ಬೆಳಗಾವಿ ಸುವರ್ಣಸೌಧ,ಡಿ.28(ಕರ್ನಾಟಕ ವಾರ್ತೆ): ಕಾರ್ಮಿಕರ ಮಕ್ಕಳಿಗೆ ನೀಡುವ ಬಸ್‍ಪಾಸ್ ಈ ಹಿಂದೆ ಬಿ.ಎಂ.ಟಿ.ಸಿ.ಯಲ್ಲಿ ಮಾತ್ರ ಲಭ್ಯವಿದ್ದು ಅದನ್ನು ನಮ್ಮ ಸರ್ಕಾರ ಎಲ್ಲ ನಿಗಮಗಳಿಗೂ ವಿಸ್ತರಿಸಿದೆ. ಈಗಿರುವ 40 ಕೀ.ಮಿ. ವ್ಯಾಪ್ತಿಯನ್ನು ಹೆಚ್ಚಳ ಮಾಡಲಾಗುವುದು. ಹಾಗೂ ಕಾರ್ಮಿಕರ ಸಂಖ್ಯೆ ಅತ್ಯಧಿಕವಾಗಿದ್ದು ಎಲ್ಲರಿಗೂ ಏಕಕಾಲದಲ್ಲಿ ಸೌಲಭ್ಯ ನೀಡಲು ಆಗುವುದಿಲ್ಲ. ಹಾಗಾಗಿ ಹಂತ ಹಂತವಾಗಿ ಸೌಲಭ್ಯ ವಿಸ್ತರಿಸಲಾಗುವುದು ಎಂದರು.
ವಿಧಾನ ಮಂಡಲದಲ್ಲಿ ಬುಧವಾರ ಹುಣಸೂರು ಶಾಸಕ ಎಚ್.ಪಿ.ಮಂಜುನಾಥ ಅವರು ಕಾರ್ಮಿಕ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನಿಗಮ ಹಾಗೂ ಮಂಡಳಿ ಹಾಗೂ ಅವುಗಳ ಯೋಜನೆಗಳ ಕುರಿತು ಮತ್ತು ಕಾರ್ಮಿಕರ ಮಕ್ಕಳಿಗೆ ಬಸ ಪಾಸನ ಸಂಚಾರ ಮಿತಿಯನ್ನು ಹೆಚ್ಚಿಸಲು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು 28 ಲಕ್ಷ ಕಟ್ಟಡ ಕಾರ್ಮಿಕರಿದ್ದು ಅವರಿಗೆ ಉಚಿತವಾಗಿ ಗುರುತಿನ ಚೀಟಿಯನ್ನು ಸ್ಥಳದಲ್ಲಿಯೇ ವಿತರಿಸಲಾಗುತ್ತಿದೆ. ಅವರ ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಪ್ರಯೋಜನೆ ಪಡೆಯಬಹುದ್ದಾಗಿದ್ದು ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ 2 ಲಕ್ಷ ರೂ. ಪರಿಹಾರ ಪಡೆಯಬಹುದಾಗಿದೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ 20:40ರ ಅನುಪಾತದಲ್ಲಿ ಪ್ರತಿ ಕಾರ್ಮಿಕರಿಂದ ರೂ. 20 ಮತ್ತು ಮಾಲೀಕರಿಂದ 40 ರೂ. ನಂತೆ ವಂತಿಕೆಯನ್ನು ಪಡೆದು ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೊತ್ಸಾಹ ಧನ ಸಹಾಯ, ಕಾರ್ಮಿಕರಿಗೆ ವೈದ್ಯಕೀಯ ನೆರವು, ಕಾರ್ಮಿಕರಿಗೆ ಅಪಘಾತ ಧನ ಸಹಾಯ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ ಸೌಲಭ್ಯ, ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ, ವಾರ್ಷಿಕ ವೈದ್ಯಕೀಯ ತಪಾಸಣೆ ಶಿಬಿರ ಹಮ್ಮಿಕೊಳ್ಳುವ ಟ್ರೇಡ್ ಯೂನಿಯನ್/ಸಂಸ್ಥೆಗಳಿಗೆ ಧನಸಹಾಯ ಹಾಗೂ ವಾರ್ಷಿಕ ಕ್ರೀಡಾ ಕೂಟ ಹಮ್ಮಿಕೊಳ್ಳುವ ನೊಂದಾಯಿತ ಕಾರ್ಮಿಕ ಸಂಘಗಳಿಗೆ ಧನ ಸಹಾಯವನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ ಎಂದರು.