪತ್ರೆ ಹಾಗೂ 50 ಬೆಡ್ ಗಳ ಐಸಿಯು ಘಟಕ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು
ಬೆಳಗಾವಿ ಬೆಳೆಯುತ್ತಿರುವ ನಗರ. ಈ ಭಾಗದಲ್ಲಿ ಸರ್ಕಾರದ ಒಂದು ವೈದ್ಯಕೀಯ ಸಂಸ್ಥೆ ಹಾಗೂ ಕಾಲೇಜು ಇರಬೇಕೆನ್ನುವ ಬೇಡಿಕೆ ಬಹಳ ದಿನಗಳಿಂದಲೂ ಇದ್ದರೂ ಸಾದ್ಯವಾಗಿರಲಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜ್ ಅಗತ್ಯ ಇತ್ತು. ಈ ಸಂಸ್ಥೆಯಲ್ಲಿ ನಿರ್ದೇಶಕರು ಮತ್ತು ಸಿಬ್ಬಂದಿ ನಡುವೆ ಹೊಂದಾಣಿಕೆ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಕೆಎಲ್ ಇ ಸಂಸ್ಥೆಯವರು ಸಾರ್ವಜನಿಕ ಆಸ್ಪತ್ರೆ ಸೇವೆ ಸಲ್ಲಿಸಿದರು. ಅವರು ಅಭಿನಂದನೆಗೆ ಅರ್ಹರು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಒಬ್ಬರು ಐಎಎಸ್ ಅಧಿಕಾರಿ ಪ್ರಾಮಾಣಿಕವಾಗಿದ್ದರೆ ಏನೆಲ್ಲ ಸೇವೆ ಮಾಡಬಹುದು ಅನ್ನುವುದಕ್ಕೆ ಆದಿತ್ಯ ಆಮ್ಲಾ ಬಿಸ್ವಾಸ್ ಆಡಳಿತ ಉದಾಹರಣೆ. ಅದಕ್ಕಾಗಿ ಎಲ್ಲ ವಿಭಾಗಗಳನ್ನೂ ಒಳಗೊಂಡು ಇದು ಪ್ರಮುಖ ಆರೋಗ್ಯ ಕೇಂದ್ರ ಆಗಲಿದೆ. ಅವರಿಗೆ ಸಹಾನುಭೂತಿ ನೀಡಬೇಕು. ರೋಗಿಗಳು ದೇವರಿದ್ದಂತೆ. ಸೃಷ್ಟಿಯಲ್ಲಿ ಭಗವಂತನನ್ನು ಹೊರತುಪಡಿಸಿ ಮಾನವನ ನೋವನ್ನು ಕಡಿಮೆ ಮಾಡುವ ಗುಣ ಇರೋದು ವೈದ್ಯರಿಗೆ ಮಾತ್ರ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಳ್ಳಿಗರು ಹಣ ಇಲ್ಲದೇ ಆಸ್ಪತ್ರೆಗೆ ಹೋಗುವುದಿಲ್ಲ. ಮಹಿಳೆಯರಿಗೆ ಎದೆ ನೋವು ಕಾಣಿಸಿಕೊಂಡರೆ ಎರಡು ದಿನ ಅಮೃತಾಂಜನ ಹಚ್ಚಿಕೊಂಡು ಮಲಗಿಕೊಂಡು ಬಿಡುತ್ತಾರೆ. ಅವರಿಗೆ ಸೂಕ್ತ ಸಮಯದಲ್ಲಿ ಆರೋಗ್ಯ ಸೇವೆ ದೊರೆತರೆ ಅವರ ಆರೋಗ್ಯ ಸುಧಾರಿಸುತ್ತದೆ. ಹೊಲದಲ್ಲಿ ಕೂಲಿ ಮಾಡುವ ತಾಯಿ ತನ್ನ ಮಗುವಿಗೆ ಯಾವುದೇ ಪೌಷ್ಟಿಕ ಆಹಾರ ಕೊಡುವುದಿಲ್ಲ. ತಾಯಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆತರೆ ಬಹಳಷ್ಟು ರೋಗಗಳು ದೂರವಾಗುತ್ತದೆ. ಅಪೌಷ್ಟಿಕತೆ ದೇಶಕ್ಕೆ ದೊಡ್ಡ ಮಟ್ಟದ ಸಮಸ್ಯೆಗೆ ಕಾರಣಗಲಿದೆ. ಪೌಷ್ಟಿಕತೆಗೆ ನಮ್ಮ ಸರ್ಕಾರ ವಿಶೇಷ ಆಹಾರ ನೀಡಲಾಗುತ್ತಿದೆ. ಆರು ಜಿಲ್ಲೆಗಳಲ್ಲಿ ಅಪೌಷ್ಟಿಕತೆ ಇದೆ. ಅದು ರಾಜ್ಯದ ಸರಾಸರಿ ಬರುವವರೆಗೂ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಹಲವಾರು ಯೋಜನೆಯನ್ನು ಪ್ರಥಮ ಬಾರಿ ಮಾಡುತ್ತಿದ್ದೇವೆ. ಸಿಎಂ ಆರೋಗ್ಯ ತಪಾಸಣೆ ಯೋಜನೆಯಡಿ 5 ಜಿಲ್ಲೆಗಳಲ್ಲಿ ಮೊಬೈಲ್ ಆರೋಗ್ಯ ಚೆಕ್ ಅಪ್ ವಾಹನ ಮೂಲಕ ತಪಾಸಣೆ ಮಾಡಲಾಗುತ್ತದೆ. 60 ವರ್ಷ ಮೀರಿದ ಎಲ್ಲರಿಗೂ ಉಚಿತ ಕಣ್ಣಿನ ತಪಾಸಣೆ ಮಾಡಿ ಕನ್ನಡಕ ನೀಡಲಾಗುತ್ತದೆ. ಬಡವರಿಗೆ ಬೆಳಕನ್ನು ಕೊಡಬೇಕೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ಹುಟ್ಟು ಕಿವುಡರಿಗೆ ವಿಶೇಷ ಸಾಧನವನ್ನು ಇಂಪ್ಲಾಂಟ್ ಮಾಡುವ 500 ಕೋಟಿ ರೂ ಮೊತ್ತದ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ರೂಗಳನ್ನು ಮೆಡಿಕಲ್ ಕಾಲೇಜು ನಡೆಸಲು ಹೂಡಿಕೆ ಮಾಡುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗಿದೆ. ಸರ್ಕಾರ ಒಬ್ಬ ವೈದ್ಯಕೀಯ ವಿದ್ಯಾರ್ಥಿಗೆ 5-10 ಹತ್ತು ಲಕ್ಷ ಖರ್ಚು ಮಾಡುತ್ತೇವೆ. ಆದರೆ ವೈದ್ಯಕೀಯ ಶಿಕ್ಷಣ ಮುಗಿದ ಮೇಲೆ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ಆದ್ರೆ ಜನ ಸಾಮಾನ್ಯರು ಜ್ವರ ಬಂದ್ರೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಬೇಕು ಅನ್ನುವಂತಹ ಪರಿಸ್ಥಿತಿ ಬಂದಿದೆ. ಅಮೆರಿಕಾ ಮಾದರಿ ವೈದ್ಯಕಿಯ ವ್ಯವಸ್ಥೆ ಇಲ್ಲೂ ಜಾರಿಗೆ ಬರುತ್ತಿದೆ. ನಮ್ಮ ದೇಶಕ್ಕೆ ಇದು ಒಳ್ಳೆಯ ಬೆಳವಣಿಗೆಯಲ್ಲ. ನಮ್ಮ ದೇಶದ 130 ಕೋಟಿ ಜನರಲ್ಲಿ ಬಡವರು, ಅನಕ್ಷರಸ್ಥರು ಇದ್ದಾರೆ. ವಿದ್ಯಾವಂತರು ಬಡವರ ಸೇವೆ ಮಾಡುವ ಮೂಲಕ ಒಳ್ಳೆಯ ಕೆಲಸ ಮಾಡಬೇಕು. ಆಗ ಇಡೀ ನಾಡು ಸುಧಾರಿಸುತ್ತದೆ. ಆರೋಗ್ಯ ಕರ್ನಾಟಕವನ್ನು ನೀವು ನಿಜ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಮತ್ತು ಸಚಿವರಾದ ಗೋವಿಂದ ಕಾರಜೋಳ, ಡಾ. ಸುಧಾಕರ್, ಶಾಸಕ ಅನಿಲ್ ಬೆನಕೆ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.